ಕಂಪ್ಲಿ: ಕಳೆದ ವರ್ಷ ಉತ್ತಮ ಬೆಲೆ ಸಿಕ್ಕ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿವಿಧ ತಳಿಯ ಮೆಣಸಿನಕಾಯಿ ಬೆಳೆ ಬೆಳೆದಿದ್ದು ಮಾರುಕಟ್ಟೆಯಲ್ಲಿ ದರ ಕುಸಿತದಿಂದಾಗಿ ಕಂಗಾಲಾಗಿದ್ದಾರೆ.
ತಾಲೂಕಿನ ದೇವಸಮುದ್ರ, ಮೆಟ್ರಿ, ದೇವಲಾಪುರ, ಹಂಪಾದೇವನಹಳ್ಳಿ, ಸುಗ್ಗೇನಹಳ್ಳಿ, ಕಣ್ವಿ ತಿಮ್ಮಲಾಪುರ, ನೆಲ್ಲುಡಿ, ಎಮ್ಮಿಗನೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ಬ್ಯಾಡಗಿ, ತ್ರಿಮೂರ್ತಿ, ಗುಂಟೂರು ಮೆಣಸಿನಕಾಯಿ ತಳಿಗಳನ್ನು ನಾಟಿ ಮಾಡಿದ್ದು ಈಗಾಗಲೇ ಹಸಿ ಮೆಣಸಿನಕಾಯಿಗಳನ್ನು ಬಿಡಿಸುತ್ತಿದ್ದಾರೆ. ಆದರೆ ಆರಂಭದಲ್ಲಿ ಕೆಜಿ ಒಂದಕ್ಕೆ 25ರಿಂದ 27 ರೂಗಳಿದ್ದ ಬೆಲೆ ಎರಡನೇ ಸಲ ಕಾಯಿಗಳನ್ನು ಬಿಡಿಸುವ ಸಮಯಕ್ಕೆ ಕೆಜಿಗೆ 12ರಿಂದ 13 ರೂಗಳಿಗೆ ಇಳಿಕೆಯಾಗಿದ್ದು ಮೆಣಸಿನಕಾಯಿ ಬಿಡಿಸಿದ ಕೂಲಿಯೂ ಬರುತ್ತಿಲ್ಲವೆಂದು ರೈತರು ದೂರುತ್ತಿದ್ದಾರೆ.
ದೇವಸಮುದ್ರ ಗ್ರಾಮದ ಪ್ರಗತಿಪರ ರೈತ ಜಿ. ಮಲ್ಲಿಗೌಡ ಅವರು ತಮ್ಮ ಎರಡು ಎಕರೆಯಲ್ಲಿ, ಗಣೇಶ್ 2 ಎಕರೆಯಲ್ಲಿ ಹಾಗೂ ಇತರೆ ರೈತರು ಸುಮಾರು 50ರಿಂದ 60 ಎಕರೆ ಪ್ರದೇಶದಲ್ಲಿ ತ್ರಿಮೂರ್ತಿ ತಳಿಯ ಮೆಣಸಿನಕಾಯಿ ಬೆಳೆ ಬೆಳೆದಿದ್ದಾರೆ. ಈಗಾಗಲೇ ಎಕರೆಗೆ 15ರಿಂದ 20 ಸಾವಿರ ರೂಗಳನ್ನು ವ್ಯಯಿಸಿದ್ದು ಎರಡನೇ ಸಲ ಹಸಿ ಮೆಣಸಿನಕಾಯಿಗಳನ್ನು ಬಿಡಿಸಿದ್ದು ಎಕರೆಗೆ 30ರಿಂದ 35 ಕ್ವಿಂಟಲ್ ಫಸಲು ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಇವುಗಳನ್ನು ಕೇಳುವವರೇ ಇಲ್ಲ. 12ರಿಂದ 13 ರೂಗಳಿಗೆ ಕೆಜಿಯಂತೆ ಕೇಳುತ್ತಿದ್ದಾರೆ. ಈ ಬೆಲೆಗೆ ಮಾರಿದರೆ ಕೂಲಿ ಕಾರ್ಮಿಕರ ಕೂಲಿಯೂ ದಕ್ಕುವುದಿಲ್ಲವೆಂದು ತಮ್ಮ ನೋವನ್ನು ತೋಡಿಕೊಂಡರು.
ಹಸಿ ಮೆಣಸಿನಕಾಯಿ ಬಹುತೇಕ ಚಿಲ್ಲಿ ಸಾಸ್ ತಯಾರಿಸಲು ನಮ್ಮ ಜಮೀನಿಗೆ ಬಂದು ಖರೀದಿ ಮಾಡುತ್ತಿದ್ದರು. ಆದರೆ ನಾವೇ ಮಾರುಕಟ್ಟೆಗೆ ಒಯ್ದರೂ ಕೇಳುವವರೂ ಇಲ್ಲದಂತಾಗಿದೆ,ವಿಪರ್ಯಾಸವೆಂದರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಒಂದು ಕೆಜಿ ಮೆಣಸಿನಕಾಯಿಯನ್ನು 30ರಿಂದ 40 ರೂಗಳಿಗೆ ಮಾರಾಟ ಮಾಡುತ್ತಿದ್ದಾರೆ. ರೈತರಿಗೆ ಮಾತ್ರ ಈ ಬೆಲೆ ದಕ್ಕುತ್ತಿಲ್ಲವೆಂದು ದೂರಿದರು.
ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಎರಡು ಎಕರೆಯಲ್ಲಿ ತ್ರಿಮೂರ್ತಿ ತಳಿಯ ಮೆಣಸಿನಕಾಯಿ ಬೆಳೆದಿದ್ದೇನೆ. ಈಗಾಗಲೇ 15ರಿಂದ 20 ಸಾವಿರ ವ್ಯಯಿಸಿದ್ದು, ಎರಡು ಸಲ ಹಸಿ ಮೆಣಸಿನಕಾಯಿ ಬಿಡಿಸಿದ್ದು ಸುಮಾರು 90 ಕ್ವಿಂಟಲ್ ಫಸಲು ಬಂದಿದೆ. ಆದರೆ ಸೂಕ್ತ ಬೆಲೆ ಸಿಗುತ್ತಿಲ್ಲ.
–ಜಿ. ಮಲ್ಲಿಗೌಡ, ರೈತ, ದೇವಸಮುದ್ರ
ಕಳೆದ ವರ್ಷ ಹಸಿ ಹಾಗೂ ಒಣ ಮೆಣಸಿನ ಕಾಯಿಗೆ ಉತ್ತಮ ಬೆಲೆ ದೊರೆತಿದ್ದರಿಂದ ತಾಲೂಕಿನಲ್ಲಿ ಬಹುತೇಕ ರೈತರು ಇದೇಬೆಳೆಯನ್ನು ಬೆಳೆದಿರುವುದರಿಂದ ಮತ್ತು ಉತ್ತಮ ಇಳುವರಿಯೂ ಇರುವುದರ ಜೊತೆಗೆ ಮಾರುಕಟ್ಟೆಯಲ್ಲಿ ಅಧಿಕ ಪ್ರಮಾಣದಲ್ಲಿ ಮೆಣಸಿನಕಾಯಿ ಬರುತ್ತಿರುವುದರಿಂದ ಬೆಲೆಯಲ್ಲಿ ಕುಸಿತವಾಗಿದೆ.
–ಎಂ.ಎಂ.ಶಿವಕುಮಾರ್, ಸಹಾಯಕ ತೋಟಗಾರಿಕಾ ಅಧಿಕಾರಿ
-ಜಿ. ಚಂದ್ರಶೇಖರಗೌಡ