Advertisement

ಡ್ರೋನ್‌ ಆತಂಕ?

12:32 AM Sep 02, 2021 | Team Udayavani |

ಬೆಂಗಳೂರು: ಜಾಲಹಳ್ಳಿ  ವಾಯು ನೆಲೆ ಬಳಿ ಇತ್ತೀಚೆಗೆ ರಾತ್ರಿ ವೇಳೆ ಆಗಂತುಕ ಡ್ರೋನ್‌ಗಳು ಹಾರಾಡಿವೆ ಎಂಬ ಸ್ಫೋಟಕ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

Advertisement

ಇತ್ತೀಚಿನ ದಿನಗಳಲ್ಲಿ 2 ಬಾರಿ ಇಂತಹ  ಘಟನೆ ಸಂಭವಿಸಿರುವ ಕುರಿತು ವಾಯು ನೆಲೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಮತ್ತು ರಾಜ್ಯ ಸರಕಾರಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿವೆ. ತಿಂಗಳ ಹಿಂದೆ ಕಾಶ್ಮೀರ ಗಡಿ ಭಾಗದ ವಾಯುಸೇನೆ ಕೇಂದ್ರದ ಬಳಿ ಡ್ರೋನ್‌ ದಾಳಿ ನಡೆಸಿರುವುದು ಮತ್ತು ಪಾಕ್‌ ಗಡಿಯಿಂದ ಮತ್ತೆ ಮತ್ತೆ ಡ್ರೋನ್‌ಗಳ ಹಾರಾಟದ ಬಗ್ಗೆ ಮಾಹಿತಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಪ್ರಾಮುಖ್ಯ ಪಡೆದುಕೊಂಡಿದೆ. ಈ ಬಗ್ಗೆ ಬಹಿರಂಗ ಹೇಳಿಕೆಗೆ ಅಧಿಕಾರಿಗಳು ನಿರಾಕರಿಸಿದ್ದಾರೆ.

ಹಲವರ ವಿಚಾರಣೆ:

ಸ್ಥಳೀಯವಾಗಿ ಅಧಿಕೃತ ಡ್ರೋನ್‌ಗಳನ್ನು ಬಳಸುವ ಸಂಸ್ಥೆಗಳು ಮತ್ತು ಡ್ರೋನ್‌ ಕೆಮರಾ ಹೊಂದಿರುವವರನ್ನು ವಿಚಾರಿ ಸಿದ್ದು, ಅವರಾರೂ ಹಾರಿಸಿರುವುದು  ಖಚಿತಪಟ್ಟಿಲ್ಲ. ವಿದ್ಯಾರ್ಥಿಗಳ ಪ್ರಯೋಗಾರ್ಥ ಹಾರಿಸಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಡ್ರೋನ್‌ ನಿಯಂತ್ರಣ ಅಗತ್ಯ :

Advertisement

ಡ್ರೋನ್‌ಗಳ ಅನಧಿಕೃತ ಬಳಕೆ ಭದ್ರತೆಗೆ ಹೆಚ್ಚು ಅಪಾಯಕಾರಿ.  ಮಾನವರಹಿತ ಈ ಉಪಕರಣಗಳ ಕಾಟವನ್ನು ಅಮೆರಿಕದಂತಹ ರಾಷ್ಟ್ರ ಗಳೇ ಹಿಮ್ಮೆಟ್ಟಿಸಲು ತ್ರಾಸಪಡುತ್ತಿವೆ. ಮುಖ್ಯವಾಗಿ ವಿದೇಶಗಳಲ್ಲಿ ಹೌದಿ ಉಗ್ರಗಾಮಿಗಳು/ ಇರಾನ್‌ ಬೆಂಬಲಿತ ಸೌದಿ ಅರೇಬಿಯಾದ ಪೆಟ್ರೋಲ್‌/ ಅನಿಲ ಸ್ಥಾವರಗಳ ಮೇಲೆ ಡ್ರೋನ್‌ ಮೂಲಕ ದಾಳಿ ಮಾಡಿ ಮಿಲಿಯಗಟ್ಟಲೆ ನಷ್ಟ ಮಾಡಿರುವುದು, ಮುಖ್ಯ ವಾಗಿ ಅರ್‌ಮಾಕೋ ತೈಲ ಸ್ಥಾವರ ಗಳಿಗೆ ಮಿಸೈಲ್‌ ದಾಳಿ ನಡೆಸಿದರೂ ಡ್ರೋನ್‌ಗಳ ಬಳಕೆಯನ್ನು ಅಲ್ಲಿನ ರಕ್ಷಣ ವ್ಯವಸ್ಥೆ ತಳ್ಳಿಹಾಕಿಲ್ಲ. ನಮ್ಮಲ್ಲಿ ಅಂತಹ ವಾತಾವರಣ ಇಲ್ಲದೇ ಇದ್ದರೂ ಪಾಕಿಸ್ಥಾನದಂತಹ ದೇಶಗಳು ಇಲ್ಲೇ ಕಣ್ಣಿಟ್ಟಿರುವುದರಿಂದ ಅಪಾಯ ಎದುರಿಸಲು ಡ್ರೋನ್‌ಗಳ ನಿಯಂತ್ರಣ ದಂತಹ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ  ಎಂದು ಹಿರಿಯ ಪೊಲೀಸ್‌ ಅಧಿಕಾರಿ ಯೊಬ್ಬರು ತಿಳಿಸಿದರು.

ಪರವಾನಿಗೆ ಗೊಂದಲ :

ಡ್ರೋನ್‌ ಹಾರಾಟಕ್ಕೆ ಸ್ಥಳೀಯ ಪೊಲೀಸರು ಪರವಾನಿಗೆ ಕೊಡಬೇಕೇ, ಗುಪ್ತಚರ ಇಲಾಖೆ ಕೊಡಬೇಕೇ ಎಂಬ ಗೊಂದಲವಿದೆ. ಪೊಲೀಸ್‌ ಮೂಲಗಳ ಪ್ರಕಾರ ಗುಪ್ತಚರ ಇಲಾಖೆ ನೀಡಬೇಕು. ಆದರೆ ಸರಕಾರದ ಯೋಜನೆಗಳಿದ್ದರೆ ಸರಕಾರದಿಂದಲೇ ನೇರವಾಗಿ ಅನುಮತಿ ಪಡೆಯಲಾಗುತ್ತಿದೆ. ಇತರ ಕಾರ್ಯಕ್ರಮಗಳ ಚಿತ್ರೀಕರಣ ಸೆರೆ ಹಿಡಿಯಲು ಪರವಾನಿಗೆಯನ್ನು ಸ್ಥಳೀಯ ಪೊಲೀಸರು ಕೊಡುತ್ತಿಲ್ಲ. ಆದರೂ ಕೆಲವೆಡೆ ಡ್ರೋನ್‌ ಹಾರಾಟ ನಡೆಯುತ್ತಿದ್ದು, ಅವುಗಳಿಗೆ ಅನುಮತಿ ಕೊಡುವವರು ಯಾರು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.

ಉದಯವಾಣಿ ಕಾಳಜಿ :

  • ಸ್ಥಳೀಯವಾಗಿ ಡ್ರೋನ್‌ ಹಾರಾಟ ಕಂಡು ಬಂದಲ್ಲಿ ತತ್‌ಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ.
  • ಆ ಡ್ರೋನ್‌ಗಳು ನಿಯಮಾನುಸಾರ ಹಾರಾಡುತ್ತಿದ್ದರೂ ನಿಮಗೆ ಗೊತ್ತಿಲ್ಲದಿದ್ದರೆ ಪೊಲೀಸರಿಗೆ ಕರೆ ಮಾಡಿ ತಿಳಿಸಿ.
  • ದೊಡ್ಡ ಗಾತ್ರದ ಡ್ರೋನ್‌ಗಳಿಂದ ಹಿಡಿದು ಕೆಮರಾ ಡ್ರೋನ್‌ಗಳಾದರೂ ಸರಿ, ಸ್ಥಳೀಯ ಪೊಲೀಸರ ಪರವಾನಿಗೆ ಇಲ್ಲದಿದ್ದರೆ ಅದು ಅಕ್ರಮ.
  • ವಿದ್ಯಾರ್ಥಿಗಳು, ಸಂಶೋಧಕರು ಡ್ರೋನ್‌ಗಳನ್ನು ಬಳಸಿದರೂ ಪರವಾನಿಗೆ ಬೇಕೇ ಬೇಕು.

 

 -ನವೀನ್‌ ಅಮ್ಮೆಂಬಳ

Advertisement

Udayavani is now on Telegram. Click here to join our channel and stay updated with the latest news.

Next