ಬೆಂಗಳೂರು: ಬಿಗ್ ಬಾಸ್ ಕಾರ್ಯಕ್ರಮದ ಬಳಿಕ ಡ್ರೋನ್ ಪ್ರತಾಪ್ ಬದುಕು ಬದಲಾಗಿದೆ. ಜನ ದೊಡ್ಮನೆಯಲ್ಲಿ ಕೊಟ್ಟ ಪ್ರೀತಿ ಹೊರಗಡೆಯೂ ಪ್ರತಾಪ್ ಅವರಿಗೆ ನೀಡುತ್ತಿದ್ದಾರೆ. ಪ್ರತಾಪ್ ಹೋದ ಕಡೆಯೆಲ್ಲಾ ಅವರ ಹಿಂದೆ ಜನ ಸೆಲ್ಫಿಗಾಗಿ ಕ್ಯೂ ನಿಲ್ಲುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ -10 ನಲ್ಲಿ ರನ್ನರ್ ಅಪ್ ಆಗಿರುವ ಡ್ರೋನ್ ಪ್ರತಾಪ್, ಆ ಬಳಿಕ ನಾನಾ ಟಿವಿ ಕಾರ್ಯಕ್ರಮದ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ ಊರಿಗೆ ಹೋಗಿ ಕುಟುಂಬದೊಂದಿಗೆ ಒಂದಷ್ಟು ಸಮಯನ್ನು ಕಳೆದಿದ್ದಾರೆ.
ಬಿಗ್ ಬಾಸ್ ಬಳಿಕ ಪ್ರತಾಪ್ ಅವರು ಎಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ಎನ್ನುವುದು ಇತ್ತೀಚೆಗೆ ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚೆಗೆ ಚಾಮರಾಜ ನಗರ ಜಿಲ್ಲೆಯಲ್ಲಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಸಿಕ್ಕ ಪ್ರೀತಿ – ಪ್ರೋತ್ಸಾಹ ಯಾವ ಸೆಲೆಬ್ರಿಟಿಗೂ ಕಮ್ಮಿಯಿಲ್ಲದಂತೆ ಇತ್ತು.
ಮಾದಪ್ಪನ ದರ್ಶನಕ್ಕೆ ಬಂದ ಭಕ್ತಾಧಿಗಳು ಪ್ರತಾಪ್ ಅವರ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ಅವರೊಂದಿಗೆ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಸಾಲು ಸಾಲು ಜನರು ಫೋಟೋ, ವಿಡಿಯೋಗಾಗಿ ಬಂದರೂ ಪ್ರತಾಪ್ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು ಪೋಸ್ ನೀಡಿದ್ದಾರೆ.
ಸೆಲೆಬ್ರಿಟಿಯಂತೆ ಪ್ರತಾಪ್ ಅವರಿಗೆ ಜನ ಪ್ರೀತಿಯನ್ನು ನೀಡುತ್ತಿದ್ದಾರೆ. ಬಿಗ್ ಬಾಸ್ ಜನಪ್ರಿಯತೆಯ ಬಳಿಕ ಇದೀಗ ಪ್ರತಾಪ್ ಅವರು ʼಗಿಚ್ಚಿ ಗಿಲಿಗಿಲಿʼ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದಾರೆ.