Advertisement

ಸಂಚಾರ ದಟ್ಟಣೆ ನಿಗ್ರಹಕ್ಕೆ ಡ್ರೋಣ್‌

11:51 AM Aug 03, 2018 | Team Udayavani |

ಬೆಂಗಳೂರು: ಸಂಚಾರ ಪೊಲೀಸರಾಯ್ತು. ಸಿಸಿಟಿವಿಗಳನ್ನು ಅಳವಡಿಸಿದ್ದಾಯ್ತು, ನಗರದ ವಾಹನಗಳ ಮೇಲೆ ಇನ್ಮುಂದೆ “ಡ್ರೋಣ್‌’ ಕಣ್ಗಾವಲು ಇಡಲಿದೆ. 

Advertisement

ಹೌದು, ನಗರದ ಸಂಚಾರ ದಟ್ಟಣೆ ನಿರ್ವಹಣೆಗೆ ಈಗ ನಗರ ಪೊಲೀಸ್‌ ಇಲಾಖೆ ಡ್ರೋಣ್‌ಗಳನ್ನು ಬಳಸಲು ನಿರ್ಧರಿಸಿದ್ದು, ಒಂದೆರಡು ವಾರಗಳಲ್ಲಿ ಪ್ರಾಯೋಗಿಕವಾಗಿ ಎರಡು ಡ್ರೋಣ್‌ಗಳು ಹೆಚ್ಚು ಸಂಚಾರ ದಟ್ಟಣೆ ಇರುವ ರಸ್ತೆಗಳ ಮೇಲೆ ಹಾರಾಟ ನಡೆಸಲಿದೆ. ಇದು ಕಳುಹಿಸುವ ಮಾಹಿತಿಗಳನ್ನು ಆಧರಿಸಿ, ಪೊಲೀಸರು ಸಂಚಾರ ದಟ್ಟಣೆಯನ್ನು ನಿರ್ವಹಿಸಲಿದ್ದಾರೆ.

ಪರ್ಯಾಯ ಮಾರ್ಗ ಸೂಚಿಗೆ ಬಳಕೆ: ನಗರದ “ಪೀಕ್‌ ಅವರ್‌’ನಲ್ಲಿ ಅಥವಾ ಜಾಥಾ, ಬೃಹತ್‌ ಪ್ರತಿಭಟನೆ ಮತ್ತಿತರ ತುರ್ತು ಸಂದರ್ಭಗಳಲ್ಲಿ ಉಂಟಾಗುವ ವಾಹನ ದಟ್ಟಣೆ ನಿರ್ವಹಣೆಗೆ ಈ ಡ್ರೋಣ್‌ಗಳನ್ನು ಬಳಸಿ, ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸುವ ಉದ್ದೇಶಿಸಲಾಗಿದೆ.

ಈ ಸಂಬಂಧ ಈಗಾಗಲೇ ಪೊಲೀಸ್‌ ಇಲಾಖೆ ಟೆಂಡರ್‌ ಅವಾರ್ಡ್‌ ಮಾಡಿದೆ. ವಾರದಲ್ಲಿ ಡ್ರೋಣ್‌ಗಳನ್ನು ಪೂರೈಸಲಾಗುವುದು ಎಂದು ಓಮ್ನಿ ಪ್ರಸೆಂಟ್‌ ರೋಬೊಟ್‌ ಟೆಕ್‌ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಕಾಶ್‌ ಸಿನ್ಹ ಮಾಹಿತಿ ನೀಡಿದರು. 

ಮಾಹಿತಿ ರವಾನೆ: ಡ್ರೋಣ್‌ ಸಹಾಯದಿಂದ ಉದ್ದೇಶಿತ ರಸ್ತೆಯಲ್ಲಿ ವಾಹನಗಳ ಸಾಂದ್ರತೆ ಎಷ್ಟಿದೆ? ಸಾಂಚಾರ ವೇಗವೆಷ್ಟು? ಅತಿ ವೇಗವಾಗಿ ಸಂಚರಿಸುವ ವಾಹನಗಳು, ದೋಷಪೂರಿತ ನಂಬರ್‌ ಪ್ಲೇಟ್‌ಗಳ ಬಗ್ಗೆ ಚಿತ್ರಸಹಿತ ಮಾಹಿತಿ ನೀಡಲಿದೆ. ಈ ರಿಯಲ್‌ ಟೈಮ್‌ ದತ್ತಾಂಶಗಳು ಕೆಲವೇ ಕ್ಷಣಗಳಲ್ಲಿ ಪೊಲೀಸ್‌ ನಿಯಂತ್ರಣ ಕೊಠಡಿಗೆ ರವಾನೆ ಆಗಲಿದೆ. ಅದನ್ನು ಆಧರಿಸಿ ಪೊಲೀಸರು ಕ್ರಮ ಕೈಗೊಳ್ಳಬಹುದಾಗಿದೆ.

Advertisement

ಹಾರಾಟಕ್ಕೆ ಅನುಮತಿ ಅಗತ್ಯ: ಪೊಲೀಸರು ಅತಿ ಹೆಚ್ಚು ದಟ್ಟಣೆ ಇರುವ ವೃತ್ತಗಳನ್ನು ಗುರುತಿಸಿ, ನಮಗೆ ಸೂಚನೆ ನೀಡುತ್ತಾರೆ. ಅದರಂತೆ ನಮ್ಮ ಸಿಬ್ಬಂದಿ ಅಂತಹ ಕಡೆ ಡ್ರೋಣ್‌ ಆಪರೇಟ್‌ ಮಾಡಲಿದ್ದಾರೆ. ಗರಿಷ್ಠ 60 ಮೀಟರ್‌ ಎತ್ತರದವರೆಗೆ ನಾಗರಿಕ ವಿಮಾನದ ಮಹಾನಿರ್ದೇಶನಾಲಯ (ಡಿಜಿಸಿಎ) ಅನುಮತಿ ನೀಡಿದೆ.

ನಗರದಲ್ಲಿ ಡ್ರೋಣ್‌ ಹಾರಾಟಕ್ಕೆ ಸ್ಥಳೀಯ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ಇಲಾಖೆ ಅನುಮತಿ ಅಗತ್ಯವಿದೆ. ಅಷ್ಟಕ್ಕೂ ಡ್ರೋಣ್‌ ಆಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆ ಅನುಸರಿಸುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಸುಮಾರು 20 ರಾಜ್ಯಗಳಲ್ಲಿ ಇದು ಜಾರಿಯಲ್ಲಿದೆ. ಆಂಧ್ರ ಪ್ರದೇಶದಲ್ಲಿ ಈ ವ್ಯವಸ್ಥೆಯಿಂದ ಹೆಚ್ಚು ನೆರವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. 

ಆದರೆ, ಈ ಡ್ರೋಣ್‌ಗಳು ಬ್ಯಾಟರಿ ಚಾಲಿತವಾಗಿರುವ ಕಾರಣ ಸಿಸಿಟಿವಿಗಳಂತೆ ನಿರಂತರ ಕಾರ್ಯ ಅಸಾಧ್ಯ. ಅಬ್ಬಬ್ಟಾ ಎಂದರೆ ಎರಡು ತಾಸುಗಳು ಹಾರಾಟ ನಡೆಸಬಹುದು. ಅಷ್ಟೇ ಅಲ್ಲ, ರಾತ್ರಿ ವೇಳೆಯೂ ಬಳಕೆ ಕಷ್ಟ ಸಾಧ್ಯ ಎಂಬುದು ತಜ್ಞರ ಅಭಿಮತ.

ಆಸ್ತಿ ಪತ್ತೆ ಬಳಕೆಗೆ ಚಿಂತನೆ: ನಗರದ ಆಸ್ತಿ ತೆರಿಗೆ ಸಂಗ್ರಹಕ್ಕೂ ಇದನ್ನು ಬಳಸಬಹುದು. ಇದರಿಂದ ತೆರಿಗೆ ಸಂಗ್ರಹ ಹೆಚ್ಚಳ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಪ್ರಸ್ತುತ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌)ಯ ನೆರವಿನಿಂದ ಮಾಹಿತಿ ಕಲೆಹಾಕಿ, ಅದಕ್ಕೊಂದು ಆಸ್ತಿ ನೋಂದಣಿ ಸಂಖ್ಯೆ ನೀಡಿ, ತೆರಿಗೆ ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ಯಾವೊಂದು ಆಸ್ತಿ ವಿಸ್ತೀರ್ಣ ತಿಳಿಯುತ್ತದೆ. ಆ ಕಟ್ಟಡ ಎಷ್ಟು ಮಹಡಿಗಳನ್ನು ಹೊಂದಿದೆ? ಸುತ್ತಳತೆ ಮತ್ತಿತರ ಮಾಹಿತಿ ಸಿಗುವುದಿಲ್ಲ. ಆದರೆ, ಡ್ರೋಣ್‌ ಮೂಲಕ ಈ ಮಾಹಿತಿಯನ್ನೂ ಕಲೆಹಾಕಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next