ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಲೆನೋವಾಗಿರುವ ಟ್ರಾಫಿಕ್ ಸಮಸ್ಯೆ ನಿಯಂತ್ರಿಸುವ ಸಲುವಾಗಿ ಸಂಚಾರ ಪೊಲೀಸರು ತಂತ್ರಜ್ಞಾನ ಬಳಕೆಯತ್ತ ಮುಖಮಾಡಿದ್ದು, ವಾಹನ ದಟ್ಟಣೆ ಹೆಚ್ಚಿರುವ ಸಮಯದಲ್ಲಿ (ಪೀಕ್ ಅವರ್) ನಗರದ 10 ಜಂಕ್ಷನ್‌ಗಳಲ್ಲಿ ಈ ಡ್ರೋನ್ ಕ್ಯಾಮರಾ ಬಳಸಿ ದಟ್ಟಣೆ ನಿವಾರಿಸಲು ಮುಂದಾಗಿದ್ದಾರೆ.
10 ಡ್ರೋನ್ ಕ್ಯಾಮರಾಗಳನ್ನು 10 ಸಂಚಾರ ಉಪ ವಿಭಾಗಕ್ಕೆ ನೀಡಲಾಗಿದ್ದು, ಆಯಾ ಉಪ ವಿಭಾಗ ವ್ಯಾಪ್ತಿಯ ಪ್ರಮುಖ ಜಂಕ್ಷನ್‌ಗಳಲ್ಲಿ ಕಳೆದ ಕೆಲವು ದಿನಗಳಿಂದ ಟ್ರಾಫಿಕ್ ಸಿಬ್ಬಂದಿ ಡ್ರೋನ್ ಕ್ಯಾಮೆರಾಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ನಗರದ ಪ್ರಮುಖ 10 ಜಂಕ್ಷನ್‌ನಲ್ಲಿ ಬೆಳಗ್ಗೆ ಹಾಗೂ ಸಂಜೆ ವಾಹನ ದಟ್ಟಣೆ ಹೆಚ್ಚಾಗುವ ಸಮಯದಲ್ಲಿ ಡ್ರೋನ್ ಕ್ಯಾಮರಾ ಹಾರಾಟ ನಡೆಸುವುದು ಕಂಡು ಬಂದಿದೆ. ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ಗಮನಿಸಿದ ಮೇಲೆ ಆಯಾ ವ್ಯಾಪ್ತಿಯ ಸಂಚಾರ ವಿಭಾಗದ ಪೊಲೀಸರು ಸಂಚಾರ ದಟ್ಟಣೆಗೆ ಉಂಟಾದ ಕಾರಣ ಪತ್ತೆ ಹಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಪೂರ್ವ ಸಂಚಾರ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಉದಯವಾಣಿಗೆ ತಿಳಿಸಿದ್ದಾರೆ.
ಮುಖ್ಯ ಜಂಕ್ಷನ್‌ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬರುವ ವಾಹನಗಳನ್ನು ಗಮನಿಸುವುದು, ಸಣ್ಣ ಸಣ್ಣ ರಸ್ತೆಗಳಲ್ಲಿ ವಾಹನ ನಿಲ್ಲಿಸಿರುವುದರಿಂದ ಆಗುವ ಸಂಚಾರ ದಟ್ಟಣೆ, ಪ್ರಮುಖ ಜಂಕ್ಷನ್ ಗಳ ಸಿಗ್ನಲ್‌ಗಳಲ್ಲಿ ಯಾವೆಲ್ಲಾ ಕಡೆ ಹೆಚ್ಚು ವಾಹನಗಳಿವೆ, ಯಾವ ಸಿಗ್ನಲ್ ಬೇಗ ಬಿಟ್ಟರೆ ಸಂಚಾರ ತಗ್ಗಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಈ ಡ್ರೋನ್ ಕ್ಯಾಮರಾಗಳು ನೆರವಾಗಲಿವೆ. ಸಂಚಾರ ದಟ್ಟಣೆಯಲ್ಲಿ ಸಿಕ್ಕಿಕೊಂಡ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೂ ಅನುಕೂಲವಾಗಲಿದೆ. ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ನಿಯಂತ್ರಣ ಸವಾಲು ಟ್ರಾಫಿಕ್ ಸಿಟಿ ಎಂಬ ಪದನಾಮದಿಂದಲೂ ಗುರುತಿಸಲ್ಪಡುತ್ತಿರುವ ಬೆಂಗಳೂರಿನಲ್ಲಿ ಬರೋಬ್ಬರಿ 1.10 ಕೋಟಿಗೂ ಅಧಿಕ ವಾಹನಗಳಿವೆ. ಪ್ರತಿನಿತ್ಯ ಬೆಂಗಳೂರಿನ ರಸ್ತೆಯಲ್ಲಿ 70 ಲಕ್ಷಕ್ಕೂ ಅಧಿಕ ವಾಹನಗಳು ರಸ್ತೆಗಿಳಿಯುತ್ತವೆ. ಪ್ರಮುಖ ಜಂಕ್ಷನ್‌ಗಳಲ್ಲಿ ಪೀಕ್ ಅವರ್‌ಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ಡ್ರೋನ್ ಮೂಲಕ ಸಂಚಾರ ನಿಯಂತ್ರಣ ಮಾಡುವುದು ಹೇಗೆ ?: ಯಾವ ಭಾಗದಲ್ಲಿ ಹೆಚ್ಚು ವಾಹನ ದಟ್ಟಣೆ ಇದೆ. ಯಾವ ಭಾಗದಲ್ಲಿ ಕಡಿಮೆ ವಾಹನಗಳ ಓಡಾಡುತ್ತಿವೆ ಎಂಬುದನ್ನು ಡ್ರೋನ್ ಕ್ಯಾಮ ರಾದ ಮೂಲಕ ಗಮನಿಸಿಕೊಂಡು ಅದರ ಆಧಾ ರದ ಮೇಲೆ ಸಂಚಾರ ಠಾಣೆ ಸಿಬ್ಬಂದಿ ವಾಹನ ಗಳಿಗೆ ಸಾಗಲು ಅನುವು ಮಾಡಿಕೊಡುತ್ತಿದ್ದಾರೆ. ಸಂಚಾರ ದಟ್ಟಣೆ ಅಧಿಕವಾಗಿರುವ ರಸ್ತೆಗಳಲ್ಲಿ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಇದರಿಂದ ಪ್ರಮುಖ ಜಂಕ್ಷನ್‌ಗಳಲ್ಲಿ ಹಿಂದೆ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ಕೊಂಚ ಇಳಿಕೆಯಾಗಿದೆ ಎಂಬುದು ಪ್ರತಿನಿತ್ಯ ಓಡಾಟ ನಡೆಸುವ ವಾಹನ ಸವಾರರ ಅಭಿಪ್ರಾಯ.