ಹುಬ್ಬಳ್ಳಿ: ವಾಹನ ಸವಾರರು ಇನ್ಮುಂದೆ ವಾಹನ ಕಲಿಕಾ ಹಾಗೂ ಚಾಲನಾ ಪರವಾನಗಿ ಪತ್ರ ಪಡೆಯಲು ಅಲೆದಾಡಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್‌ನಲ್ಲಿ ಆನ್‌ಲೈನ್ ಮೂಲಕ ಚಾಲನಾ ಪರವಾನಗಿ ಪತ್ರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ವಾಹನ ಕಲಿಕಾ ಹಾಗೂ ಚಾಲನಾ ಪರವಾನಗಿ ಪತ್ರ ಪಡೆಯುವವರು, ವಾಹನ ಚಾಲನೆ ಪರವಾನಗಿ ನವೀಕರಣ, ಹೆಸರು ಬದಲಾವಣೆ ಮುಂತಾದವುಗಳನ್ನು ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದು. ಕಲಿಕಾ ಪರವಾನಗಿ (ಎಲ್‌ಎಲ್‌ಆರ್) ಹಾಗೂ ಚಾಲನಾ ಪರವಾನಗಿ ಪತ್ರ (ಡಿಎಲ್) ಪಡೆಯುವವರು ಆನ್‌ಲೈನ್‌ನಲ್ಲಿ ಸಾರಿಗೆ ಇಲಾಖೆಯ ವೆಬ್‌ಸೆಟ್‌ನಲ್ಲಿ ಸಂಪೂರ್ಣ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಕೂಡಲೇ ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶ ಬರುತ್ತದೆ. ಅದರೊಂದಿಗೆ ಪಾಸ್‌ವರ್ಡ್ ಹಾಗೂ ಯಾವ ದಿನಾಂಕದಂದು ಆರ್‌ಟಿಒ ಕಚೇರಿಗೆ ಹಾಜರಾಗಬೇಕೆಂಬ ಮಾಹಿತಿ ಇರಲಿದೆ. ಅರ್ಜಿ ಸಲ್ಲಿಸುವಾಗಲೇ ಆನ್‌ಲೈನ್ ಮೂಲಕವೇ ನಿಗದಿಪಡಿಸಿದ ಹಣ ಪಾವತಿಸಬೇಕು.
ಎಜೆಂಟ್‌ರ ಗೊಂದಲವಿಲ್ಲ: ವಾಹನ ಸವಾರರು ಈ ಮೊದಲು ಸಾಮಾನ್ಯವಾಗಿ ವಾಹನ ಚಾಲನಾ ಪರವಾನಗಿ ಪತ್ರ ಪಡೆಯಬೇಕೆಂದರೆ ಕಚೇರಿಗೆ ಅಲೆದಾಡುವುದು ಇಲ್ಲವೇ ಏಜೆಂಟ್‌ರಿಗೆ ಹೆಚ್ಚಿನ ಹಣ ಕೊಟ್ಟು ಅವರ ಮೊರೆ ಹೋಗುವುದು ಸಾಮಾನ್ಯವಾಗಿತ್ತು. ಈಗ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಗಳಲ್ಲಿ “ವಾಹನ 4′ ಎಂಬ ಹೊಸ ಸಾಫ್ಟ್ವೇರ್ ಅಳವಡಿಸಲಾಗುತ್ತಿದ್ದು, ಇದರಿಂದ ವಾಹನ ಸವಾರರು ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ತಮ್ಮ ವಾಹನ ಚಾಲನಾ ಪರವಾನಗಿ ಪತ್ರ ಪಡೆಯಬಹುದಾಗಿದೆ.
ಮೊಬೈಲ್ ಮೂಲಕವೇ ಎಲ್ಲವೂ:ಆರ್‌ಟಿಒ ಇಲಾಖೆಯಲ್ಲಿ ಹೊಸದಾಗಿ ಜಾರಿಗೊಳಿಸಲಾಗುತ್ತಿರುವ ಯೋಜನೆಯಲ್ಲಿ ಆರ್‌ಟಿಒ ಅಧಿಕಾರಿ ನಿಮ್ಮ ಮನೆಗೆ ಬಂದು ಮಾಹಿತಿ ಸ್ವೀಕರಿಸಲಿದ್ದಾರೆ. ಚಾಲನಾ ಪರವಾನಗಿ ಪತ್ರ ಮಾಡಿಸುವವರಿಗೆ ಸಹಾಯವಾಣಿ ಸಂಖ್ಯೆ (ಹೆಲ್ಪ್ಲೈನ್ ನಂಬರ್) ನೀಡಲಾಗುತ್ತದೆ. ಈ ನಂಬರ್‌ಗೆ ಕರೆ ಮಾಡುವ ಮೂಲಕ ನಿಮ್ಮ ವಿಳಾಸವನ್ನು ನೋಂದಣಿ (ರಿಜಿಸ್ಟರ್) ಮಾಡಿಸಿಕೊಳ್ಳಬೇಕು. ನಂತರದ ಕೆಲ ದಿನಗಳಲ್ಲಿ ಆರ್‌ಟಿಒದ ಅಧಿಕಾರಿಯೊಬ್ಬರು ನಿಮ್ಮ ಬಳಿ ಬಂದು ನೀವು ಕೊಡುವ ಮಾಹಿತಿಯನ್ನು ತಮ್ಮ ಮೊಬೈಲ್‌ನಲ್ಲಿ ಅಪ್‌ಲೋಡ್ ಮಾಡಿಕೊಳ್ಳುತ್ತಾರೆ ಹಾಗೂ ನಿಮಗೆ ಒಂದು ದಿನಾಂಕ ಕೊಡುತ್ತಾರೆ. ನಿಗದಿಯಾದ ದಿನ ಹತ್ತಿರದ ಆರ್‌ಟಿಒ ಕಚೇರಿಗೆ ಹೋಗಿ ಟ್ರಯಲ್ (ಪ್ರಯೋಗ) ನೀಡಬೇಕಾಗುತ್ತದೆ. ನೀವು ಟ್ರಯಲ್ ಮಾಡಿದ್ದು ಸರಿಯಾದರೆ ನಿಮಗೆ ಕಲಿಕಾ ಲೈಸೆನ್ಸ್ ದೊರೆಯುತ್ತದೆ. ನಿಮ್ಮ ಮನೆಗೆ ಪೋಸ್ಟ್ ನಲ್ಲಿ ಡಿಎಲ್ ಬರಲಿದೆ.
“ವಾಹನ4′ ವೆಬ್ ಆಧಾರಿತ: ಆರ್‌ಟಿಒ ಕಚೇರಿಗಳಲ್ಲಿ ಈ ಮೊದಲು ವಾಹನ-1 ಸಾಫ್ಟ್‌ವೇರ್ ಇತ್ತು. ಈಗ ಆರ್‌ಟಿಒ ಕಚೇರಿಗಳಲ್ಲಿ ವಾಹನ-4 ಅಪ್‌ಗ್ರೇಡ್ ಮಾಡಲಾಗುತ್ತಿದೆ. ವಾಹನ ಸವಾರರು ತಾವು ಸಲ್ಲಿಸಿದ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ತಮ್ಮ ಮೊಬೈಲ್‌ನಲ್ಲಿಯೇ ಪಡೆದುಕೊಳ್ಳಬಹುದು. ಅನ್‌ಲೈನ್‌ನಲ್ಲಿಯೇ ಹಣ ಪಾವತಿ ಮಾಡಬೇಕು. ಹೊಸ ವಾಹನಗಳಿಗೆ ಫಾರ್ಮ್ ನಂ.20ಯನ್ನು ಸದ್ಯ ಕಚೇರಿಗಳಲ್ಲಿ ನೀಡಲಾಗುತ್ತದೆ. ಇಲ್ಲವೇ ನೆಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಂತರ ತಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂಬುದನ್ನು ಮೊಬೈಲ್‌ನಲ್ಲಿಯೇ ಪರಿಶೀಲಿಸಬಹುದು.
ಹಂತಹಂತವಾಗಿ ವಿಸ್ತರಣೆ
ಕಲಬುರಗಿ ವಲಯದಲ್ಲಿ ಈಗಾಗಲೇ ವಾಹನ-4 ಜಾರಿಯಾಗಿದೆ. ಬೆಳಗಾವಿ ವಲಯದಲ್ಲಿ ಸೆ.21ರಿಂದ ಹಂತ ಹಂತವಾಗಿ ಜಾರಿಗೊಳ್ಳಲಿದೆ. ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ ಸೇರಿ ಒಟ್ಟು 7 ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಈಗಾಗಲೇ ವಾಹನ-4 ಸಾಫ್ಟ್‌ವೇರ್ ಹೊಸದಾಗಿ ಆರಂಭವಾದ ಹಾವೇರಿ, ರಾಣಿಬೆನ್ನೂರ, ಬೈಲಹೊಂಗಲ, ರಾಮದುರ್ಗದ ಆರ್‌ಟಿಒ ಕಚೇರಿಗಳಲ್ಲಿ ಕಾರ್ಯಾರಂಭಗೊಂಡಿದೆ. ಈ ಯೋಜನೆಯು ಸೆ.24ರಿಂದ ಧಾರವಾಡ ಪಶ್ಚಿಮದಲ್ಲಿ ಹಾಗೂ ಸೆ.25ರಿಂದ ಹುಬ್ಬಳ್ಳಿ ಪೂರ್ವ ಆರ್‌ಟಿಒ ಕಚೇರಿಯಲ್ಲಿ ಕಾರ್ಯಾರಂಭವಾಗಲಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ವಲಯದಲ್ಲಿ ಯೋಜನೆ ಜಾರಿ ಸಾಧ್ಯತೆಯಿದೆ ಎಂದು ಹುಬ್ಬಳ್ಳಿ ಪೂರ್ವ ಮತ್ತು ಧಾರವಾಡ ಪಶ್ಚಿಮ ಆರ್‌ಟಿಒ ಅಧಿಕಾರಿ ರವೀಂದ್ರ ಕವಳಿ ತಿಳಿಸಿದ್ದಾರೆ.
– ಶಿವಶಂಕರ ಕಂಠಿ