Advertisement
ನಗರ, ಗ್ರಾಮಗಳ ಸ್ವಚ್ಛತಾ ಕಾರ್ಯದಲ್ಲಿ ಮಹಿಳಾ ಕಾರ್ಮಿಕರ ಪಾತ್ರ ದೊಡ್ಡದು. ಆದರೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ತ್ಯಾಜ್ಯ ವಿಲೇವಾರಿ ಜವಾಬ್ದಾರಿ ಕೂಡ ನೀಡಲಾಗುತ್ತಿದೆ. ಆಸಕ್ತ ಮಹಿಳೆಯರನ್ನು ಗುರುತಿಸಿ ಅವರಿಗೆ ಚಾಲನಾ ತರಬೇತಿ ನೀಡಲು ಸಿದ್ಧತೆಗಳು ನಡೆದಿವೆ.
Related Articles
Advertisement
ವಾಕರಸಾ ಸಂಸ್ಥೆಯಲ್ಲಿ ತರಬೇತಿ: ಇದೀಗ ಮೊದಲ ಹಂತದಲ್ಲಿ ಆಯ್ಕೆಯಾಗಿರುವ ಮಹಿಳೆಯರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದ ಮೂಲಕ ತರಬೇತಿ ದೊರೆಯಲಿದೆ. ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಧಾರವಾಡ ಜಿಪಂ-59, ಗದಗ-05, ಬಾಗಲಕೋಟೆ-12, ಬೆಳಗಾವಿ-37, ಹಾವೇರಿ-46, ಉತ್ತರ ಕನ್ನಡ-15 ಸೇರಿದಂತೆ ಒಟ್ಟು 174 ಮಹಿಳೆಯರು ಮೊದಲ ಹಂತದಲ್ಲಿ ತರಬೇತಿ ಪಡೆಯಲಿದ್ದಾರೆ.
ನಿತ್ಯ 30 ಜನರಿಗೆ ತರಬೇತಿ ದೊರೆಯಲಿದ್ದು, 30 ದಿನಗಳ ಅವಧಿಯ ತರಬೇತಿಯಾಗಿದೆ. ಆರಂಭದಲ್ಲಿ ಧಾರವಾಡ ಜಿಪಂ ನಂತರ ಇತರೆ ಜಿಪಂ ವ್ಯಾಪ್ತಿಯ ಮಹಿಳೆಯರಿಗೆ ತರಬೇತಿಗೆ ಅವಕಾಶ ಕಲ್ಪಿಸಲಾಗಿದೆ. ತರಬೇತಿಗೆ ಬರುವವರಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟ ಕೂಡ ಕೊಡಲಿದ್ದಾರೆ. ತರಬೇತಿ ಪೂರ್ಣಗೊಳಿಸಿದ ನಂತರ ಸಾರಿಗೆ ಸಂಸ್ಥೆ ವತಿಯಿಂದಲೇ ಚಾಲನಾ ತರಬೇತಿ ಪರವಾನಗಿ ಕೊಡಿಸುವ ಕೆಲಸ ಆಗುತ್ತದೆ. ಆಯ್ಕೆಯಾದ ಮಹಿಳೆಯರಿಗೆ ಇದೊಂದು ಒಳ್ಳೆಯ ಅವಕಾಶವಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಚಾರ್ಯ ನಾರಾಯಣಪ್ಪ ಕುರುಬರ.
ವಯಸ್ಸಿನ ಗೊಂದಲ: ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ, ಮುಖ್ಯಮಂತ್ರಿ ಕೌಶಲ ಕರ್ನಾಟಕ ಯೋಜನೆ ಅಡಿಯಲ್ಲಿ 18-40 ವರ್ಷ ವಯೋಮಿತಿ ಹೊಂದಿರುವ ಗ್ರಾಪಂ ವ್ಯಾಪ್ತಿಯಲ್ಲಿ ಆಸಕ್ತ ಮಹಿಳೆಯರನ್ನು ಗುರುತಿಸಿ ಹಂತ ಹಂತವಾಗಿ ಚಾಲನಾ ತರಬೇತಿ ನೀಡಲು ಯೋಜಿಸಲಾಗಿದೆ. ಆದರೆ ಮುಖ್ಯಮಂತ್ರಿಗಳ ಕೌಶಲ ಯೋಜನೆಯಡಿ 35 ವರ್ಷದಗೊಳಗಿನ ಅಭ್ಯರ್ಥಿಗಳಿಗೆ ಮಾತ್ರ ಚಾಲನಾ ತರಬೇತಿ ನೀಡಲು ಅವಕಾಶವಿದೆ. ಆದರೆ ಜಿಪಂ ವತಿಯಿಂದ 18-40 ವರ್ಷದವರೆಗಿನ ಮಹಿಳೆಯರನ್ನು ಆಯ್ಕೆ ಮಾಡಿರುವುದು ವಯಸ್ಸಿನ ಗೊಂದಲ ನಿರ್ಮಾಣವಾಗಿದೆ. ಈ ಕುರಿತು ಇನ್ನೂ ಯಾವುದೇ ಸ್ಪಷ್ಟತೆ ಇಲ್ಲದ ಕಾರಣ 35 ವಯಸ್ಸು ದಾಟಿದವರಿಗೆ ತರಬೇತಿ ಕೊಡಬೇಕೋ ಬೇಡವೋ ಎನ್ನುವ ಗೊಂದಲವಿದೆ.
ಈ ತರಬೇತಿ ವಸತಿ ರಹಿತವಾಗಿರುವುದರಿಂದ ದೂರದ ಜಿಲ್ಲೆಗಳ ಗ್ರಾಮಗಳಿಂದ ಮಹಿಳೆಯರು ಬಂದು ಹೋಗುವುದು ಸುಲಭದ ಮಾತಲ್ಲ ಎನ್ನುವುದು ಫಲಾನುಭವಿಗಳ ಅಳಲಾಗಿದೆ. ಹೀಗಾಗಿ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ತರಬೇತಿ ನೀಡುವುದು, ಅಲ್ಲಿಯ ಸಾರಿಗೆ ಇಲಾಖೆಯಿಂದ ಚಾಲನಾ ಪರವಾನಗಿ ಕೊಡಿಸುವುದು ಸೂಕ್ತ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದು, ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಹುಬ್ಬಳ್ಳಿಯಲ್ಲಿ ಒಂದೇ ತರಬೇತಿ ಕೇಂದ್ರ ಇರುವ ಕಾರಣಕ್ಕೆ ಈ ಗೊಂದಲ ಸೃಷ್ಟಿಯಾಗಿದೆ. ವಸತಿ ಸಹಿತ ತರಬೇತಿ ನೀಡಿದರೆ ಈ ಗೊಂದಲ ಇರುವುದಿಲ್ಲ ಎನ್ನುವ ಮಾತುಗಳಿವೆ.
ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ 6 ಜಿಲ್ಲಾ ಪಂಚಾಯ್ತಿಗಳಿಂದ ಚಾಲನಾ ತರಬೇತಿಗಾಗಿ ಕೋರಿದ್ದಾರೆ. ಮೊದಲ ಹಂತದಲ್ಲಿ 174 ಮಹಿಳೆಯರಿಗೆ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದ ಮೂಲಕ ಚಾಲನಾ ತರಬೇತಿ ನೀಡಲಾಗುವುದು. ಗ್ರಾಮೀಣ ಭಾಗದ ಮಹಿಳೆಯರಿಗೆ ಇದೊಂದು ಒಳ್ಳೆಯ ಯೋಜನೆಯಾಗಿದೆ. ಮಹಿಳೆಯರನ್ನು ಸಬಲೆಯರನ್ನಾಗಿ ಮಾಡುವ ಕಾರ್ಯವನ್ನು ನಮ್ಮ ಸಂಸ್ಥೆ ಮೂಲಕ ಅನುಷ್ಠಾನಗೊಳಿಸಲು ಸರಕಾರ ಮುಂದಾಗಿದೆ. ಫಲಾನುಭವಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿ ಆಯೋಜಿಸಲಾಗುವುದು. –ಎಸ್.ಭರತ, ವ್ಯವಸ್ಥಾಪಕ ನಿರ್ದೇಶಕ, ವಾಕರಸಾ ಸಂಸ್ಥೆ
-ಹೇಮರಡ್ಡಿ ಸೈದಾಪುರ