ನೆಲಮಂಗಲ: ಟೋಲ್ ಸುಂಕ ಕೇಳಿದ್ದಕ್ಕೆ ಸಿಬ್ಬಂದಿಗಳ ಮೇಲೆ ವಾಹನ ಚಲಾ¬ಯಿಸಲು ಯತ್ನಿಸಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಚಿಕ್ಕಬಿದರಕಲ್ಲು ಬಳಿಯ ನವಯುಗ ಟೋಲ್‌ನಲ್ಲಿ ಸಂಭವಿಸಿದ್ದು ಘಟನೆಯ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ರಸ್ತೆಗಳನ್ನು ಅಭಿವೃದ್ಧಿಪಡಿಸುವ ಹೊಣೆಗಾರಿಕೆಯನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ಆಧಾರದಡಿ ನೀಡಿದೆ. ರಸ್ತೆ ಅಭಿವೃದ್ಧಿಗಾಗಿ ಮಾಡಿದ್ದ ವೆಚ್ಚವನ್ನು ನೀಡಿ ಇಂತಿಷ್ಟು ವರ್ಷ ಹಣ ಸಂಗ್ರಹಿಸಬಹುದಾಗಿದೆ ಎಂದು ಕರಾರು ಮಾಡಿರುತ್ತದೆ.
ಅದರಂತೆ ಬೆಂಗಳೂರು ಚಿಕ್ಕಬಿದರಕಲ್ಲು ಸಮೀಪದಿಂದ ನೆಲಮಂಗಲ ಪಟ್ಟಣದವರೆಗೂ ಹೆದ್ದಾರಿ ಅಭಿವೃದ್ಧಿ ಹೊಣೆಗಾರಿಕೆಯನ್ನು ನವಯುಗ ಟೋಲ್ ಕಂಪನಿಗೆ ನೀಡಲಾಗಿದೆ. ಅದರಂತೆ ಕಂಪನಿಯವರು ಹೆದ್ದಾರಿಯಲ್ಲಿ ಟೋಲ್ ಘಟಕಗಳನ್ನು ನಿರ್ಮಿಸಿ ಸುಂಕ ವಸೂಲಾತಿಗಾಗಿ ಸಿಬ್ಬಂದಿಗಳನ್ನು ನೇಮಿಸಿದ್ದು ಪಾಳಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.
15 ದಿನಗಳ ಹಿಂದೆ ಟೋಲ್ ಬಳಿಗೆ ಆಗಮಿಸಿದ ಸರಕು ಸಾಗಣೆ ವಾಹನವನ್ನು ತಡೆದ ಟೋಲ್ ಸಿಬ್ಬಂದಿ, ಸುಂಕ ನೀಡಲು ಮನವಿ ಮಾಡಿದ್ದರು. ಈ ವೇಳೆ ಮನವಿ ತಿರಸ್ಕರಿಸಿದ್ದರಿಂದ ಟೆಂಪೋ ಚಾಲಕ ಮತ್ತು ಟೋಲ್‌ಸಿಬ್ಬಂದಿಗಳ ನಡುವೆ ವಾಗ್ವಾದ ನಡೆದಿತ್ತು.
ಈ ವೇಳೆ ಟೆಂಪೋ ಚಾಲಕ ಸರಕು ಸಾಗಣೆ ವಾಹನವನ್ನು ಟೋಲ್ ಸಿಬ್ಬಂದಿಗಳ ಮೇಲೆ ಹರಿಸುವ ಬೆದರಿಕೆ ಹಾಕಿ ಸುಂಕ ಕೇಳಿದವರನ್ನು ಹಿಗ್ಗಾಮುಗ್ಗಾ ಥಳಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.