ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ ತ್ಯಾಜ್ಯ ಸಂಗ್ರಹಿಸುವ ಆಟೋ ಚಾಲಕರನ್ನು ಹೈದರಾಬಾದ್ ಪಾಲಿಕೆ ಮಾದರಿಯಲ್ಲಿ ಆಟೋ ಮಾಲೀಕರನ್ನಾಗಿಸಲು ಬಿಬಿಎಂಪಿ ಮುಂದಾಗಿದೆ.
ಗುತ್ತಿಗೆದಾರರಿಂದ ಸಮರ್ಪಕವಾಗಿ ವೇತನ ದೊರೆಯದೆ ಆಟೋ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಚಾಲಕರಿಗೆ ಆಟೋ ಖರೀದಿಸಲು ಪಾಲಿಕೆಯಿಂದ ಅಗತ್ಯ ಹಣಕಾಸು ಸಹಾಯ ಒದಗಿಸಿ ಅವರನ್ನು ಆಟೋ ಮಾಲೀಕರನ್ನಾಗಿಸುವುದು ಪಾಲಿಕೆಯ ಉದ್ದೇಶವಾಗಿದೆ.
ನಿಯಮದಂತೆ ಆಟೋ ಚಾಲಕರಿಗೆ ಪಾಲಿಕೆಯಿಂದ ವೇತನ ನೀಡಲು ಸಾಧ್ಯವಿಲ್ಲ. ಹೀಗಾಗಿ ಹೈದರಾಬಾದ್ ಮಾದರಿಯಲ್ಲಿ ಆಟೋ ಚಾಲಕರನ್ನು ಮಾಲೀಕರನ್ನಾಗಿ ಮಾಡಿ, ಅವರಿಗೆ ಹಣ ನೀಡುವ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದೆ. ಹೈದರಾಬಾದ್‌ನಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯಲ್ಲಿಯೂ ಅದನ್ನು ಜಾರಿಗೊಳಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಗುತ್ತಿಗೆ ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದಲೇ ವೇತನ ಪಾವತಿಸುತ್ತಿದ್ದು, ಇದೀಗ ಟಿಪ್ಪರ್ ಆಟೋ ಚಾಲಕರು ಸಹ ಪಾಲಿಕೆಯಿಂದಲೇ ತಮಗೆ ವೇತನ ಪಾವತಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಚಾಲಕರು ಸ್ವಂತ ಆಟೋ ಖರೀದಿಗೆ ಆರ್ಥಿಕ ನೆರವು ಒದಗಿಸುವ ಮೂಲಕ ಅವರನ್ನು ಮಾಲೀಕರನ್ನಾಗಿಸುವ ಯೋಜನೆಯನ್ನು ಚಾಲಕರ ಮುಂದಿಟ್ಟಿದ್ದು, ಅದನ್ನು ಅವರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಅದರಂತೆ ಚಾಲಕರು ಆಟೋ ಖರೀದಿಗೆ ಅಗತ್ಯವಿರುವ ಸಾಲವನ್ನು ಬಿಬಿಎಂಪಿಯೇ ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸಿ ಕೊಡಿಸುವ ವ್ಯವಸ್ಥೆ ಮಾಡಿ, ಕಸ ಸಂಗ್ರಹಿಸಿ, ಸಾಗಣೆ ಮಾಡಿದ್ದಕ್ಕೆ ಬದಲಾಗಿ ಬಿಬಿಎಂಪಿ ಚಾಲಕರಿಗೆ ನೀಡಬೇಕಾದ ಹಣದಲ್ಲಿ ಅರ್ಧ ಭಾಗವನ್ನು ಸಾಲ ಮರುಪಾವತಿಗೆ ನೀಡಲಾಗುತ್ತದೆ. ಆಮೂಲಕ ಚಾಲಕರಿಗೂ ಆದಾಯದ ಜತೆಗೆ, ಸಾಲ ತೀರಿಸುವ ಯೋಜನೆ ರೂಪಿಸಲಾಗಿದೆ.
ಚಾಲಕರಿಗೆ ಸಾಲ ಸೌಲಭ್ಯ ಹಾಗೂ ವಾಹನ ಸರಬರಾಜು ಮಾಡುವ ಕುರಿತಂತೆ ವಾಹನ ತಯಾರಿಕಾ ಸಂಸ್ಥೆಯೊಂದಿಗೆ ಬಿಬಿಎಂಪಿ ಚರ್ಚಿಸಿದೆ. ಆದರೆ, ಆ ಮೊದಲು ಚಾಲಕರನ್ನು ಒಳಗೊಂಡ ಒಂದು ಸಂಘ ರಚನೆ ಮಾಡಿ, ಸಂಘದ ಮೂಲಕವಾಗಿ ಅವರಿಗೆ ಸಾಲ ಸೌಲಭ್ಯದಗಿಸಲು ಪಾಲಿಕೆ ಮುಂದಾಗಿದೆ.
ಪೌರಕಾರ್ಮಿಕರಿಗೆ ವೇತನವನ್ನು ನೇರವಾಗಿ ಪಾವತಿಸುವಂತೆ ಆಟೋ ಟಿಪ್ಪರ್ ಚಾಲಕರಿಗೆ ವೇತನ ಪಾವತಿಸಲು ಪಾಲಿಕೆಗೆ ಅವಕಾಶವಿಲ್ಲ. ಹಾಗಾಗಿ ಅವರು ಸ್ವಂತವಾಗಿ ಆಟೋ ಖರೀದಿಸಲು ಅಗತ್ಯ ನೆರವು ಒದಗಿಸಿ, ಅವರು ಖರೀದಿಸಿದ ಆಟೋಗಳನ್ನು ಪಾಲಿಕೆಯಿಂದ ಬಾಡಿಗೆ ಪಡೆದು ಅವರಿಗೆ ಹಣ ಪಾವತಿಸುವ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಅವರನ್ನು ಆಟೋ ಮಾಲೀಕರನ್ನಾಗಿಸಲು ಯೋಜನೆ ರೂಪಿಸಲಾಗಿದೆ.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ