Advertisement

ರಿಕ್ಷಾ ಟೆಂಪೋ ಚಾಲಕನಿಗೆ ಚೂರಿಯಿಂದ ಇರಿದು ಪರಾರಿ

03:30 AM Jul 12, 2017 | Team Udayavani |

ಉಳ್ಳಾಲ: ಉಳ್ಳಾಲ ಸಮ್ಮರ್‌ ಸ್ಯಾಂಡ್‌ ಬಳಿಯ ಅಝಾದ್‌ ನಗರ ರಸ್ತೆಯಲ್ಲಿ ಕಾರಿನಲ್ಲಿ ಬಂದಿದ್ದ ಅಪರಿಚಿತರು ರಿಕ್ಷಾ ಟೆಂಪೋ ಚಾಲಕನಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲದಲ್ಲಿ ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಉಳ್ಳಾಲ ಉಳಿಯ ನಿವಾಸಿ ಆಸ್ಟಿನ್‌ ಮೊಂತೇರೋ (28) ಚೂರಿ ಇರಿತಕ್ಕೊಳಗಾಗಿ ಉಳ್ಳಾಲದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇರಿದವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Advertisement

ಘಟನೆಯ ವಿವರ: ಅಝಾದ್‌ನಗರದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿದ್ದು, ರಸ್ತೆ ಪಕ್ಕದಲ್ಲಿ ನಿರ್ಮಾಣವಾಗಿದ್ದ ಗುಂಡಿಯನ್ನು ತುಂಬಿಸಲು ಸ್ಥಳೀಯ ನಿವಾಸಿಯೊಬ್ಬರು ಗುತ್ತಿಗೆದಾರ ಅಬೂಬಕರ್‌ ಅವರಿಗೆ ಗುತ್ತಿಗೆ ನೀಡಿದ್ದರು. ಅದರಂತೆ ಅಬೂಬಕರ್‌ ಅವರು ಅ ಉಳ್ಳಾಲ ರಿಕ್ಷಾ ಪಾರ್ಕ್‌ನಲ್ಲಿದ್ದ ಆಸ್ಟಿನ್‌ ಮೊಂತೇರೋ ಅವರ ಟೆಂಪೋದಲ್ಲಿ ಮಣ್ಣು ತುಂಬಿಸಿ ಅಝಾದ್‌ ರಸ್ತೆಯಲ್ಲಿರುವ ಮನೆ ಪಕ್ಕದ ಗುಂಡಿಯನ್ನು ತುಂಬಿಸುವ ಕಾರ್ಯ ಮಾಡುತ್ತಿದ್ದರು. ಮೂರು ಲೋಡ್‌ ಮಣ್ಣು ತುಂಬಿಸಿದ ಬಳಿಕ ನಾಲ್ಕನೇ ಲೋಡ್‌ ಮಣ್ಣು ಹಾಕುತ್ತಿರವಾಗ ಕಾರೊಂದು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಟೆಂಪೋವನ್ನು ತೆಗೆಯಲು ಹೇಳಿದ್ದು, ಆಸ್ಟಿನ್‌ ರಿಕ್ಷಾ ಟೆಂಪೋ ತೆಗೆಯುತ್ತಿದ್ದಾಗ ಕಾರಿನಲ್ಲಿದ್ದ ಇಬ್ಬರು ಏಕಾಏಕಿ ರಿಕ್ಷಾ ಹಿಂಬದಿಗೆ ಚಲಾಯಿಸುತ್ತಿದ್ದ ಆಸ್ಟಿನ್‌ ಮುಖಕ್ಕೆ ಕೈಯಿಂದ ಗುದ್ದಿದ್ದು, ಇನ್ನೊಬ್ಬ ಕೈಯಲ್ಲಿದ್ದ ತಾಮ್ರದ ಚೂರಿಯಿಂದ ಆಸ್ಟಿನ್‌ ಮುಖಕ್ಕೆ ಚುಚ್ಚಲು ಮುಂದಾದಾಗ ಆಸ್ಟಿನ್‌ ಕೈ ಅಡ್ಡ ಇಟ್ಟಿದ್ದು, ಈ ಸಂದರ್ಭದಲ್ಲಿ ಕೈಗೆ ಚೂರಿಯಿಂದ ಬಲವಾದ ಏಟು ಬಿದ್ದಿತ್ತು. ಈ ಸಂದರ್ಭದಲ್ಲಿ ಅಬೂಬಕರ್‌ ಹೊಡೆಯಬೇಡಿ ಎಂದು ಮುಂದೆ ಬಂದಾಗ ಅವರನ್ನು ಬೆದರಿಸಿದ ತಂಡ ಕಾರಿನಲ್ಲಿ ಪರಾರಿಯಾಗಿತ್ತು.
ಅಬೂಬಕರ್‌ ಚೂರಿ ಇರಿತದ ವಿಚಾರ ಪೊಲೀಸರಿಗೆ ಮತ್ತು ಸಹೋದರನಿಗೆ ಮಾಹಿತಿ ನೀಡಿದರು. ಆಸ್ಟಿನ್‌ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು.

ಕೆಲ ಕಾಲ ಉದ್ವಿಗ್ನ ಸ್ಥಿತಿ: ಚೂರಿ ಇರಿತದ ಸುದ್ಧಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜನರು ಜಮಾಯಿಸಿದ್ದು, ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಚೂರಿ ಇರಿತ ವಾಹನಕ್ಕೆ ದಾರಿ ಮಾಡಿಕೊಡುವ ವಿಚಾರ ತಿಳಿಯುತ್ತಿದ್ದಂತೆ ಜನರು ಮತ್ತು ಪೊಲೀಸರು ನಿಟ್ಟುಸಿರು ಬಿಟ್ಟರು.

ರೌಡೀ ಶೀಟರ್‌ಗಳ ಮೇಲೆ ಗುಮಾನಿ
ಮಂಗಳವಾರ ನಡೆದ ಚೂರಿ ಇರಿತದ ಘಟನೆಗೆ ಸಂಬಂಧಿಸಿದಂತೆ ಉಳ್ಳಾಲದಲ್ಲಿ ಅಪರಾಧಗಳಲ್ಲಿ ಭಾಗವಹಿಸುವ ರೌಡೀ ಶೀಟರ್‌ಗಳ ಮೇಲೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ತನಿಖೆಯನ್ನು ಕೇಂದ್ರೀಕರಿಸಿರುವ ಪೊಲೀಸರು ಅಪರಾಧಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿಗಳಾದ ಹನುಮಂತರಾಯ, ಶಾಂತರಾಜು, ಎಸಿಪಿ ಶ್ರುತಿ, ವೆಲೈಂಟೀನ್‌ ಡಿ’ಸೋಜಾ, ಇನ್ಸ್‌ಪೆಕ್ಟರ್‌ ಗೋಪಿಕೃಷ್ಣ, ಎಸ್‌ಐಗಳಾದ ರಾಜೇಂದ್ರ ಸೇರಿದಂತೆ ಸಿಸಿಬಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next