ವಿಜಯಪುರ: ಚಲಿಸುತ್ತಿದ್ದ ಬಸ್ಸಿನ ಹಿಂದಿ ಚಕ್ರ ಕಳಚಿ ಬಿದ್ದರೂ ಸಂಭವನೀಯ ಭಾರಿ ಅಪಾಯವನ್ನು ತಪ್ಪಿಸುವಲ್ಲಿ ಸಮಯ ಪ್ರಜ್ಞೆ ಮೆರೆಯುವಲ್ಲಿ ಚಾಲಕ ಯಶಸ್ವಿಯಾಗಿದ್ದಾನೆ.
ಬುಧವಾರ ಬೆಳಿಗ್ಗೆ ಮುದ್ದೇಬಿಹಾಳ ಪಟ್ಟಣದಿಂದ ನಾರಾಯಣಪುರಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್, ನಾಲತವಾಡ ಬಳಿ ಬರುತ್ತಲೇ ಬಸ್ಸಿನ ಹಿಂಬದಿ ಚಕ್ರ ಕಳಚಿದೆ. ಕೂಡಲೇ ಎಚ್ಚೆತ್ತ ಚಾಲಕ ಬಸವರಾಜ ಕರಿಭಾವಿ, ತಮ್ಮಲ್ಲಿನ ಚಾಲನಾ ಕೌಶಲ್ಯದಿಂದ ಬಸ್ ನಿಯಂತ್ರಣಕ್ಕೆ ತಂದು, ಸುರಕ್ಷಿತವಾಗಿ ನಿಲ್ಲಿಸಿದ್ದಾರೆ.
ನಾಲತವಾಡ ಪಟ್ಟಣದ ಹೆಸ್ಕಾಂ ಕಛೇರಿ ಎದುರು ಈ ಘಟನೆ ನಡೆದಿದ್ದು ಘಟನೆ ಸಂಭವಿಸಿದ ಸ್ಥಳದಲ್ಲಿ ರಸ್ತೆ ಇಳಿಜಾರಿನಿಂದ ಕೂಡಿದ್ದರೂ ಸಮಯ ಪ್ರಜ್ಞೆ ಮೆರೆದ ಚಾಲಕ ಅಪಘಾತದ ಅಪಾಯ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ರೋಣ : ಭಾರಿ ಮಳೆಗೆ ಮನೆ ಕುಸಿದು ಬಿದ್ದು 70 ವರ್ಷದ ವೃದ್ಧೆ ಸಾವು
ಚಕ್ರ ಕಳಚಿ ಸುಮಾರು 200 ಮೀಟರ್ ದೂರಕ್ಕೆ ಹೋಗಿದ್ದ ಬಸ್ ನಲ್ಲಿ ಐವರು ಪ್ರಯಾಣಿಕರು, ಕಂಡಕ್ಟರ್ ಸೇರಿ ಏಳು ಮಂದಿ ಪ್ರಯಾಣಿಸುತ್ತಿದ್ದರು. ಚಾಲಕ ಬಸವರಾಜ ಅಪಾಯ ಎದುರಾದರೂ ಧೃತಿಗೆಡದೆ ನಮ್ಮ ಜೀವ ರಕ್ಷಿಸಿದ್ದಾರೆ ಎಂದು ಪ್ರಯಾಣಿಕರು ಕೃತಜ್ಞತೆ ಸಲ್ಲಿಸಿದ್ದಾರೆ.