Advertisement

ಜಲಾಭಿಮುಖ ಅಭಿವೃದ್ಧಿ ಕಾಮಗಾರಿಗೆ ಚಾಲನೆ

04:10 PM Mar 12, 2018 | |

ವಿಜಯಪುರ: ದೇಶ-ವಿದೇಶಗಳಿಂದ ಐತಿಹಾಸಿಕ ವಿಜಯಪುರಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಬೇಗಂ  ತಲಾಬ ಸುತ್ತಮುತ್ತಲಿನ ಪರಿಸರ ಅಭಿವೃದ್ಧಿ ಮಾಡಲಾಗುವುದೆಂದು ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ. ಪಾಟೀಲ ಹೇಳಿದರು.

Advertisement

ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ 12.29 ಕೋಟಿ ರೂ. ವೆಚ್ಚದಲ್ಲಿ ಐತಿಹಾಸಿಕ ಬೇಗಂ ತಲಾಬ ಕೆರೆಯ ಜಲಾಭಿಮುಖ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬೇಗಂ ತಲಾಬ ಕೆರೆ ನಾಲ್ಕು ಶತಮಾನಕ್ಕಿಂತಲೂ ಪುರಾತನ ಕೆರೆಯಾಗಿದ್ದು ವಿಜಯಪುರ ಆದಿಲ್‌ಶಾಹಿ ಅರಸರಾಗಿದ್ದ ಮಹ್ಮದ್‌ ಆದಿಲ್‌ಶಾ ತನ್ನ ಪತ್ನಿ ಜಹಾಬೇಗಂ ಅವರ ಸ್ಮರಣಾರ್ಥ ನಿರ್ಮಿಸಲಾಗಿದ್ದ ಈ ಕೆರೆಯು ವಿಜಯಪುರ ನಗರದ 9 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಪ್ರಮುಖ ಜಲ ಸಂಪನ್ಮೂಲವಾಗಿತ್ತೆಂದ ಅವರು, ಇಂತಹ ಐತಿಹಾಸಿಕ ಕೆರೆಯನ್ನು ಸಕಲ ಸೌಕರ್ಯಗಳೊಂದಿಗೆ ಅಭಿವೃದ್ಧಿ ಮಾಡಲಾಗುವುದೆಂದು ಹೇಳಿದರು.

ಐತಿಹಾಸಿಕವಾಗಿ ಅತ್ಯಂತ ಮಹತ್ವ ಪಡೆದಿರುವ ಈ ಕೆರೆಯನ್ನು ಅತ್ಯಂತ ಚಾಕಚಕ್ಯತೆಯಿಂದ ನಿರ್ಮಿಸಿದ್ದು ವಿಶೇಷವಾಗಿದೆ. ವಿದ್ಯುತ್ಛಕ್ತಿ ಆಧುನಿಕ ತಂತ್ರಜ್ಞಾನದಂತಹ ಸೌಲಭ್ಯಗಳಿಲ್ಲದ ಕಾಲದಲ್ಲಿಯೇ ಜನರಿಗೆ ಕುಡಿಯುವ ನೀರನ್ನು ಪೂರೈಸಲಾಗಿದ್ದು, ಆದಿಲ್‌ಶಾಹಿ ಅರಸರ ಬದ್ಧತೆ ಮತ್ತು ತಂತ್ರಜ್ಞಾನ ವೃದ್ಧಿ ಎತ್ತಿ ತೋರಿಸುತ್ತದೆ. ಅಂತಹ
ಮಹತ್ವದ ಕೆರೆಯನ್ನು ಇಂದು ಸಕಲ ರೀತಿಯಲ್ಲಿ ಅಭಿವೃದ್ಧಿ ಮಾಡಲು ಉದ್ದೇಶಿಸಲಾಗಿದೆ.

234 ಎಕರೆ ಪ್ರದೇಶದಲ್ಲಿ ವಿಸ್ತಾರ ಹೊಂದಿರುವ ಈ ಕೆರೆಯ ಒತ್ತುವರಿಯಾಗದಂತೆ ಎಚ್ಚರಿಕೆ ವಹಿಸಿ ಈಗಾಗಲೇ ರಕ್ಷಣಾತ್ಮಕವಾಗಿ ಕ್ರಮ ಕೈಗೊಳ್ಳಲಾಗಿದೆ. ವಿಜಯಪುರ ನಗರಕ್ಕೆ ಈಗ ಬಳಸುತ್ತಿರುವ 60 ಎಂಎಲ್‌ಡಿ ನೀರಿಗೆ ಹೆಚ್ಚುವರಿಯಾಗಿ ಬೇಗಂ ತಲಾಬ ಮತ್ತು ವಿವಿಧ ಬಾವಿಗಳಿಂದ 17 ಎಂಎಲ್‌ಡಿ ನೀರು ದೊರೆಯಲಿದ್ದು, ಇಂತಹ ವ್ಯವಸ್ಥಿತ ಮತ್ತು ಯೋಜಿತ ಕೆರೆ ಭಾರತದಲ್ಲಿ ಎಲ್ಲಿಯೂ ಸಿಗಲು ಸಾಧ್ಯವಿಲ್ಲ ಎಂದ ಅವರು, ಶೀಘ್ರದಲ್ಲಿಯೇ ಪಾದಚಾರಿ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು. ನಂತರ ಬೇಡಿಕೆ ಇರುವ ಟೆನಿಸ್‌ ಕೋರ್ಟ್‌ ಮತ್ತು ಸ್ವಿಮ್ಮಿಂಗ್‌ ಫೂಲ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಐತಿಹಾಸಿಕ ಈ ಬೇಗಂ ತಲಾಬಗೆ ಈಗಾಗಲೇ 500 ಮೀ. ಪಾದಚಾರಿ ರಸ್ತೆ ವ್ಯವಸ್ಥೆಯಿದ್ದು, ಹೆಚ್ಚುವರಿಯಾಗಿ
2 ಕಿ.ಮೀ.ವರೆಗೆ ಅಭಿವೃದ್ಧಿ ಮಾಡಲಾಗುವುದು.

ಭಾಗಶಃ ಹೊದಿಕೆಯ ಯೋಗ ಮಂಟಪ, ಮುಸ್ಲಿಂ ಬಾಂಧವರಿಗೆ ಪ್ರಾರ್ಥನೆ ಮಾಡಲು ವ್ಯವಸ್ಥೆ, ಕೆರೆ ವ್ಯಾಪ್ತಿಯಲ್ಲಿ ಸೋಲಾರ್‌ ವಿದ್ಯುತ್‌ ಸೌಲಭ್ಯ, ಚಿಕ್ಕ ಮಕ್ಕಳ ಆಟದ ಸಾಮಗ್ರಿಗಳೊಂದಿಗೆ ಆಟದ ಮೈದಾನ, ವನ ಭೋಜನ ಸ್ಥಳಗಳು, ವಾಯುವಿಹಾರ ಪಥ, ಬಯಲು ರಂಗಮಂದಿರ, ವಾಲಿಬಾಲ್‌ ಮೈದಾನ, ಫುಡ್‌ ಕೋರ್ಟ್‌, ಮನರಂಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸಂಕೀರ್ಣ, ನೀರಿನ ಕಾರಂಜಿ ವ್ಯವಸ್ಥೆ, ಬೋಟಿಂಗ್‌ ವ್ಯವಸ್ಥೆಗಾಗಿ ಕಟ್ಟೆ, ಜಟ್ಟಿಗಳ ನಿರ್ಮಾಣ, ನೀರಿನ ಶುದ್ಧೀಕರಣ ಘಟಕ 2 ಕೊಳವೆ ಬಾವಿಗಳೊಂದಿಗೆ ಸ್ಥಾಪಿಸಲಾಗಿದೆ ಎಂದರು.

ಐತಿಹಾಸಿಕ ಭೂತನಾಳ ಕೆರೆ ಅಭಿವೃದ್ಧಿಗೆ 9 ಕೋಟಿ ರೂ. ಮೀಸಲಿಡಲಾಗಿದ್ದು ಯೋಜನೆ ಸಹ ರೂಪಿಸಲಾಗಿದೆ. ಶೀಘ್ರವೇ ಕಾಮಗಾರಿಗಳಿಗೆ ಟೆಂಡರ್‌ ಕರೆಯುವಂತೆ ಜಲ ಸಂಪನ್ಮೂಲ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಈಗಾಗಲೇ ಯೋಜನೆ ರೂಪಿಸಲಾಗಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. 500 ಎಕರೆ ಪ್ರದೇಶದಲ್ಲಿ ವಿಸ್ತಾರ ಹೊಂದಿರುವ ಭೂತನಾಳ ಕೆರೆ ಅಭಿವೃದ್ಧಿಗೂ ಹೆಚ್ಚಿನ
ಗಮನ ನೀಡಲಾಗುತ್ತಿದ್ದು, ಈಗಾಗಲೇ 70 ಸಾವಿರ ಸಸಿ ಬೆಳೆಸುವ ಮೂಲಕ ಅರಣ್ಯ ಅಭಿವೃದ್ಧಿಗೂ ಗಮನ
ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಸೋಲಾರ ಮತ್ತು ಹನಿ ನೀರಾವರಿ ಸೌಲಭ್ಯ ಸಹ ಕಲ್ಪಿಸಲಾಗುವುದೆಂದರು.

ನೀರು ಘಟಕ ಉದ್ಘಾಟನೆ: ನಗರದ ಐತಿಹಾಸಿಕ ಆದಿಲ್‌ ಶಾಹಿ ಕಾಲದ ಇಬ್ರಾಹಿಂಪುರ ಬಾವಡಿಗೆ ವಿಶೇಷ
ಅನುದಾನದಡಿ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ. ಪಾಟೀಲ ಉದ್ಘಾಟಿಸಿದರು. 

ಕಾರ್ಯಕ್ರಮದಲ್ಲಿ ಮೇಯರ್‌ ಸಂಗೀತಾ ಪೋಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆಝಾದ್‌ ಪಟೇಲ್‌, ಪಾಲಿಕೆ ಸದಸ್ಯರಾದ ಗೋಪಾಲ ಘಟಕಾಂಬಳೆ, ಅಬ್ದುಲ್‌ ರಜಾಕ್‌ ಹೊರ್ತಿ, ಅರವಿಂದ ಕೋಲಕಾರ, ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ, ಸಜ್ಜಾದೆಪೀರಾ ಮುಶ್ರೀಫ್‌, ಹಮೀದ ಮುಶ್ರೀಫ್‌, ಅಫ್ತಾಬಖಾದ್ರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next