Advertisement

ಡಹಾಣೂವಿನ ಪ್ರಸಿದ್ಧ ಶ್ರೀ ಮಹಾಲಕ್ಷ್ಮೀ ಜಾತ್ರೆಗೆ ಚಾಲನೆ

12:27 PM Apr 21, 2019 | Vishnu Das |

ಮುಂಬಯಿ: ಡಹಾಣೂವಿನ ಪ್ರಸಿದ್ಧ ಶ್ರೀ ಮಹಾಲಕ್ಷ್ಮೀ ಮಂದಿರದಲ್ಲಿ ವಾರ್ಷಿಕ ಜಾತ್ರೋತ್ಸವವು ಎ. 19ರಂದು ಪ್ರಾರಂಭಗೊಂಡಿದೆ. ಮುಂಬಯಿ- ಅಹಮದಾಬಾದ್‌ ಹೈವೇ ಪಕ್ಕದ ಚಾರೋಟಿ ನಾಕಾದ ಸಮೀಪದಲ್ಲಿರುವ ಈ ಮಂದಿರದಲ್ಲಿ ಚೈತ್ರ ಪೂರ್ಣಿಮೆಯ ಹನುಮಾನ್‌ ಜಯಂತಿಯಂದು ಉತ್ಸವವು ಆರಂಭ ಗೊಂಡು ಹದಿನೈದು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ.
ಸ್ಥಳೀಯ ಆದಿವಾಸಿಗಳ ಕುಲದೇವರೆಂದೇ ಪ್ರಸಿದ್ಧಿಯಲ್ಲಿರುವ ಆಯಿ ಮಾತಾ ದೇವಿಯ ಈ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆದಿವಾಸಿಗಳು ಹಾಗೂ ಪಕ್ಕದ ಹಳ್ಳಿಗಳಿಂದ ಜನರು ಆಗಮಿಸಿ ಉತ್ಸವದಲ್ಲಿ ದೊರೆಯುವ ವಿಶೇಷ ಹುಳಿ, ಒಣಗಿದ ಹಣ್ಣು, ಪಾತ್ರೆಗಳು ಹಾಗೂ ಒಣಮೀನು ಇನ್ನಿತರ ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬೀಳುತ್ತಾರೆ.

Advertisement

ಸಾಮಾನ್ಯವಾಗಿ ಜಾತ್ರೆಯೊಂದರಲ್ಲಿರುವ ವೈವಿಧ್ಯಮಯ ಸ್ಟಾಲ್‌ಗ‌ಳು, ಮನೋರಂಜನಾ ಮಳಿಗೆಗಳು ಇಲ್ಲಿ ಕಾಣ ಸಿಗುತ್ತವೆ. ನಗರದ ದೂರದ ಪ್ರದೇಶಗಳಿಂದ ಭಕ್ತಾದಿಗಳು, ಮಕ್ಕಳು ಕಾಲ್ನಡಿಗೆಯಲ್ಲೇ ಮಂದಿರಕ್ಕೆ ಅಗಮಿಸುವ ಭಕ್ತಾದಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಮಂದಿರದ ಆವರಣದಲ್ಲಿ ಭಕ್ತಾದಿಗಳಿಗೆ ಅಗತ್ಯವಿರುವ ವಿದ್ಯುತ್‌, ನೀರು ಹಾಗೂ ಸುರಕ್ಷಾ ಕ್ರಮಗಳನ್ನು ಒದಗಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಡಹಾಣೂ ತಾಲೂಕು ಪ್ರಾಂತಾಧಿಕಾರಿ ಸೌರಭ್‌ ಕಟಿಮಾರ್‌ ಹಾಗೂ ಡಹಾಣೂವಿನ ತಹಶೀಲ್ದಾರ್‌ ರಾಹುಲ್‌ ಸಾರಂಗ್‌ ಅವರು ತಿಳಿಸಿದ್ದಾರೆ.

ಗ್ರಾಮ ಪಂಚಾಯತ್‌ ಹಾಗೂ ಮಂದಿರದ ಟ್ರಸ್ಟ್‌ ವತಿಯಿಂದ ಯಾತ್ರಾರ್ಥಿಗಳಿಗೆ ಮೂರು ರೋಲಿಂಗ್‌ ಶೆಡ್‌, ದರ್ಶನಾ ಕಾಂಕ್ಷಿಗಳ ಸುವ್ಯವಸ್ಥೆಗೋಸ್ಕರ 60 ಸುರಕ್ಷಾ ರಕ್ಷಕರು, 20 ಸ್ವಯಂ ಸೇವಕರು ಹಾಗೂ 15 ಸ್ವತ್ಛತಾ ಕರ್ಮಚಾರಿಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಭದ್ರತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next