ದಾವಣಗೆರೆ: ಚಿತ್ರದುರ್ಗ, ದಾವಣಗೆರೆ ಜಿಲ್ಲೆಗೆ ಸೇರಿದ ಪ್ರತ್ಯೇಕ ಡೈರಿ ಸ್ಥಾಪನೆಗೆ ಇದೀಗ ಪ್ರಕ್ರಿಯೆ ಚುರುಕುಗೊಂಡಿದೆ. ಶಿವಮೊಗ್ಗದೊಂದಿಗೆ ಸೇರಿಕೊಂಡಿರುವ ದಾವಣಗೆರೆ- ಚಿತ್ರದುರ್ಗ ಜಿಲ್ಲೆಗಳನ್ನು ಪ್ರತ್ಯೇಕಿಸಿ, ಹಾಲು ಉತ್ಪಾದಕರಿಗೆ ಇನ್ನಷ್ಟು ಅವಕಾಶ ಮಾಡಿಕೊಡುವ ಈ ಉದ್ದೇಶ ಕಳೆದ ಮೂರು ವರ್ಷಳಿಂದ ಕಡತದ ಹಂತದಲ್ಲಿಯೇ ಇದೆ.
ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ರ ಆಶಯದಂತೆ ಪ್ರತ್ಯೇಕ ಘಟಕ ಸ್ಥಾಪಿಸುವ ಕಾರ್ಯ ಚುರುಕುಗೊಂಡಿದೆ. ಪ್ರತ್ಯೇಕ ಘಟಕ ಸ್ಥಾಪನೆಗೆ ಬೇಕಾದ ಎಲ್ಲಾ ಸವಲತ್ತುಗಳು ಇವೆ. ಎಚ್. ಕಲ್ಪನಹಳ್ಳಿಯ ಬಳಿ ಅಗತ್ಯ ಜಾಗವಿದೆ. 14 ಎಕರೆ, ಚಿತ್ರದುರ್ಗದಲ್ಲಿ 50 ಸಾವಿರ ಲೀಟರ್ ಹಾಲು ಶೇಖರಿಸಲು ಘಟಕ ಇದೆ.
ದೊಡ್ಡ ಬಾತಿಯಲ್ಲಿ 50 ಸಾವಿರ ಲೀಟರ್ ಹಾಲು ಪ್ಯಾಕ್ ಮಾಡುವ ಘಟಕ ಇದೆ. ಜೊತೆಗೆ ಇಲ್ಲಿಯೇ ಮೊಸರು, ಮಜ್ಜಿಗೆ ತಯಾರಿಸಲಾಗುತ್ತಿದೆ. ಶೀಘ್ರದಲ್ಲಿಯೇ ಪೇಡಾ ಮಾಡುವ ಕಾರ್ಯ ಆರಂಭವಾಗಲಿದೆ. ಬಹುತೇಕ ಸವಲತ್ತು ಇವೆ. ಅತ್ಯಾಧುನಿಕ ಡೈರಿ ಘಟಕ ಸ್ಥಾಪನೆ ಕಾರ್ಯಕ್ಕೆ ಚಾಲನೆ ನೀಡಬೇಕಿದೆ.
ಎಚ್. ಕಲ್ಪನಹಳ್ಳಿಯಲ್ಲಿರುವ 14 ಎಕರೆ ಜಾಗದಲ್ಲಿ ಅತ್ಯಾಧುನಿಕ ಡೈರಿ ಘಟಕ ಸ್ಥಾಪಿಸುವ ಉದ್ದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೊಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಆರಂಭದ ಬಜೆಟ್‌ನಲ್ಲಿಯೇ ಈ ಕುರಿತು ಪ್ರಸ್ತಾಪ ಮಾಡಲಾಗಿತ್ತು.
ಆದರೆ, ಕಲ್ಪನಹಳ್ಳಿಯ ಡೈರಿ ಜಾಗಕ್ಕೆ ರಸ್ತೆ ಸಮಸ್ಯೆ ಎದುರಾಯಿತು. ಇದರಿಂದ ಡೈರಿ ಆರಂಭ ಸಾಧ್ಯವಾಗಲಿಲ್ಲ. ಇದೀಗ ಜಾಗಕ್ಕೆ ರಸ್ತೆ ಮಾಡುವ ಕಾರ್ಯ ಅಂತಿಮ ಹಂತ ತಲುಪಿದೆ. ರಸ್ತೆ ನಿರ್ಮಾಣಕ್ಕೆ ಇದ್ದ ಅಡೆ ತಡೆಗಳನ್ನು ಇಬ್ಬರು ನಾಯಕರು ಪರಿಹರಿಸಿದ್ದಾರೆ.
1 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಕೆಎಂಎಫ್ ರಸ್ತೆ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದೆ. ಉಳಿದ 50 ಲಕ್ಷ ರೂ. ಗಳನ್ನು ಶಿಮುಲ್‌ನಿಂದಲೇ ಭರಿಸಲು ನಿರ್ಧರಿಸಲಾಗಿದೆ. ಅಲ್ಲಿಗೆ ವರ್ಷಾಂತ್ಯಕ್ಕೆ ಡೈರಿ ಘಟಕದ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯಲಿದೆ.