ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಅಸಂಘಟಿತ ಕಾರ್ಮಿಕರಿಗಾಗಿ ರಾಷ್ಟ್ರೀಯ ಡೇಟಾಬೇಸ್ (National Data base for Unorganised Workers- NDUW) ಅಥವಾ ಇ- ಶ್ರಮ್ ಪೋರ್ಟಲ್ ಅನ್ನು ರಚಿಸಿದ್ದು ಗುರುವಾರದಂದು ಈ ಪೋರ್ಟಲ್‌ಗೆ ಅಧಿಕೃತ ಚಾಲನೆ ಸಿಗಲಿದೆ. ಗುರುವಾರದಿಂದಲೇ ಅಸಂಘಟಿತ ವಲಯದ ಕಾರ್ಮಿಕರು ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಇದರಿಂದ ದೇಶಾದ್ಯಂತ ಇರುವ ಲಕ್ಷಾಂತರ ಅಸಂಘಟಿತ ಕಾರ್ಮಿಕರು ಒಂದೇ ವೇದಿಕೆಯಲ್ಲಿ ಗುರುತಿಸಲು ಸಾಧ್ಯವಾಗುವುದು.
ಏನಿದು ಇ- ಶ್ರಮ್ ಪೋರ್ಟಲ್? :
ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಕೃಷಿ ಮತ್ತು ಗೃಹ ಕಾರ್ಮಿಕರಂತಹ ಅಸಂಘಟಿತ ವಲಯಗಳ ಸುಮಾರು 38 ಕೋಟಿ ಕಾರ್ಮಿಕರನ್ನು ನೋಂದಾಯಿಸುವ ಗುರಿ ಹೊಂದಿರುವ ಕೇಂದ್ರ ಸರಕಾರ, ನೋಂದಾಯಿಸಲ್ಪಟ್ಟ ಕಾರ್ಮಿಕರಿಗೆ 12 ಅಂಕೆಗಳ ವಿಶಿಷ್ಟ ಸಂಖ್ಯೆಯ ಇ- ಶ್ರಮ್‌ಕಾರ್ಡ್ ನೀಡಲಿದೆ. ಇದು ಕಾರ್ಮಿಕರಿಗೆ ಸರಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ.
ನೋಂದಣಿ ಹೇಗೆ? :
ಪೋರ್ಟಲ್‌ಗೆ ಚಾಲನೆ ನೀಡಿದ ದಿನದಿಂದಲೇ ನೋಂದಣಿ ಪ್ರಕ್ರಿಯೆಯೂ ಪ್ರಾರಂಭವಾಗಲಿದೆ. ರಾಷ್ಟ್ರೀಯ ಟೋಲ್ ಫ್ರೀ ಸಂಖ್ಯೆ 14434ಗೆ ಕರೆ ಮಾಡಿ ಅಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕವೂ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇದಕ್ಕಾಗಿ ಕಾರ್ಮಿಕರು ತಮ್ಮ ಹೆಸರು, ವೃತ್ತಿ, ವಿಳಾಸ, ವೃತ್ತಿಯ ಪ್ರಕಾರ, ಶೈಕ್ಷಣಿಕ ಅರ್ಹತೆ, ಕೌಶಲ ಮತ್ತು ಕುಟುಂಬದ ವಿವರಗಳೊಂದಿಗೆ ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ಸಾಮಾಜಿಕ ವರ್ಗದಂಥ ಅಗತ್ಯ ವಿವರಗಳನ್ನು ನೀಡಬೇಕು.
ವಲಸೆ ಕಾರ್ಮಿಕರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಲ್ಲಿ ಅಥವಾ ಕೇಂದ್ರದ ನಿರ್ವಾಹಕರನ್ನು ಭೇಟಿ ಮಾಡಿ ನೋಂದಣಿ ಮಾಡಿಕೊಳ್ಳಬಹುದು.
ಪ್ರಯೋಜನವೇನು? :
ಇ- ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡುವುದರಿಂದ ಕಾರ್ಮಿಕರಿಗೆ 2 ಲಕ್ಷ ರೂ. ವರೆಗೆ ಅಪಘಾತ ವಿಮಾ ರಕ್ಷಣೆ ಯೋಜನೆ, ಪಿಎಂ ಸುರûಾ ವಿಮಾ ಯೋಜನೆಯಲ್ಲಿ ವಾರ್ಷಿಕ 12 ರೂ. ಪ್ರೀಮಿಯಂನಲ್ಲಿ ಒಂದು ವರ್ಷದ ವಿನಾಯಿತಿಯನ್ನೂ ನೀಡುವ ಪ್ರಸ್ತಾವವಿದೆ. ಅಸಂಘಟಿತ ಮತ್ತು ವಲಸೆ ಕಾರ್ಮಿಕರ ಡೇಟಾಬೇಸ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದರಿಂದ ಸರಕಾರದ ವಿವಿಧ ಯೋಜನೆಗಳನ್ನು ಅರ್ಹ ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸಲು ಸಾಧ್ಯವಾಗುವುದು.