Advertisement

ರಾಜಕಾಲುವೆಯ ಹೂಳೆತ್ತುವಿಕೆಗೆ ಚಾಲನೆ

12:04 PM Jun 02, 2022 | Team Udayavani |

ಕಾಪು: ಕಾಪು ಪುರಸಭೆ ವ್ಯಾಪ್ತಿಯಲ್ಲಿ ಪ್ರತೀ ಮಳೆಗಾಲದಲ್ಲೂ ಕಾಡುತ್ತಿರುವ ಕೃತಕ ನೆರೆಯ ಭೀತಿಯನ್ನು ತಪ್ಪಿಸಲು ಪುರಸಭೆಯು ಮಳೆಗಾಲಕ್ಕೆ ಮೊದಲೇ ಭರ್ಜರಿ ಸಿದ್ಧತೆಯನ್ನು ಆರಂಭಿಸಿದೆ.

Advertisement

ಮಳೆಗಾಲದಲ್ಲಿ ಕೃತಕ ನೆರೆಯ ಭೀತಿಯ ಸೃಷ್ಟಿಗೆ ಕಾರಣವಾಗುತ್ತಿದ್ದ ರಾಜ ಕಾಲುವೆ, ತೋಡು, ಚರಂಡಿ ಹೀಗೆ ಪ್ರತೀ ಪ್ರದೇಶಗಳಲ್ಲೂ ಪುರಸಭೆಯ ವತಿಯಿಂದ ಶುಚಿಗೊಳಿಸುವಿಕೆ, ಹೂಳೆತ್ತುವಿಕೆ, ಗಿಡ ಗಂಟಿಗಳು ಮತ್ತು ಪೊದೆಗಳ ತೆರವುಗೊಳಿಸುವಿಕೆ ಸಹಿತವಾಗಿ ಇತ್ಯಾದಿ ಕೆಲಸಗಳು ಪ್ರಗತಿಯಲ್ಲಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ.

6 ಕಿ.ಮೀ. ಉದ್ದದ ರಾಜ ಕಾಲುವೆ

ನೆರೆಯ ಭೀತಿ ಸೃಷ್ಟಿಸುತ್ತಿದ್ದ ಮೂಳೂರು – ಬೆಳಪು ಜಾರಂದಾಯ ರಸ್ತೆಯಿಂದ ಕಲ್ಯ – ಇನ್ನಂಜೆ ರಸ್ತೆಯ ಮರ್ಕೋಡಿ ಸೇತುವೆಯವರೆಗಿನ ಸುಮಾರು 6 ಕಿ. ಮೀ. ಉದ್ದದ ರಾಜ ಕಾಲುವೆ ಮತ್ತು ತೋಡಿನಲ್ಲಿರುವ ಅಡೆತಡೆಗಳನ್ನು ಹಿಟಾಚಿಯ ಮೂಲಕ ತೆರವುಗೊಳಿಸುವ ಕೆಲಸ ನಡೆಯುತ್ತಿದೆ.

ಪುರಸಭೆ ಸದಸ್ಯರ ಉಸ್ತುವಾರಿ

Advertisement

ಆಯಾಯ ವಾರ್ಡ್‌ಗಳ ಪುರಸಭಾ ಸದಸ್ಯರು ಕಾಮಗಾರಿಯ ಗುಣಮಟ್ಟ ಪರಿಶೀಲನೆಯ ಜತೆಗೆ ಕಾಮಗಾರಿಯ ವೇಳೆ ಉಪಸ್ಥಿತರಿದ್ದು ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾಗದಂತೆ ಮತ್ತು ಪುರಸಭೆಯ ದುಡ್ಡು ಪೋಲಾಗದಂತೆ ಮುಂಜಾಗ್ರತೆ ವಹಿಸುತ್ತಿದ್ದಾರೆ.

12 ವರ್ಷಗಳ ಬಳಿಕ ಹೂಳು ತೆರವು

ರಾಜ ಕಾಲುವೆಯ ಹೂಳನ್ನು 12 ವರ್ಷ ಗಳ ಹಿಂದೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಮೇಲಕ್ಕೆತ್ತಲಾಗಿತ್ತು. ಆ ಬಳಿಕ ಅಂಥ ಕಾಮಗಾರಿ ನಡೆದಿರಲಿಲ್ಲ.

ಇಲ್ಲಿ ಹೂಳು ತುಂಬಿ, ಸರಾಗವಾಗಿ ನೀರು ಹರಿದು ಹೋಗಲು ಸಾಧ್ಯವಾಗದೆ ಪ್ರತೀ ವರ್ಷ ಮಳೆಗಾಲದಲ್ಲಿ ಕೃತಕ ನೆರೆಯ ಭೀತಿ ಎದುರಾಗುತ್ತಿತ್ತು. ಪುರಸಭೆ ವ್ಯಾಪ್ತಿಯಲ್ಲಿ ಕೃತಕ ನೆರೆಯ ಭೀತಿಯನ್ನು ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಅವರು ಉದಯವಾಣಿಗೆ ತಿಳಿಸಿದ್ದಾರೆ.

24×7 ಮಾದರಿಯಲ್ಲಿ ಕಂಟ್ರೋಲ್‌ ರೂಮ್‌

ಪುರಸಭೆ ವ್ಯಾಪ್ತಿಯ ಜನರಿಗೆ ಮಳೆಗಾಲದಲ್ಲಿ ಯಾವುದೇ ರೀತಿಯಲ್ಲಿ ತೊಂದರೆಗೊಳಗಾಗದಂತೆ ನೋಡಿಕೊಳ್ಳಲು 24ಗಿ7 ಮಾದರಿಯಲ್ಲಿ ಕಂಟ್ರೋಲ್‌ ರೂಮ್‌ ತೆರೆಯಲಾಗಿದೆ. ಗಾಳಿ, ಮಳೆ, ನೆರೆ ಸಹಿತವಾಗಿ ಪ್ರಾಕೃತಿಕ ವಿಕೋಪಕ್ಕೊಳಗಾಗುವ ಜನರು ಪುರಸಭೆಯ ಹೆಲ್ಪ್ ಲೈನ್‌ ಕಂಟ್ರೋಲ್‌ ರೂಂ.ನ ದೂರವಾಣಿ ಸಂಖ್ಯೆ 0820-2551061ಅಥವಾ ಮೊಬೈಲ್‌ ಸಂಖ್ಯೆ 8722801080 ಸಂಪರ್ಕಿಸಬಹುದಾಗಿದೆ.

ಹಿಂದಿನಂತಹ ಸಮಸ್ಯೆಗಳು ಕಾಣಿಸದು

ಪುರಸಭೆಯ ಮೂಲಕ ಹಾದು ಹೋಗುವ ಬೆಳಪು ಜಾರಂದಾಯ ರಸ್ತೆ ಬಳಿಯಿಂದ ಮರ್ಕೋಡಿ ಸೇತುವೆಯವರೆಗಿನ ರಾಜ ಕಾಲುವೆಯ ಹೂಳೆತ್ತುವಿಕೆ, ಸ್ವಚ್ಛಗೊಳಿಸುವಿಕೆ, ಗಿಡ ಗಂಟಿ ಮತ್ತು ಪೊದೆಗಳ ತೆರವುಗೊಳಿಸುವ ಕೆಲಸಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಹಿಟಾಚಿ ಯಂತ್ರವನ್ನು ಗೊತ್ತು ಪಡಿಸಿ, ಸುಮಾರು 6-7 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಹೂಳೆತ್ತುವಿಕೆ ಸಹಿತ ವಿವಿಧ ಕೆಲಸಗಳನ್ನು ನಡೆಸಲಾಗುತ್ತಿದ್ದು ಈ ಬಾರಿ ಮಳೆಗಾಲದಲ್ಲಿ ಹಿಂದಿನಂತಹ ಸಮಸ್ಯೆಗಳು ಉದ್ಭವವಾಗದಂತೆ ನೋಡಿಕೊಳ್ಳಲಾಗುತ್ತಿದೆ. -ವೆಂಕಟೇಶ್‌ ನಾವಡ, ಮುಖ್ಯಾಧಿಕಾರಿ, ಕಾಪು ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next