ಹುಬ್ಬಳ್ಳಿ: ಪಶುಗಳ ಚಿಕಿತ್ಸೆಗೆ ಪಶು ವೈದ್ಯಕೀಯ ಸೇವೆಗಳು ಪರಿಣಾಮಕಾರಿಯಾಗಿ ದೊರೆಯಬೇಕಿದ್ದು, ಈ ನಿಟ್ಟಿನಲ್ಲಿ ಸರಕಾರ ವಾಹನ ಸೇರಿದಂತೆ ಸೂಕ್ತ ಸೌಲಭ್ಯ ನೀಡಬೇಕಿದೆ ಎಂದು ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಹೇಳಿದರು.
ರಾಯಾಪುರದ ಕೆಎಂಎಫ್ ತರಬೇತಿ ಕೇಂದ್ರದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳು, ಪಶು ವೈದ್ಯರ ಸಂಘದಿಂದ ಆಯೋಜಿಸಿದ್ದ ಪಶು ವೈದ್ಯರ ತಾಂತ್ರಿಕ ಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್-19 ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಪಶುಗಳಿಗೆ ತಗುಲಿದ್ದ ಗಂಟು ರೋಗ ನಿಯಂತ್ರಿಸುವಲ್ಲಿ ಪಶು ವೈದ್ಯರ ಹಾಗೂ ಸಿಬ್ಬಂದಿ ಸೇವೆ ಶ್ಲಾಘನೀಯವಾಗಿದೆ. ಅವರ ಸೇವೆಗಳು ಗ್ರಾಮೀಣ ಪ್ರದೇಶದಲ್ಲಿ ಪರಿಣಾಮಕಾರಿ ದೊರೆಯಬೇಕಿದ್ದು, ಇಂತಹ ಸಂದಿಗ್ಧ ಸಂದರ್ಭದಲ್ಲಿ ಸೂಕ್ತ ಸೇವೆ ನೀಡಲು ಪ್ರತಿಯೊಬ್ಬ ವೈದ್ಯಾ ಧಿಕಾರಿಗಳಿಗೆ ವಾಹನ ಸೌಲಭ್ಯ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಪಂ ಸಿಇಒಗೆ ಮನವಿ ಮಾಡಲಾಗುವುದು ಎಂದರು.
ಇದನ್ನೂ ಓದಿ:ಕೃಷಿ ಸಚಿವ ಪಾಟೀಲ್ ಪ್ರತಿಕೃತಿ ದಹನ
ಇಲಾಖೆ ಉಪ ನಿರ್ದೇಶಕ ಡಾ| ಪರಮೇಶ್ವರ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಶು ಆಹಾರ ಘಟಕ ಪ್ರಧಾನ ವ್ಯವಸ್ಥಾಪಕ ಡಾ| ಕೆ.ಪಿ.ಶಿವಶಂಕರ, ಎಮ್ಮೆ ತಳಿ ಸಂವರ್ಧನಾ ಕೇಂದ್ರದ ಉಪನಿರ್ದೇಶಕ ಡಾ| ಶಶಿಧರ ನಾಡಗೌಡ್ರ, ಪಶು ಪರೀಕ್ಷಕರ ತರಬೇತಿ ಕೇಂದ್ರದ ಉಪ ನಿರ್ದೇಶಕ ಡಾ| ಅರವಿಂದ ಸರಾಫ್, ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ|ವೀರೇಶ ತರಲಿ ಪಾಲ್ಗೊಂಡಿದ್ದರು. ಡಾ|ಆರ್.ಎಂ.ಕೃಷ್ಣಪ್ಪ ಪ್ರಾರ್ಥಿಸಿದರು. ಡಾ| ಎಸ್.ಜಿ.ರೋಣ ಸ್ವಾಗತಿಸಿದರು, ಡಾ|ಶ್ರೀಕಾಂತ ಅರಗಂಜಿ ಪ್ರಾಸ್ತಾವಿಕ ಮಾತನಾಡಿದರು. ಡಾ| ಆರ್.ವಿ. ಕೋಟೂರು ವಂದಿಸಿದರು