Advertisement

ಟಿ.ಜಿ.ಹಳ್ಳಿ ಜಲಾಶಯ ಪುನಶ್ಚೇತನಕ್ಕೆ ಚಾಲನೆ

06:32 AM Mar 07, 2019 | |

ಬೆಂಗಳೂರು: ಹಿಂದೆ ರಾಜಧಾನಿ ಬೆಂಗಳೂರಿನ ಕುಡಿಯುವ ನೀರಿನ ಮೂಲವಾಗಿದ್ದ ತಿಪ್ಪಗೊಂಡನಹಳ್ಳಿ ಜಲಾಶಯದ ಪುನಶ್ಚೇತನ ಕಾಮಗಾರಿಗೆ ಬುಧವಾರ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‌ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಅವರು, ಮಾಸ್ತಿಗುಡಿ ಕನ್ನಡ ಸಿನಿಮಾ ಚಿತ್ರೀಕರಣದಲ್ಲಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಈ ಜಲಾಶಯಕ್ಕೆ ಭೇಟಿ ನೀಡಿದ್ದೆ. ಆಗ ಜಲಾಶಯದ ನೀರು ಸಂಪೂರ್ಣ ಹಸಿರಾಗಿರುವುದನ್ನು ಕಂಡು ಆಶ್ಚರ್ಯವಾಯಿತು. ಕೂಡಲೇ ಈ ಜಲಾಶಯ ನವೀಕರಣ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಒಟ್ಟಾರೆ ಪುನಶ್ಚೇತನಕ್ಕೆ ಮುಂದಾದೆವು ಎಂದು ಹೇಳಿದರು.

ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ಬೆಂಗಳೂರು ಹೊರ ಭಾಗದ ಪ್ರದೇಶಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರು ಕೆರೆ, ಜಲಾಶಯ ಸೇರದಂತೆ ಜಲಮಂಡಳಿ ಕಡಿವಾಣ ಹಾಕಬೇಕಿದೆ. ಇದಕ್ಕಾಗಿ ತಾವರೆಕೆರೆ, ಮಾಗಡಿ ಭಾಗದಲ್ಲಿ ಎಸ್‌ಟಿಪಿಗಳನ್ನು ಆರಂಭಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಭಾಗದ ಕರೆಗಳು ಕೂಡ ನೊರೆ ಉಗುಳುತ್ತವೆ ಎಂದು ತಿಳಿಸಿದರು.

ಏನಿದು ಯೋಜನೆ: ರಾಜಧಾನಿ ಜನತೆಯ ಕುಡಿಯುವ ನೀರಿಗೆ ಆಸರೆಯಾಗಲಿ ಎಂಬ ಉದ್ದೇಶದಿಂದ 1933ರಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ ಅವರು ನಿರ್ಮಿಸಿದ್ದ ತಿಪ್ಪಗೊಂಡನಹಳ್ಳಿ ಜಲಾಶಯ, 3.34 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಜಲಾಶಯದಿಂದ ಮೊದಲು ನಗರಕ್ಕೆ 135 ದಶ ಲಕ್ಷ ಲೀ. ನೀರು ಸರಬರಾಜು ಮಾಡಲಾಗುತ್ತಿತ್ತು. 90ರ ದಶಕದ ಬಳಿಕ ಜಲಾಶಯದಲ್ಲಿ ಹೂಳು ತುಂಬಿಕೊಂಡು, ಕೊಳಚೆ ನೀರು ಸೇರುವುದು ಹೆಚ್ಚಿದ್ದರಿಂದ 2012ರ ವೇಳೆಗೆ ನೀರು ಪೂರೈಕೆ ಸ್ಥಗಿತಗೊಂಡಿತ್ತು. ನಗರದಲ್ಲಿ ನೀರಿನ ಅವಶ್ಯಕತೆ ಹೆಚ್ಚಾಗುತ್ತಿದೆ.

ಹೀಗಾಗಿ, ಎತ್ತಿನಹೊಳೆ ಯೋಜನೆಯಿಂದ ಸಿಗುವ ನೀರಿನಲ್ಲಿ 0.8 ಟಿಎಂಸಿ ನೀರನ್ನು ಜಲಾಶಯಕ್ಕೆ ಹರಿಸಲಾಗುತ್ತದೆ. ಅದಕ್ಕೂ ಮುನ್ನ ಹೂಳು ತೆಗೆಯುವ ಹಿನ್ನೆಲೆಯಲ್ಲಿ 285.95 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ 260.34 ಕೋಟಿ ರೂ.
ವೆಚ್ಚದಲ್ಲಿ ಎಸ್‌ಟಿಪಿ ಹಾಗೂ ಕೊಳಚೆ ನೀರು ಪಂಪಿಂಗ್‌ ಕೇಂದ್ರ, ಜಲಾಶಯದ ಪಂಪ್‌ ಹೌಸ್‌ಗಳ ಉನ್ನತೀಕರಣ, ನಗರಕ್ಕೆ ನೀರು ತರಲು 22 ಕಿ.ಮೀ. ಉದ್ದದ ಉಕ್ಕಿನ ಕೊಳವೆ ಅಳವಡಿಸಲಾಗುತ್ತದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಟಿ.ಜಿ.ಹಳ್ಳಿ ಜಲಾಶಯದಿಂದ ಯಶವಂತಪುರ,  ಮಲ್ಲೇಶ್ವರ, ವಿಜಯನಗರ, ಯಲಹಂಕ ಭಾಗಗಳ 10 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸಬಹುದು ಎಂದು ಜಲಮಂಡಳಿಯ ಅಧಿಕಾರಿಗಳಿಗೆ ತಿಳಿಸಿದರು. ವಿಧಾನಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ, ಶಾಸಕರಾದ ಮುನಿರತ್ನ, ಎಸ್‌.ಟಿ.ಸೋಮಶೇಖರ್‌ ಹಾಜರಿದ್ದರು.

Advertisement

ಸುಮನಹಳ್ಳಿಯಿಂದ ನೈಸ್‌ ಜಂಕ್ಷನ್‌ವರೆಗೆ ಎಲಿವೇಟೆಡ್‌ ಕಾರಿಡಾರ್‌ ಮಾಡಿದರೆ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ. ಟ್ರಾಫಿಕ್‌ ಕಿರಿಕಿರಿಯೂ ತಪ್ಪುತ್ತದೆ. ಈ ಕುರಿತು ಬಿಡಿಎ ಯೋಜನೆ ರೂಪಿಸಬೇಕು.
 ●ಡಿ.ಕೆ.ಸುರೇಶ್‌, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next