Advertisement

2ನೇ ಹಂತದ ರಸ್ತೆ ಅಭಿವೃದ್ಧಿಗೆ ಪುಟ್ಟರಂಗಶೆಟ್ಟಿ ಚಾಲನೆ

12:44 PM Sep 21, 2017 | Team Udayavani |

ಚಾಮರಾಜನಗರ: ನಗರೋತ್ಥಾನ ಎರಡನೇ ಹಂತದ ಯೋಜನೆಯಡಿ ಚಾಮರಾಜೇಶ್ವರ ದೇವಾಲಯ, ರಥದ ಬೀದಿ ಹಾಗೂ ಭಗೀರಥನಗರದಿಂದ ರಾಮಸಮುದ್ರಕ್ಕೆ ಸಂಪರ್ಕ ಕಲ್ಪಿಸುವ 3.5 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.

Advertisement

ನಗರದ ಭಗೀರಥ ನಗರ ಮತ್ತು ಚಾಮರಾಜೇಶ್ವರ ದೇಗುಲದ ಮುಂಬಾಗ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಈಗ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಯಲ್ಲಿ ಭಗೀರಥನಗರದಿಂದ ರಾಮಸಮುದ್ರದ ಕುಲುಮೆವರೆಗೆ 2 ಕೋಟಿ.ರೂ ವೆಚ್ಚದಲ್ಲಿ ಹಾಗೂ ಚಾಮರಾಜೇಶ್ವರ ದೇವಸ್ಥಾನದ ಉದ್ಯಾನದ ಮುಂಭಾಗದಿಂದ ನಗರಸಭೆ ಕಚೇರಿ ಸಮೀಪದ ಅಂಗಡಿ ಬೀದಿಯವರೆಗೆ ಮತ್ತು ರಥದ ಬೀದಿಯಿಂದ ಹಳೆ ಮಾರ್ಕೆಟ್‌ವರೆಗೆ 1.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಕೇಂದ್ರ ಈಗಾಗಲೇ ಬೆಳೆಯುತ್ತಿದ್ದು, ನಗರದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು. ನಗರ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಕೆಲವು ಕಡೆಗಳಲ್ಲಿ ರಸ್ತೆ ನಿರ್ಮಿಸಲು ನಿಗದಿತ ಅವಧಿಯಲ್ಲಿ ಸಾಧ್ಯವಾಗಿಲ್ಲ. ಇದೀಗ ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

2 ತಿಂಗಳೊಳಗೆ ಪೂರ್ಣಗೊಳಿಸಿ: ಈಗಾಗಲೇ ಪಿಕಾಡೋ ಆಸ್ಪತ್ರೆಯಿಂದ ಚೆನ್ನಿಪುರದಮೋಳೆ ಶಾಲೆವರೆಗೆ, ಸಂಪಿಗೆ ರಸ್ತೆಯಲ್ಲೂ ಕಾಮಗಾರಿ ನಡೆಯುತ್ತಿದೆ. ಚಾಲನೆ ನೀಡಿರುವ ರಸ್ತೆಗಳು, ಈಗಾಗಲೇ ಪ್ರಗತಿಯಲ್ಲಿರುವ ಎಲ್ಲಾ ರಸ್ತೆ ಕಾಮಗಾರಿಗಳೂ ಇನ್ನೆರಡು ತಿಂಗಳೊಳಗೆ ಪೂರ್ಣಗೊಳ್ಳಲಿವೆ ಎಂದು ವಿವರಿಸಿದರು.

ಎಲ್ಲಾ ರಸ್ತೆಗಳ ಅಭಿವೃದ್ಧಿ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ನಮ್ಮ ಸರ್ಕಾರ ಜಿಲ್ಲಾ
ಕೇಂದ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಟ್ಟಣದ ಅಭಿವೃದ್ಧಿಗಾಗಿ 50 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳದ ಕಾರಣ, ಇನ್ನೂ ಕೆಲವು ಕಡೆ ರಸ್ತೆ ಕಾಮಗಾರಿ ಮಾಡಲಾಗಿಲ್ಲ. ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಅದಾದ ಬಳಿಕ ನಗರದ ಎಲ್ಲಾ ರಸ್ತೆಗಳನ್ನೂ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಪಿ.ಸದಾಶಿವಮೂರ್ತಿ, ತಾಲೂಕು ಪಂಚಾಯ್ತಿ ಅಧ್ಯಕ್ಷ ಎಚ್‌.ವಿ.ಚಂದ್ರು, ನಗರಸಭೆ ಪ್ರಬಾರ ಅಧ್ಯಕ್ಷ ರಾಜಪ್ಪ, ಸದಸ್ಯರಾದ ಮಹೇಶ್‌ ಉಪ್ಪಾರ್‌, ಚಿನ್ನಸ್ವಾಮಿ, ಮಾಜಿ ಸದಸ್ಯರಾದ ಮಹಮದ್‌ ಅಸ್ಕರ್‌, ಪುಟ್ಟಸ್ವಾಮಿ, ನಾಗರಾಜು, ಪೌರಾಯುಕ್ತ ರಾಜಣ್ಣ, ಎಇಇ ಸತ್ಯಮೂರ್ತಿ, ಗುತ್ತಿಗೆದಾರ ಯೋಗಾನಂದ, ಶ್ರೀನಿವಾಸಪ್ರಸಾದ್‌, ಜಯಕುಮಾರ್‌, ಆನಂದ್‌, ಮತ್ತಿತರರು ಉಪಸ್ಥಿತರಿದ್ದರು. 

ಪೌರಕಾರ್ಮಿಕರಿಗೆ ಹಕ್ಕುಪತ್ರ ವಿತರಣೆ: ನಗರದ ಸಿಡಿಎಸ್‌ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 120 ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ನಿವೇಶನದ ಹಕ್ಕುಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರು ಪಟ್ಟಣ ಪ್ರದೇಶದಲ್ಲಿ ಸ್ವತ್ಛತೆಗಾಗಿ ಬಹಳ ಶ್ರಮಿಸಿ ತಮ್ಮ ಜೀವನದ ಹಂಗನ್ನೂ ತೊರೆದು ಕಷ್ಟದ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಅವರಿಗಾಗಿ ನಗರದ ಯಡಪುರದ
ಬಳಿ 90, ಸೋಮವಾರಪೇಟೆಯಲ್ಲಿ 22 ಮತ್ತು ರಾಮಸಮುದ್ರದಲ್ಲಿ 8 ನಿವೇಶನಗಳ ಸ್ಥಳ ಗುರುತಿಸಿ ಕಾಯಂ ಹಾಗೂ ಹೊರಗುತ್ತಿಗೆದಾರರು ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಕೂಡ ಸೂರನ್ನು ಒದಗಿಸಲಾಗುವುದು ಎಂದು ಹೇಳಿದರು.

ರಾಷ್ಟ್ರೀಯ ಯೋಜನೆಯಡಿ ಸರ್ಕಾರದಿಂದ ಕಾಯಂ ಪೌರ ಕಾರ್ಮಿಕರಿಗೆ 7 ಲಕ್ಷ ರೂ., ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ 3.30 ಲಕ್ಷ ರೂ. ನೀಡಿ, ಆದಷ್ಟು ಬೇಗ ಮನೆ ನಿರ್ಮಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ
ಎಂದು ಹೇಳಿದರು. ಈಗಾಗಲೇ ಆ ಸ್ಥಳದಲ್ಲಿ 2 ಕೊಳವೆಬಾವಿಗಳನ್ನು ಕೊರೆಸಲಾಗಿದೆ ಇದರ ಜೊತೆಗೆ ಮೂಲಭೂತ ಸೌಕರ್ಯಗಳನ್ನೂ ಕೂಡ ಆದಷ್ಟು ಬೇಗ ಕಲ್ಪಿಸಲಾಗುವುದು ಎಂದು ಹೇಳಿದರು.

ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ನಿಮ್ಮ ಹಾಗೆ ನಿಮ್ಮ ಮಕ್ಕಳನ್ನೂ ಕೂಡ ಕಸ ಗುಡಿಸುವ ಕೆಲಸಕ್ಕೆ ಕಳುಹಿಸದೆ ಒಳ್ಳೆ ವಿದ್ಯಾವಂತರನ್ನಾಗಿ ಮಾಡಿ. ಉದ್ಯೋಗ ಸಿಗುವಂತೆ ಶಿಕ್ಷಣ ಕೊಡಿಸಿ ಹಾಗೂ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಶಾಸಕರು ಈ ಸಂದರ್ಭದಲ್ಲಿ ಸಲಹೆ ನೀಡಿದರು. ನಗರಸಬಾ ಪೌರಾಯುಕ್ತ ರಾಜಣ್ಣ, ಮಲ್ಲೇಶ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next