Advertisement

“ಗದುಗಿನ ಭಾರತ’ವಿಚಾರ ಸಂಕಿರಣಕ್ಕೆ ಚಾಲನೆ

04:33 PM Apr 01, 2022 | Team Udayavani |

ಗದಗ: ಜನಸಮುದಾಯ ಧರ್ಮ ಮಾರ್ಗದಲ್ಲಿ ನಡೆದು, ಮಾನವ ತನ್ನ ಉನ್ನತಿ ಸಾಧಿಸಬೇಕೆಂಬ ಮಹದುದ್ದೇಶದಿಂದ ಕುಮಾರವ್ಯಾಸ ಮಹಾಭಾರತವನ್ನು ಕನ್ನಡದಲ್ಲಿ ರಚಿಸಿದ್ದಾರೆ. ಧರ್ಮದ ಮೂಲಕ ನಡೆಯುವವರಿಗೆ ಜಯ ಸಿಗುತ್ತದೆ. ಪಾತ್ರಗಳ ಮೂಲಕ ಧರ್ಮ, ಅಧರ್ಮದ ವಿಚಾರಗಳನ್ನು ಸರಳವಾಗಿ ತಿಳಿಸುತ್ತಾ ಕೃಷ್ಣನ ಪಾರಮ್ಯ ಮೆರೆದಿದ್ದಾರೆಂದು ಜ|ತೋಂಟದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.

Advertisement

ಕನ್ನಡ ಸಾಹಿತ್ಯ ಪರಿಷತ್‌ ವೀರನಾರಾಯಣ ದೇವಸ್ಥಾನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕವಿ ಕುಮಾರವ್ಯಾಸ ವಿರಚಿತ “ಗದುಗಿನ ಭಾರತ’ ಕುರಿತು ವಿಚಾರ ಸಂಕಿರಣ ಹಾಗೂ ಗಮಕ ವಾಚನ ಪ್ರಾತ್ಯಕ್ಷಿಕೆ ಉದ್ಘಾಟಿಸಿ ಅವರು ಮಾತನಾಡಿದರು.

ಕುಮಾರವ್ಯಾಸ ಗದುಗಿನ ಭಾರತದಲ್ಲಿ ಜೀವನ ನಿರ್ವಹಣೆಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಮನೆ ಮನಗಳಲ್ಲಿ ಪಾರಾಯಣ ಮಾಡುತ್ತಿದ್ದರು. ನಾನು ಕೇವಲ ಲಿಪಿಕಾರ ಎನ್ನುವಲ್ಲಿ ವಿನಯಶೀಲತೆಯ ಸಾಕಾರಮೂರ್ತಿಯಾಗಿ ಕಾಣುತ್ತಾರೆಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ನಾಡಿನ ಶ್ರೇಷ್ಠ ಕವಿ ಕುಮಾರವ್ಯಾಸ ಕರ್ಮಭೂಮಿಯಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಿ ಹಳಗನ್ನಡ, ನಡುಗನ್ನಡದ ಕಾವ್ಯದ ಬಗ್ಗೆ ಆಸಕ್ತಿ ಮೂಡಿಸಬೇಕು. ಕಾವ್ಯವನ್ನು ವಾಚನ ಮಾಡುವ ಕಲೆಯನ್ನು ಕೂಡಾ ರೂಢಿಸುವ ಉದ್ದೇಶ ಹೊಂದಲಾಗಿದೆ. ಶಿಕ್ಷಣ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಈ ನೆಲದ ಸಾಹಿತ್ಯ ಸಂಸ್ಕೃತಿಯನ್ನು ಅನಾವರಣಗೊಳಿಸುವ ಕಾರ್ಯವನ್ನು ಪರಿಷತ್‌ ಮಾಡಲಿದೆ ಎಂದು ತಿಳಿಸಿದರು.

ಡಯಟ್‌ ಉಪನಿರ್ದೇಶಕ ಎಸ್‌.ಡಿ.ಗಾಂಜಿ ಮಾತನಾಡಿ, ಗದುಗಿನ ಭಾರತ ಭಾಷಾವಿನ್ಯಾಸದಿಂದ ಗಮನ ಸೆಳೆಯುತ್ತದೆ. ಅಲಂಕಾರ, ಛಂದಸ್ಸು, ರೂಪಕಗಳನ್ನು ಶಿಕ್ಷಕರು ಸರಿಯಾಗಿ ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳಿಗೆ ತಿಳಿಸಿದಾಗ ಹಳಗನ್ನಡ, ನಡುಗನ್ನಡದ ಕಾವ್ಯದಲ್ಲಿ ಆಸಕ್ತಿ ಹುಟ್ಟಿಸಲು ಸಾಧ್ಯವಾಗುತ್ತದೆ ಎಂದರು.

Advertisement

ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎಚ್‌. ಕಡಿವಾಲ ಮಾತನಾಡಿ, ಜಿಲ್ಲೆಯ ಸಂಗೀತ ಶಿಕ್ಷಕರನ್ನು ಬಳಸಿಕೊಂಡು ಪಠ್ಯದಲ್ಲಿ ಬರುವ ಕವಿತೆಗಳನ್ನು ಶಾಲಾ ಮಕ್ಕಳಿಗೆ ಕಲಿಸುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಬೇಕು. ಹಳಗನ್ನಡ ಕಾವ್ಯವನ್ನು ಅರ್ಥೈಸಿಕೊಳ್ಳುವ ದಿಸೆಯಲ್ಲಿ ಅನೇಕ ಕಾರ್ಯಾಗಾರ ನಡೆಯಬೇಕೆಂದು ತಿಳಿಸಿದರು.

ವೀರನಾರಾಯಣ ಹಾಗೂ ತ್ರಿಕೂಟೇಶ್ವರ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಡಾ.ಕುಶಾಲ ಗೋಡಿಖೀಂಡಿ ಅಧ್ಯಕ್ಷತೆ ವಹಿಸಿದ್ದರು. ಕುಮಾರವ್ಯಾಸ ವಂಶಸ್ಥರಾದ ಡಾ.ಎಸ್‌.ಜಿ.ಪಾಟೀಲ, ಕೆ.ಎಚ್‌.ಬೇಲೂರ, ಡಾ. ಜಿ.ಬಿ.ಪಾಟೀಲ, ಡಾ. ಕೆ. ಯೋಗೇಶನ್‌, ರಮೇಶ ಕಲ್ಲನಗೌಡರ, ಎಸ್‌.ಯು.ಸಜ್ಜನಶೆಟ್ಟರ, ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಈರಣ್ಣ ಮಾದರ, ಶಿವಾನಂದ ಭಜಂತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next