ಸೋಮೇಶ್ವರ: ಕೃಷಿಯಲ್ಲಿ ನಾವು ಬಿತ್ತನೆ ಮಾಡುವುದು ಸಾಮಾನ್ಯ ಆದರೆಮೀನು ಬಿತ್ತನೆ ಮಾಡುವುದು ಒಂದು ವಿನೂತನ ಕಾರ್ಯಕ್ರಮವಾಗಿದ್ದು ಈ ನಿಟ್ಟಿನಲ್ಲಿ ಕೇಸರಿ ಮಿತ್ರವೃಂದ ಮತ್ತು ರೋಟರಿ ಕ್ಲಬ್ ಮೀನುಗಾರಿಕಾ ಇಲಾಖೆಯೊಂದಿಗೆ ಸೇರಿಕೊಂಡು ಧಾರ್ಮಿಕ ಕ್ಷೇತ್ರದ ಪವಿತ್ರ ಕೆರೆಯಲ್ಲಿಮೀನು ಬಿತ್ತನೆ ಮಾಡಿರುವುದು ಶ್ಲಾಘನೀಯ ಎಂದು ದ.ಕ. ಜಿಲ್ಲಾ ಪಂಚಾಯತ್ ಸದಸ್ಯ ಧನಲಕ್ಷ್ಮೀ ಗಟ್ಟಿ ಅಭಿಪ್ರಾಯಪಟ್ಟರು.
ಅವರು ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ ಕುಂಪಲ, ಕೇಸರಿ ಮಾತೃ ಮಂಡಳಿ ಇದರ ವತಿಯಿಂದ ದ.ಕ. ಜಿಲ್ಲಾ ಪಂಚಾಯತ್ ಮೀನುಗಾರಿಕಾ ಇಲಾಖೆ, ಸೋಮೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ, ರೋಟರಿ ಕ್ಲಬ್ ಮಂಗಳೂರು ಇವರ ಸಹಕಾರದೊಂದಿಗೆ ಸೋಮೇಶ್ವರ ದೇವಸ್ಥಾನದ ದೇವರ ಕೆರೆಯಲ್ಲಿ ಮೀನು ಮರಿ ಬಿತ್ತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕಿ ಸುಶ್ಮಿತಾ ರಾವ್ ಇವರು ಕೆರೆಗಳ ಸ್ವಚ್ಛತೆಯಲ್ಲಿ ಮೀನುಗಳ ಪಾತ್ರಗಳ ಬಗ್ಗೆ ತಿಳಿಸಿದರು. ಸೋಮೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಸೋಮೇಶ್ವರ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಉಚ್ಚಿಲ್, ರೋಟರಿ ಕ್ಲಬ್‌ನ ಮಾಧವ ಸುವರ್ಣ, ಕೇಸರಿ ಮಿತ್ರ ವೃಂದದ ಅಧ್ಯಕ್ಷ ನವೀನ್ ಕುಜುಮಗದ್ದೆ, ಶಿವಪ್ರಕಾಶ್, ಟ್ರಸ್ಟಿ ಬಿ. ನಾರಾಯಣ, ಕೇಸರಿ ಮಿತ್ರ ವೃಂದ, ಕೇಸರಿ ಮಾತೃ ಮಂಡಳಿಯ ಸದಸ್ಯರು, ಜಿಲ್ಲಾ ಪಂಚಾಯತ್ ಸಿಬಂದಿಗಳು ಉಪಸ್ಥಿತರಿದ್ದರು. ಸಂದೀಪ್ ಕುಂಪಲ
ಸ್ವಾಗತಿಸಿದರು, ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸುಮಾರು 2000 ಮೀನುಮರಿಗಳ ಬಿತ್ತನೆ ಮಾಡಲಾಯಿತು.