ಹುಬ್ಬಳ್ಳಿ: ನಿರ್ಮಾಣ ಕಾರ್ಯ ಸರಳ ಹಾಗೂ ಸುಲಭವಾಗಿಸುವ ನಿಟ್ಟಿನಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಅನ್ವೇಷಣೆಗಳು ನಡೆಯುತ್ತಿದೆ. ಇದರಿಂದ ವೆಚ್ಚ ಹಾಗೂ ಕಡಿಮೆ ಅವಧಿಯಲ್ಲಿ ಕಟ್ಟಡ ನಿರ್ಮಾಣ ಸಾಧ್ಯವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಇಂದಿರಾ ಗಾಜಿನ ಮನೆಯಲ್ಲಿ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಸಂಸ್ಥೆಯಿಂದ ಆಯೋಜಿಸಿರುವ ಮೂರು ದಿನದ ಕಾನ್ -ಮ್ಯಾಟ್ ಕಟ್ಟಡ ನಿರ್ಮಾಣ ಸಾಮಗ್ರಿಗಳ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ನಿರ್ಮಾಣ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆ ಕೇವಲ ರಿಯಲ್ ಎಸ್ಟೇಟ್, ಎಂಜಿನಿಯರ್ಗಳಲ್ಲದೆ ಜನಸಾಮಾನ್ಯರಿಗೆ ತಿಳಿಸುವ ಇಂತಹ ಪ್ರದರ್ಶನಗಳು ನಡೆಯಬೇಕು. ನಿರ್ಮಾಣ ಕ್ಷೇತ್ರದಲ್ಲಿನ ತಂತ್ರಜ್ಞಾನದ ಬದಲಾವಣೆ, ಹೊಸ ಅನ್ವೇಷಣೆಗಳ ಮಾಹಿತಿ ಜನರಿಗೆ ಗೊತ್ತಾಗುತ್ತದೆ. ಇದರಿಂದ ಸೂರು ನಿರ್ಮಿಸಿಕೊಳ್ಳಬೇಕು ಎನ್ನುವವರಿಗೆ ಕಡಿಮೆ ವೆಚ್ಚ, ಹೆಚ್ಚು ಬಾಳಿಕೆ ಬರುವ ಸಾಮಗ್ರಿಗಳ ಆಯ್ಕೆಗೆ ಅನುಕೂಲವಾಗುತ್ತದೆ. ಕಟ್ಟಡ ನಿರ್ಮಾಣಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಒಂದೇ ಸೂರಿನಡಿ ಜನರಿಗೆ ಮಾಹಿತಿ ನೀಡುವ ಈ ಕಾರ್ಯ ಉತ್ತಮವಾಗಿದೆ ಎಂದು ಶ್ಲಾಘಿಸಿದರು.
ಆಡಳಿತದ ದುರ್ಬಲತೆ: ಸರಕಾರದ ಯೋಜನೆಗಳು ಸಾಕಷ್ಟಿದ್ದರೂ ಅಧಿಕಾರಿಗಳ ಕಾರ್ಯವೈಖರಿಯಿಂದ ಅನುಷ್ಠಾನಕ್ಕೆ ಬರುತ್ತಿಲ್ಲ. ಇದು ಆಡಳಿತದ ದುರ್ಬಲತೆಗೆ ಸಾಕ್ಷಿಯಾಗಿದೆ. ಹು-ಧಾ ಕೇಂದ್ರ ವಿಧಾನಸಭೆ ಕ್ಷೇತ್ರದಲ್ಲಿ ಸುಮಾರು 200 ಎಕರೆ ಜಮೀನು ಖರೀದಿಸಿ ಜನರಿಗೆ ಆಶ್ರಯ ಮನೆಗಳನ್ನು ನಿರ್ಮಿಸಬೇಕು ಎಂಬ ಚಿಂತನೆಯಿದೆ. ಆರಂಭದಲ್ಲಿ ಸುಮಾರು 100 ಎಕರೆ ಜಮೀನು ಕೊಡಲು ರೈತರು ಮುಂದೆ ಬಂದಿದ್ದು, ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅನಧಿಕೃತ ಬಡಾವಣೆ: ಮಹಾನಗರದ ಅಭಿವೃದ್ಧಿಗೆ ಪೂರಕವಾಗಿ ನಗರ ಅಭಿವೃದ್ಧಿ ಯೋಜನೆ (ಸಿಡಿಪಿ) ಪ್ರಸ್ತಾವನೆ ಕಳುಹಿಸಿ ಎರಡು ವರ್ಷ ಆದರೂ ಸರಕಾರ ಅನುಮೋದನೆ ನೀಡಿಲ್ಲ. ಹುಡಾ ನಿರ್ಲಕ್ಷéದಿಂದ ನಗರದಲ್ಲಿ ಅನಧಿಕೃತ ಬಡಾವಣೆ ನಿರ್ಮಾಣವಾಗಿವೆ. ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಯಾವುದೇ ದಾಖಲೆಗಳಿಲ್ಲದ ನಿವೇಶನಗಳನ್ನು ಖರೀದಿಸಿ ಬಡ ಹಾಗೂ ಮಧ್ಯಮ ವರ್ಗದ ಜನರು ವಂಚನೆಗೊಳಗಾಗುತ್ತಾರೆ ಎಂದು ಹೇಳಿದರು.
ಉದ್ಯಮಿ ಸುರೇಶ ಶೇಜವಾಡಕರ ಮಾತನಾಡಿ, ಕಟ್ಟಡಗಳನ್ನು ಬೇಗ ಮುಗಿಸುವುದರಿಂದ ಖರ್ಚು ಕೂಡ ಕಡಿಮೆಯಾಗುತ್ತದೆ ಎನ್ನುವ ಮನಸ್ಥಿತಿ ಜನರಲ್ಲಿದೆ. ಅದಕ್ಕೆ ಪೂರಕವಾಗಿ ಇಂದಿನ ತಂತ್ರಜ್ಞಾನ ನಿರ್ಮಾಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ನಿರ್ಮಾಣ ಕ್ಷೇತ್ರದಲ್ಲಿ ಎಂಜಿನಿಯರ್‌ಗಳ ಪಾತ್ರ ಬಹುಮುಖ್ಯವಾಗಿದೆ ಎಂದರು.
ಅದ್ವೈ ತ ವಿದ್ಯಾಶ್ರಮದ ಶ್ರೀ ಪ್ರಣವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆಶೀರ್ವಾದ ಪೈಪ್ ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ ಹೇಮಂತ್ ವರ್ಮಾ, ಎಸಿಸಿಇ ಅಧ್ಯಕ್ಷ ಶ್ರೀಕಾಂತ ಪಾಟೀಲ, ಉದ್ಯಮಿ ಜಿ.ಸಿ. ಪಾಟೀಲ ಮಾತನಾಡಿದರು.
ಎಸಿಸಿಇ ಪದಾಧಿಕಾರಿಗಳಾದ ಅಶೋಕ ಬಸವಾ, ಸುರೇಶ ಕಿರೇಸೂರ, ನಾರಾಯಣ ಪ್ರಸಾದ ಪಾಠಕ, ಉಮೇಶ ನೀಲಿ, ಸಂಜೀವ ಜೋಶಿ, ವಸಂತ ಪಾಲನಕರ ಇನ್ನಿತರರಿದ್ದರು.
ಒಂದೇ ಸೂರಿನಡಿ ಎಲ್ಲ ಲಭ್ಯ
ಕಟ್ಟಡ ನಿರ್ಮಾಣ ಹಾಗೂ ಮನೆ ಸೌಂದರ್ಯಕ್ಕೆ ಅಗತ್ಯ ವಸ್ತುಗಳು ಒಂದೇ ಸೂರಿನಲ್ಲಿ ಪ್ರದರ್ಶದಲ್ಲಿವೆ. ಫೆ. 17ರ ವರೆಗೆ ಇಂದಿರಾ ಗಾಜಿನಮನೆಯಲ್ಲಿ ಆಯೋಜಿಸಿದ್ದು, ಪ್ರವೇಶ ಉಚಿತವಾಗಿದೆ. ಸಿಮೆಂಟ್, ಸಿಮೆಂಟ್ ಇಟ್ಟಿಗೆ, ಕಬ್ಬಿಣ ಕಂಬಿ, ಪೈಪ್, ಪೀಠೊಪಕರಣ, ಮರಳು, ಟೈಲ್ಸ್, ಮಾರ್ಬಲ್ಸ್ ಸೇರಿದಂತೆ ವಿವಿಧ ಸಾಮಗ್ರಿಗಳಿವೆ. ಮನೆ ನಿರ್ಮಾಣಕ್ಕೆ ಅಗತ್ಯ ಮಾಹಿತಿಯೂ ದೊರೆಯಲಿದೆ. ಮನೆ ನಿರ್ಮಾಣಕ್ಕೆ ಬೇಕಾದ ಸಾಲ, ಸಾಲದ ಮಾಹಿತಿ ನೀಡಲು ವಿವಿಧ ಬ್ಯಾಂಕ್‌ನವರು ಸ್ಟಾಲ್‌ಗಳನ್ನು ಹಾಕಿದ್ದಾರೆ. ಪೀಠೊಪಕರಣಗಳ ಖರೀದಿ ವ್ಯವಸ್ಥೆಯೂ ಇದೆ.