ಚಿಕ್ಕಮಗಳೂರು: ನಗರದಿಂದ ಐಡಿಪೀಠ-ಮಹಲ್‌ಗೆ ಸಂಪರ್ಕ ಕಲ್ಪಿಸುವ ಜತೆಗೆ ಕಡೂರು -ಚಿಕ್ಕಮಗಳೂರು ತಡೆರಹಿತ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಶಾಸಕ ಸಿ.ಟಿ. ರವಿ ಗುರುವಾರ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಿಂದ ಐಡಿಪೀಠದ ಮಹಲ್ ವರೆಗೆ ಸರ್ಕಾರಿ ಬಸ್ ಸಂಚಾರ ಕಲ್ಪಿಸುವಂತೆ ಆ ಭಾಗದ ಜನರು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದರು. ಈ ಹಿಂದೆ ಐಡಿಪೀಠದವರೆಗೂ ಬಸ್ ಸಂಚಾರವಿತ್ತು. ಇದೀಗ ಅದನ್ನು ಮಹಲ್‌ವರೆಗೂ ವಿಸಸ್ತರಣೆ ಮಾಡಲಾಗಿದೆ. ಇದರಿಂದಾಗಿ ಈ ಭಾಗದ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಹಾಗೂ ನಗರಕ್ಕೆ ಬರುವವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು. ಕೋವಿಡ್ ಮತ್ತಿತರ ಕಾರಣದಿಂದಾಗಿ ಈ ಭಾಗಕ್ಕೆ ಬಸ್ ಸೌಕರ್ಯ ವಿಸ್ತರಣೆಯಾಗಿರಲಿಲ್ಲ, ಇದೀಗ ಗ್ರಾಮಸ್ಥರು, ಜನಪ್ರತಿನಿ ಧಿಗಳು ಬಸ್ ಸಂಚಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಭಾಗದಲ್ಲಿ ಹೆಚ್ಚಿನ ಮಂದಿ ಕಾμತೋಟಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿದ್ದು ದುಬಾರಿ ಬೆಲೆ ನೀಡಿ ಆಟೋಗಳಲ್ಲಿ ಸಂಚಾರ ಮಾಡಬೇಕಿತ್ತು. ಈ ಸಮಸ್ಯೆ ಇದೀಗ ನಿವಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜತೆಗೆ ಚಿಕ್ಕಮಗಳೂರು-ಕಡೂರು ಸಂಚರಿಸುವ ತಡೆರಹಿತ ಬಸ್‌ಗೆ ಚಾಲನೆ ನೀಡಿ ಈಗಾಗಲೇ ಹೆದ್ದಾರಿ ಕಾಮಗಾರಿ ಶೇ.95 ರಷ್ಟು ಪೂರ್ಣಗೊಂಡಿದ್ದು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪ್ರತಿ ಅರ್ಧ ಗಂಟೆಗೊಮ್ಮೆ ತಡೆ ರಹಿತ ಬಸ್ ಸಂಚರಿಸಲಿದೆ. ರೈಲು ನಿಲ್ದಾಣದ ಬಳಿ ಸರ್ಕಾರಿ ಬಸ್ ನಿಲ್ದಾಣ ಸ್ಥಾಪನೆಗೆ ಚಿಂತನೆ ಇದ್ದು ಇದಕ್ಕಾಗಿ ಅಗತ್ಯ ಜಾಗಬೇಕಿದೆ. ರೈಲು ನಿಲ್ದಾಣದ ಬಳಿ ಖಾಸಗಿ ಜಮೀನುಗಳಿದ್ದು ಅಲ್ಲಿನ ರೈತರ ಮನವೊಲಿಸಿ ಅದಕ್ಕೆ ತಗಲುವ ವೆಚ್ಚ ನೀಡಿ ಭೂಸ್ವಾ ಧೀನ ಪಡಿಸಿಕೊಳ್ಳಬೇಕಿದೆ.
ಸದ್ಯದ ಮಟ್ಟಿಗೆ ಸಾರಿಗೆ ನಿಗಮಗಳು ಕೋವಿಡ್ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ಹಾಸನ- ಶಿವಮೊಗ್ಗ ಮಾದರಿಯಲ್ಲಿ ಬಸ್ ನಿಲ್ದಾಣ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾ ಧಿಕಾರಿ ವೀರೇಶ್ ಮಾತನಾಡಿ, ಚಿಕ್ಕಮಗಳೂರು ಹಾಗೂ ಕಡೂರಿಗೆ ತಡೆರಹಿತ ಬಸ್ ಸಂಚಾರ ಆರಂಭಿಸಲಾಗಿದ್ದು ಜತೆಗೆ ಮಹಲ್ ಭಾಗಕ್ಕೆ ಬಸ್‌ವ್ಯವಸ್ಥೆ ಕಲ್ಪಿಸಿದ್ದು ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ವಿಭಾಗೀಯ ತಾಂತ್ರಿಕ ಶಿಲ್ಪಿ ಬಿ.ಎಸ್. ರಮೇಶ್, ವಿಭಾಗೀಯ ಸಂಚಾರ ಅಧಿ ಕಾರಿ ದಿನೇಶ್ ಚೆನ್ನಗಿರಿ, ಸಹಾಯಕ ಕಾರ್ಯನಿವಾರ್ಹಕ ಅಭಿಯಂತರ ಸಿ.ಆರ್. ರಮೇಶ್. ಘಟಕ ವ್ಯವಸ್ಥಾಪಕ ಕರುಣಾಕರ್ ಪಡುಕೋಣೆ, ಗ್ರಾಪಂ ಸದಸ್ಯ ಮೀನಾಕ್ಷಿ, ಮಾಜಿ ಸದಸ್ಯ ಮಂಜು, ಸುರೇಂದ್ರ, ಶೀಲಾ, ಗುರುವೇಶ್, ಶಿವಕುಮಾರ್, ಮೋಹನ್ ಕುಮಾರ್, ಅಣ್ಣಪ್ಪ, ಗಂಗರಾಜು, ಚಂಗಪ್ಪ ಹಾಗೂ ಸಿಬ್ಬಂದಿ ಇದ್ದರು.