ಬೆಂಗಳೂರು: ಬಾಗಲೂರಿನ ಬಳಿ ಕ್ವಾರಿಯನ್ನು ವೈಜ್ಞಾನಿಕವಾಗಿ ಭರ್ತಿ ಮಾಡಿ ಉದ್ಯಾನವಾಗಿ ಪರಿವರ್ತಿಸಿರುವ ಬಿಬಿಎಂಪಿ, ಇದೀಗ ಅದೇ ಭಾಗದಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದ್ದು, ಶುಕ್ರವಾರ ಸಚಿವರಾದ ಕೆ.ಜೆ.ಜಾರ್ಜ್ ಹಾಗೂ ಡಿ.ಕೆ.ಶಿವಕುಮಾರ್ ಘಟಕ ಸ್ಥಾಪನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ನಗರದಲ್ಲಿನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಖಾಸಗಿ ಸಹಭಾಗಿತ್ವದಲ್ಲಿ ಘಟಕ ಸ್ಥಾಪನೆಗೆ ಪಾಲಿಕೆ ಯೋಜನೆ ರೂಪಿಸಿದ್ದು, ಘಟಕದಲ್ಲಿ ನಿತ್ಯ 600 ಟನ್ ತ್ಯಾಜ್ಯವನ್ನು ಸಂಸ್ಕರಿಸಿ 8.5 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ. ನೆದರ್‌ಲ್ಯಾಂಡ್ ಮೂಲದ ನೆಕ್ಸೆಸ್ ನೋವಾಸ್ ಗ್ರೂಪ್ ಯೋಜನೆಗೆ ಹಣ ಹೂಡುತ್ತಿದ್ದು, ಅದಕ್ಕೆ ಬದಲಾಗಿ ವಿದ್ಯುತ್ ಮಾರಾಟ ಹಕ್ಕನ್ನು ಸಂಸ್ಥೆಗೆ ನೀಡಲಾಗುತ್ತದೆ.
ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಯೋಜನೆಗಾಗಿ ಬಿಬಿಎಂಪಿ ಬಾಗಲೂರು ಬಳಿ ಸಂಸ್ಥೆಗೆ 7.41 ಎಕರೆ ನೀಡಲಿದೆ. ಅದರಂತೆ ನೆಕ್ಸೆಸ್ ನೋವಾಸ್ ಸಂಸ್ಥೆ ಯೋಜನೆಗಾಗಿ 250 ಕೋಟಿ ರೂ. ಬಂಡವಾಳ ಹೂಡಲಿದ್ದು, 20 ವರ್ಷಗಳ ಕಾಲ ಘಟಕವನ್ನು ನಿರ್ವಹಣೆ ಮಾಡಲಿದೆ. ಘಟಕದಲ್ಲಿ ನಿರ್ಮಾಣವಾಗುವ ವಿದ್ಯುತ್ ಖರೀದಿ ಕುರಿತಂತೆ ಈಗಾಗಲೇ ಕೆಪಿಟಿಸಿಎಲ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಪ್ರತಿ ಯೂನಿಟ್ ವಿದ್ಯುತ್‌ಗೆ 7.9 ರೂ. ನೀಡಲು ನಿರ್ಧರಿಸಲಾಗಿದೆ.
ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕಗಳನ್ನು ನಿರ್ಮಿಸುವ ಮೂಲಕ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲಾಗಿದೆ. ಅದರಂತೆ ಪಿಪಿಪಿ ಮಾದರಿಯಲ್ಲಿ ಘಟಕ ಸ್ಥಾಪನೆ ಮಾಡಲಾಗುತ್ತಿದ್ದು, ಪಾಲಿಕೆಯ ಬಂಡವಾಳ ಹೂಡಬೇಕಿಲ್ಲ. ಇದೇ ರೀತಿಯ ಇನ್ನಷ್ಟು ಘಟಕಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ಮೇಯರ್ ಆರ್.ಸಂಪತ್‌ರಾಜ್, ಆಯುಕ್ತ ಎನ್.ಮಂಜುನಾಥಪ್ರಸಾದ್, ನೆಕ್ಸೆಸ್‌ನೋವಾ ಸಂಸ್ಥೆಯ ಅಧ್ಯಕ್ಷ ಡಾ.ಬಿ.ಆರ್.ಶೆಟ್ಟಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೂಟ್‌ಗೆರ್‌ಡೇ ಬ್ರೂಜ ಸೇರಿ ಪ್ರಮುಖರು ಹಾಜರಿದ್ದರು.