ದಾವಣಗೆರೆ: ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಜೂ.9ರಿಂದ 11ರ ವರೆಗೆ ನಡೆಯುವ ಮೋದಿ ಫೆಸ್ಟ್ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಕೇಂದ್ರ ಸರ್ಕಾರದ ಸಾಧನೆಗಳ ಪ್ರಚಾರ ಆರಂಭವಾಗಿದೆ. ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್, ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಪ್ರಚಾರದ ಎಲ್‌ಇಡಿ ವಾಹನಕ್ಕೆ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದರು.
ದುರ್ಗಾಂಬಿಕಾ ದೇವಸ್ಥಾನದ ಬಳಿ ಪ್ರಚಾರಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ರಮೇಶ್‌ನಾಯ್ಕ, ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಜೂ.9ರಿಂದ 11ರ ವರೆಗೆ ನಡೆಯುವ ಮೋದಿ ಫೆಸ್ಟ್ ಕಾರ್ಯಕ್ರಮದ ಅಂಗವಾಗಿ ಕೇಂದ್ರ ಸರ್ಕಾರದ ವಿವಿಧ ಯೋಜನೆ, ಕಾರ್ಯಕ್ರಮ ಹಾಗೂ ಸಾಧನೆಗಳ ಪ್ರಚಾರ ಮಾಡಲಾಗುತ್ತಿದೆ.
ಫೆಸ್ಟ್ ಹಿನ್ನೆಲೆಯಲ್ಲಿ ಮೂರು ದಿನ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ಅನೇಕ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು. ಮೊದಲ ದಿನ ಚಾಮರಾಜಪೇಟೆ ವೃತ್ತ, ಗಡಿಯಾರ ಕಂಬ, ಮಹಾನಗರ ಪಾಲಿಕೆ, ರಾಂ ಆ್ಯಂಡ್ ಕೋ ವೃತ್ತ, ಗುಂಡಿ ಮಹಾದೇವಪ್ಪ ವೃತ್ತ, ಡೆಂಟಲ್ ಕಾಲೇಜು ರಸ್ತೆ, ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನ ಇತರೆಡೆ ಪ್ರಚಾರ ನಡೆಯಲಿದೆ ಎಂದು ತಿಳಿಸಿದರು.
ಬುಧವಾರ ಹರಿಹರ, ಮಲೇಬೆನ್ನೂರು ಮೂಲಕ ಚನ್ನಗಿರಿಯವರೆಗೆ, ಗುರುವಾರ ಹರಪನಹಳ್ಳಿ ಇತರೆ ಭಾಗದಲ್ಲಿ ಪ್ರಚಾರ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮೂರು ವರ್ಷದಲ್ಲಿ ಜಾರಿಗೆ ತಂದಿರುವ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಗುವುದು.
ಈಗಿನ ಯೋಜನೆ, ಕಾರ್ಯಕ್ರಮಗಳಲ್ಲಿನ ಬದಲಾವಣೆ, ಮುಂದಿನ ದಿನಗಳಲ್ಲಿ ತರಬಹುದಾದ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರು 1800-120- 4411ಗೆ ಉಚಿತ ಕರೆ ಮಾಡುವ ಮೂಲಕ ತಿಳಿಸಬಹುದು ಎಂದರು. ಸಾರ್ವಜನಿಕರು 1800- 120- 6677ಗೆ ಉಚಿತ ಕರೆ ಮಾಡುವ ಮೂಲಕ ಕೇಂದ್ರ ಸರ್ಕಾರದ ಎಲ್ಲಾ ಯೋಜನೆ, ಕಾರ್ಯಕ್ರಮಗಳ ಮೂಲಕ ಸಮಗ್ರ ಮಾಹಿತಿ ಪಡೆಯಬಹುದು.
1800-120-6677ಗೆ ಉಚಿತ ಕರೆ ಮಾಡಿದ ತಕ್ಷಣ ಕರೆ ಕಟ್ ಆಗುತ್ತದೆ. ನಂತರ ಎಲ್ಲಾ ಮಾಹಿತಿ ನೀಡಲಾಗುತ್ತದೆ. ನಮಗೆ ಬೇಕಾದ ಭಾಷೆಯಲ್ಲಿ ಈ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು. ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್, ದಕ್ಷಿಣ ವಲಯ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಸೋಗಿ ಶಾಂತಕುಮಾರ್, ಶಿವನಗೌಡ, ಶಿವಕುಮಾರ್ ಇತರರು ಇದ್ದರು.