ಕಾಪು: ಮುಂಗಾರು ಮಳೆ ವಿಳಂಬ, ಕೃಷಿ ಕಾರ್ಮಿಕರ ಕೊರತೆ, ಭತ್ತಕ್ಕೆ ಸಮರ್ಪಕ ಬೆಂಬಲ ಬೆಲೆ ದೊರಕದೇ ಇರುವುದರ ಮಧ್ಯೆಯೂ ಕಾಪು ತಾಲೂಕಿನಲ್ಲಿ ಭತ್ತದ ಕೃಷಿಗೆ ಚಾಲನೆ ದೊರಕಿದೆ. ಜತೆಗೆ ಈ ಬಾರಿ 2019 – 20ನೇ ಸಾಲಿನಲ್ಲಿ 3,600 ಹೆಕ್ಟೇರಿನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ.
ಹೆಚ್ಚಿನ ಕಾರ್ಯಸಾಧನೆಯ ಗುರಿ
ತಾಲೂಕು ವ್ಯಾಪ್ತಿಯಲ್ಲಿ 2018 – 19ನೇ ಸಾಲಿನಲ್ಲಿ 3,115.73 ಹೆಕ್ಟೇರ್ ಗದ್ದೆಯಲ್ಲಿ ಭತ್ತ ಬೆಳೆಯಲಾಗಿದ್ದು, 2019 -20ನೇ ಸಾಲಿನಲ್ಲಿ 3,600 ಹೆಕ್ಟೇರು ಭತ್ತದ ಬೆಳೆಯ ಗುರಿ ಹೊಂದಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚುವರಿ 485 ಹೆಕ್ಟೇರ್ ಗದ್ದೆಯಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆಯಾದರೂ ಹಿಂದಿನ ಸರಾಸರಿ ಬೆಳೆಯ ಪ್ರಮಾಣಕ್ಕೆ ಹೋಲಿಸಿದರೆ 600 ಹೆಕ್ಟೇರ್ ಗದ್ದೆಯಲ್ಲಿ ಭತ್ತದ ಕೃಷಿ ಇಳಿಮುಖವಾಗಿದೆ.
ಕಿಂಡಿ ಅಣೆಕಟ್ಟು ಸಮಸ್ಯೆ
ಹಿಂದಿನ ಕಾಲದಲ್ಲಿ ರೈತರೇ ಜತೆ ಸೇರಿ ತಮ್ಮ ಗದ್ದೆಗಳ ಸುತ್ತಮುತ್ತ, ಅಥವಾ ಊರಿನ ಪ್ರಮುಖ ನದಿ-ಹೊಳೆಗಳಿಗೆ ಅಣೆಕಟ್ಟುಗಳನ್ನು ರಚಿಸಿಕೊಂಡು ನೀರಿನ ಸೌಲಭ್ಯವನ್ನು ಪಡೆಯುತ್ತಿದ್ದರು. ಆದರೆ ಈಗ ಸರಕಾರವೇ ಹಲವು ಕಡೆಗಳಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ಕೊಡುತ್ತಿದೆ. ಕಿಂಡಿ ಅಣೆಕಟ್ಟುಗಳು ಸಮರ್ಪಕ ನಿರ್ವಹಣೆಯ ಕೊರತೆ ಮತ್ತು ಕಳಪೆ ಕಾಮಗಾರಿಯ ಕಾರಣದಿಂದಾಗಿ ಒಂದೆರಡು ವರ್ಷದಲ್ಲೇ ಹಾನಿಗೀಡಾಗುತ್ತಿವೆ. ಇದರಿಂದಾಗಿ ಅಂತರ್ಜಲ ಮಟ್ಟ ಕುಸಿದು, ಭತ್ತದ ಬೆಳೆಗೆ ಸಮರ್ಪಕ ನೀರಿನಾಶ್ರಯವೂ ಸಿಗದೇ ಭತ್ತದ ಬೆಳೆ ಕುಂಠಿತಗೊಂಡಿದೆ.
ಇಲಾಖೆಯಿಂದ ನಿರಂತರ ಉತ್ತೇಜನ
ಕೃಷಿ ಕೂಲಿ ಕಾರ್ಮಿಕರ ಕೊರತೆಯನ್ನು ನೀಗಿಸಲು ಕೃಷಿ ಇಲಾಖೆ ಶೇ. 50ರಷ್ಟು ಸಬ್ಸಿಡಿಯಲ್ಲಿ ಉಳುಮೆ ಯಂತ್ರ, ಕೃಷಿ ಯಂತ್ರೋಪಕರಣಗಳು, ಕಳೆ ಕೀಳುವ ಯಂತ್ರಗಳನ್ನು ರೈತರಿಗೆ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ. 90ರಷ್ಟು ಸಬ್ಸಿಡಿಯಲ್ಲಿ ಯಂತ್ರೋಪಕರಣಗಳು ದೊರಕುತ್ತಿವೆ. ರೈತ ಸಂಪರ್ಕ ಕೇಂದ್ರ ಅನುಮೋದಿತ ಎಂಒ 4, ಜ್ಯೋತಿ ಬಿತ್ತನೆ ಬೀಜಗಳು ಲಭ್ಯವಿದ್ದು, ಕಾಪು ರೈತ ಸಂಪರ್ಕ ಕೇಂದ್ರದ ವತಿಯಿಂದ 280 ಕ್ವಿಂಟಾಲ್ನಷ್ಟು ಬಿತ್ತನೆ ಬೀಜವನ್ನು ಜನರಿಗೆ ವಿತರಿಸಲಾಗಿದ್ದು, ಪ್ರತಿ ಕೆ.ಜಿ.ಗೆ 8 ರೂ. ಸಬ್ಸಿಡಿಯಲ್ಲಿ ಬೀಜ ವಿತರಣೆಯಾಗುತ್ತಿದೆ.
ಬಾಡಿಗೆ ಯಂತ್ರಗಳೂ ಇವೆ
ಕಾಪು ಹೋಬಳಿಯಲ್ಲಿ 2018-19ನೇ ಸಾಲಿನಲ್ಲಿ 7 ಪವರ್ ಟಿಲ್ಲರ್, 6 ನಾಟಿ ಯಂತ್ರ, 2 ಮಿನಿ ಯಂತ್ರ ಮತ್ತು 80 ಕಳೆ ಕೀಳುವ ಯಂತ್ರಗಳು ಸಬ್ಸಿಡಿ ದರದಲ್ಲಿ ರೈತರಿಗೆ ಪೂರೈಕೆಯಾಗಿವೆ. ಕೃಷಿಕರ ಅನುಕೂಲಕ್ಕಾಗಿ ಬಾಡಿಗೆ ಆಧಾರಿತ ಸೇವಾ ಕೇಂದ್ರವನ್ನೂ ತೆರೆಯಲಾಗಿದ್ದು ಇಲಾಖೆ ನಿಗದಿಪಡಿಸಿದ ಬಾಡಿಗೆದರಲ್ಲಿ ನಾಟಿ ಯಂತ್ರ, ಉಳುಮೆ ಯಂತ್ರ, ಪವರ್ ಟಿಲ್ಲರ್, ಕೊಯ್ಲು ಯಂತ್ರಗಳನ್ನು ರೈತರು ಉಪಯೋಗಿಸಿಕೊಳ್ಳಬಹುದಾಗಿದೆ.