Advertisement

ಹಸಿರು ಮೈಸೂರು ಮಾಸ್ಟರ್‌ ಪ್ಲಾನ್‌ಗೆ ಜೂನ್‌ನಲ್ಲಿ ಚಾಲನೆ

11:50 AM Aug 30, 2017 | Team Udayavani |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಹಸಿರು ಹೊದಿಕೆ ಹೊದಿಸುವ ಮೂಲಕ ಉದ್ಯಾನನಗರಿಯಾಗಿಸಲು ಅರಣ್ಯ ಇಲಾಖೆ ಐದು ವರ್ಷ ಅವಧಿಗೆ ಹಸಿರು ಮೈಸೂರು ಯೋಜನೆ ಸಿದ್ಧಪಡಿಸಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮೈಸೂರು ನಗರ ಹಸಿರೀಕರಣ ಯೋಜನೆ ಸಂಬಂಧ ಜಿಲ್ಲಾಧಿಕಾರಿ ರಂದೀಪ್‌ ಡಿ.ಸಭೆ ನಡೆಸಿದರು.

Advertisement

ನಗರದ ಪ್ರಮುಖ ರಸ್ತೆಗಳು, ಉದ್ಯಾನಗಳು ಹಾಗೂ ನಾನಾ ಸಂಸ್ಥೆಗಳು, ಕೈಗಾರಿಕೆಗಳು, ಜನವಸತಿ ಪ್ರದೇಶಗಳ ಖಾಲಿ ಜಾಗಗಳಲ್ಲಿ ಆಯಾ ಸ್ಥಳಕ್ಕೆ ಅನುಗುಣವಾಗಿ ಅಗತ್ಯವಿರುವ ಗಿಡಗಳನ್ನು ನೆಡುವ ಬಗ್ಗೆ ಮಾಸ್ಟರ್‌ ಪ್ಲಾನ್‌ ರೂಪಿಸಲಾಗಿದೆ ಎಂದು ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಹನುಮಂತಪ್ಪ ಸಭೆಗೆ ಮಾಹಿತಿ ನೀಡಿದರು.

ನಗರ ಪಾಲಿಕೆ, ಮುಡಾ ಸೇರಿದಂತೆ ಇನ್ನಿತರ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಯೋಜನೆ ಅನುಷ್ಟಾನಗೊಳಿಸಲಾಗುವುದು. ಈ ಯೋಜನೆ ಅನುಷ್ಟಾನಕ್ಕಾಗಿ ಪ್ರತಿಷ್ಠಾನವೊಂದನ್ನು ರೂಪಿಸಬೇಕಿದೆ. ಪ್ರತಿಷ್ಠಾನ ರಚನೆಯಾಗುವವರೆಗೂ ಅರಣ್ಯ ಇಲಾಖೆಯೇ ಯೋಜನೆ ಅನುಷ್ಠಾನದ ನಿರ್ವಹಣೆ ಮಾಡಲಿದೆ. ಯೋಜನೆಯನ್ನು ಪರಿಣಾಮಕಾರಿ ಕಾರ್ಯರೂಪಕ್ಕೆ ತರುವ ಸಲುವಾಗಿ ವೆಬ್‌ಸೈಟ್‌, ಮೊಬೈಲ್‌ ಆ್ಯಪ್‌ವೊಂದನ್ನು ಸಿದ್ಧಪಡಿಸಲಾಗುವುದು ಎಂದು ವಿವರಿಸಿದರು.

ಎಲ್ಲಾ ಇಲಾಖೆಗಳ ಸಹಕಾರದ ಜತೆಗೆ ಪ್ರಾಯೋಜಕತ್ವದಲ್ಲಿ ಅರಣ್ಯೀಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ನಗರದ ರಸ್ತೆಗಳನ್ನು ಇಂತಿಷ್ಟು ವರ್ಷದವರೆಗೆ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಪಡೆದುಕೊಳ್ಳಬಹುದು. ಅಲ್ಲದೆ ಇಲಾಖೆಯು ನಿಗಪಡಿಸಿದ ಗಿಡಗಳನ್ನು ಸ್ವಂತ ಖರ್ಚಿನಲ್ಲಿ ಬೆಳೆಸಿಕೊಡಲು ಇಚ್ಚಿಸುವವರಿಗೂ ಅವಕಾಶ ನೀಡಲಾಗುವುದು. ಇದಲ್ಲದೆ ಗಿಡ ನೆಡಲು ಇಚ್ಚಿಸುವ ನಾಗರಿಕರು ಇಲಾಖೆ ನಿಗಪಡಿಸಿದ ಸ್ಥಳದಲ್ಲಿ ನಿಗದಿತ ಹಣ ನೀಡಿ ಗಿಡಗಳನ್ನು ತಾವೇ ನಡೆಲು ಅವಕಾಶ ಕಲ್ಪಿಸಲಾಗುವುದು.

2018ರ ಜೂನ್‌ ತಿಂಗಳಲ್ಲಿ ಕೈಗೊಳ್ಳುವ ಬೃಹತ್‌ ಗಿಡನೆಡುವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದರು. ಶಾಲಾ-ಕಾಲೇಜುಗಳು, ಕೈಗಾರಿಕೆಗಳು ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳ ಖಾಲಿ ಜಾಗದಲ್ಲಿ ಅರಣೀಕರಣ ಮಾಡಲು ಗಿಡಗಳನ್ನು ಬೆಳೆಸಿಕೊಟ್ಟಲ್ಲಿ ಅವುಗಳನ್ನೂ ಅವರ ಇಚ್ಚೆಯಂತೆ ಹಸಿರೀಕರಣಕ್ಕೆ ಬಳಕೆ ಮಾಡಲಾಗುವುದು. ಯಾರು ಬೇಕಾದರೂ ಗಿಡಗಳನ್ನು ಬೆಳೆಸಿಕೊಡಬಹುದು. ಆದರೆ ಇಲಾಖೆಯು ನೀಡಿದ ಪಟ್ಟಿಯಲ್ಲಿರುವ ಗಿಡಗಳನ್ನೆ ಬೆಳೆಸಬೇಕಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next