Advertisement

ಅಭಿವೃದ್ಧಿ, ವಿಸ್ತರಣೆ ಕಾರ್ಯಗಳಿಗೆ ಚಾಲನೆ 

12:34 PM Oct 27, 2018 | Team Udayavani |

ವೇಣೂರು: ವೇಣೂರು ಹೃದಯ ಭಾಗದ ಬಂಟ್ವಾಳ ತಿರುವಿನ ಜಂಕ್ಷನ್‌ನ ಸಮಸ್ಯೆಗಳಿಗೆ ಪರಿಹಾರದ ರೂಪಕೊಡಲು ವೇಣೂರು ಗ್ರಾ.ಪಂ. ಮುಂದಾಗಿದೆ. ಈ ಮೂಲಕ ಜಂಕ್ಷನ್‌ನಲ್ಲಿ ಪ್ರಮುಖ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆತಿದೆ. ಉದಯವಾಣಿ ಸುದಿನದಲ್ಲಿ ಕಳೆದ ಆ. 4ರಂದು ಜಂಕ್ಷನ್‌ ಕಥಾ ‘ಸಮಸ್ಯೆಗಳಿಗೆ ಪರಿಹಾರದ ರೂಪಕೊಟ್ಟರೆ ಅಭಿವೃದ್ಧಿ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪಂ. ಅಭಿವೃದ್ಧಿ ಕಾರ್ಯಕ್ಕೆ ಇದೀಗ ಚಾಲನೆ ನೀಡಿದೆ.

Advertisement

ವ್ಯವಸ್ಥಿತ ಬಸ್‌ ನಿಲ್ದಾಣ
2016ರಲ್ಲಿ ಇಲ್ಲಿಯ ಜಂಕ್ಷನ್‌ ಬಳಿಯಲ್ಲಿಯೇ ಸುಮಾರು 9 ಸೆಂಟ್ಸ್‌ ಜಾಗವನ್ನು ಬಸ್‌ ನಿಲ್ದಾಣಕ್ಕೆ ಕಾಯ್ದಿರಿಸಲಾಗಿತ್ತು. ಆದರೆ ನಿಲ್ದಾಣ ವನ್ನು ನಿರ್ಮಿಸದೆ ಬಸ್‌ ಗಳು ಹೆದ್ದಾರಿ ಬದಿಯಲ್ಲೇ ನಿಂತು ಪ್ರಯಾಣಿಕರ ಸುರಕ್ಷತೆ ಮರೀಚಿಕೆಯಾಗಿತ್ತು. ಗೂಡಂಗಡಿ ಗಳಿಂದ ಜಂಕ್ಷನ್‌ ಇಕ್ಕಟ್ಟಿನಿಂದ ಕೂಡಿತ್ತು. ಇದೀಗ ಜಂಕ್ಷನ್‌ ಬಳಿಯಲ್ಲಿದ್ದ 3 ಗೂಡಂಗಡಿಗಳನ್ನು ತೆರವುಗೊಳಿಸಿ ನೂತನ ನಿಲ್ದಾಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್‌ ನಿಲ್ದಾಣದ ಕಟ್ಟಡದ ಅನುದಾನಕ್ಕೆ ದಾನಿಗಳ ಹುಡುಕಾಟದಲ್ಲಿ ರುವ ಪಂ. ಕಾಮಗಾರಿಗಳಿಗೆ ವೇಗ ನೀಡಲು ಮುಂದಾಗಿದೆ.

ಜಂಕ್ಷನ್‌ ಬಳಿಯ ಅನತಿ ದೂರದಲ್ಲಿ ಶುದ್ಧ ಕುಡಿಯುವ ಘಟಕವಿದ್ದರೂ ಯಾರಿಗೂ ಗೋಚರವಾಗದ ಕಾರಣ ಸಾರ್ವಜನಿಕ ಉಪಯೋಗಕ್ಕೆ ಬರುತ್ತಿಲ್ಲ ಎಂದು ಪತ್ರಿಕೆ ಗಮನ ಸೆಳೆದಿತ್ತು. ಇದೀಗ ಸ್ಥಳಾಂತರಕ್ಕೆ ಅನುದಾನ ಕಾಯ್ದಿರಿಸಿರುವ ಪಂ. ಜಂಕ್ಷನ್‌ ಬಳಿಗೆ ಸ್ಥಳಾಂತರಿಸಲು ಯೋಜನೆ ರೂಪಿಸಿದೆ.

ರಿಕ್ಷಾ  ಪಾರ್ಕಿಂಗ್‌ಗೂ ವ್ಯವಸ್ಥೆ
ಜಂಕ್ಷನ್‌ ಬಳಿಯಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಮುಂದಾಗುತ್ತಿದ್ದಂತೆ ಪಂ.ಗೆ ಹೊಸತೊಂದು ಸಮಸ್ಯೆ ಕಾಡಿತ್ತು. ಅದುವೇ ರಿಕ್ಷಾ ಪಾರ್ಕಿಂಗ್‌ಗೆ ವ್ಯವಸ್ಥೆ. ಅದಕ್ಕೂ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪಂಚಾಯತ್‌ ಮುಂದಾಗಿದೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಪಂಚಾಯತ್‌ ಕಟ್ಟಡದ ಬಳಿಯ ಗುಡ್ಡವನ್ನು ಸಮತಟ್ಟುಗೊಳಿಸಿದರೆ ಜಂಕ್ಷನ್‌ ತಕ್ಕಮಟ್ಟಿಗೆ ವಿಸ್ತರಣೆ ಆಗಬಲ್ಲದು ಎಂದು ಜಂಕ್ಷನ್‌ ಕಥಾ ಲೇಖನದಲ್ಲಿ ಗಮನ ಸೆಳೆಯಲಾಗಿತ್ತು. ಅದರಂತೆ ವೇಣೂರು ಗ್ರಾ.ಪಂ. ಕಟ್ಟಡದ ಬದಿಯಲ್ಲಿ ರಿಕ್ಷಾ  ಪಾರ್ಕಿಂಗ್‌ ಗೆ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದು, ಅದಕ್ಕಾಗಿ ಗುಡ್ಡವನ್ನು ಸಮತಟ್ಟು ಮಾಡುವ ಕಾರ್ಯಕ್ಕೂ ಚಾಲನೆ ದೊರೆತಿದೆ. ಈ ಮೂಲಕ ಜಂಕ್ಷನ್‌ ನಲ್ಲಿದ್ದ ಪ್ರಮುಖ ಸಮಸ್ಯೆಗಳಿಗೆ ಮುಕ್ತಿ ನೀಡಲು ಮುಂದಾಗಿದ್ದು, ನಾಗರಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಚರಂಡಿ ವ್ಯವಸ್ಥೆ 
ಅಭಿವೃದ್ಧಿ ಕಾಮಗಾರಿ ಪ್ರಗತಿ ಜತೆ ಜತೆಗೆ ಸಮರ್ಪಕ ಚರಂಡಿ ವ್ಯವಸ್ಥೆಯೂ ಆಗಬೇಕೆಂಬ ಅಭಿಪ್ರಾಯ ನಾಗರಿಕರಿಂದ ಕೇಳಿಬಂದಿದೆ. ಅಲ್ಲದೆ ಜಂಕ್ಷನ್‌ ಮಧ್ಯ ಭಾಗದಲ್ಲಿ ಚಿಕ್ಕದಾದ ವೃತ್ತವನ್ನು ನಿರ್ಮಿಸಿದರೆ ತಿರುವು ರಸ್ತೆಯಲ್ಲಿ ವಾಹನ ಸಂಚಾರ ಸುಗಮವಾಗಲಿದೆ ಎಂಬ ಮಾತು ಕೇಳಿಬಂದಿದೆ. 

Advertisement

ಅಭಿವೃದ್ಧಿ ಕಾಮಗಾರಿ
ಬಂಟ್ವಾಳ ತಿರುವು ವೇಣೂರಿನ ಪ್ರಮುಖ ಜಂಕ್ಷನ್‌ ಆಗಿದೆ. ಇಲ್ಲಿ ಬಸ್‌ ನಿಲ್ದಾಣಕ್ಕೆ ಗೊತ್ತು ಪಡಿಸಲಾಗಿದ್ದ ಜಾಗದಲ್ಲಿದ್ದ ಗೂಡಂಗಡಿಗಳನ್ನು ತೆರವುಗೊಳಿಸಲಾಗಿದ್ದು, ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅಭಿವೃದ್ಧಿ ದೃಷ್ಟಿಯಲ್ಲಿ ಜಂಕ್ಷನ್‌ ಬಳಿಯ ಗುಡ್ಡ ತೆರವು ಕಾರ್ಯವಾಗುತ್ತಿದ್ದು, ಮುಂದಿನ ಯೋಜನೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ.
ಕೆ. ವೆಂಕಟಕೃಷ್ಣರಾಜ
  ಪಂ. ಅಭಿವೃದ್ಧಿ ಅಧಿಕಾರಿ, ವೇಣೂರು ಗ್ರಾ.ಪಂ

Advertisement

Udayavani is now on Telegram. Click here to join our channel and stay updated with the latest news.

Next