Advertisement

ಬಣಕಲ್, ಕೊಟ್ಟಿಗೆಹಾರ: ಕ್ರಿಸ್ಮಸ್ ಆಚರಣೆಗೆ ಚಾಲನೆ; ಸಾಂತಾಕ್ಲಾಸ್ ಹೊತ್ತು ತಂದ ಕ್ರಿಸ್ಮಸ್ ಸಂದೇಶ

02:29 PM Dec 13, 2022 | Team Udayavani |

ಕೊಟ್ಟಿಗೆಹಾರ: ಡಿಸೆಂಬರ್ 25 ರಂದು ನಡೆಯಲಿರುವ ಕ್ರಿಸ್ಮಸ್ ಹಬ್ಬ ಆಚರಣೆಗೆ ಹನ್ನೆರಡು ದಿನ ಬಾಕಿ ಇರುವಾಗಲೇ ಬಣಕಲ್, ಕೊಟ್ಟಿಗೆಹಾರ, ಬಾಳೂರು, ಜಾವಳಿ, ಕೆಳಗೂರು, ಕೂವೆ ಸೇರಿದಂತೆ ಹಲವೆಡೆ ಕ್ರಿಸ್ಮಸ್ ಸಂಭ್ರಮ ಕಳೆಗಟ್ಟುತ್ತಿದ್ದು, ಸಾಂತಾಕ್ಲಾಸ್ ಕ್ರೈಸ್ತರ ಮನೆಮನೆಗಳಿಗೆ ಕ್ರಿಸ್ಮಸ್ ಸಂದೇಶ ಹೊತ್ತು ತಂದಂತೆ ಭಾಸವಾಯಿತು.

Advertisement

ಪ್ರತಿನಿತ್ಯವೂ ಕ್ರಿಶ್ಚಿಯನ್ ಸಮುದಾಯದವರ ಮನೆಮನೆಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಮಾಡಿ ಕ್ರಿಸ್ತನು ಲೋಕಕ್ಕೆ ಆಗಮನ ಕಾಲದ ಸುವಾರ್ತೆಯನ್ನು ಪ್ರತಿ ಕುಟುಂಬದವರಿಗೆ ಸಾರಲಾಗುತ್ತದೆ. ಹಬ್ಬದ ಅಂಗವಾಗಿ ಪ್ರತಿ ಕ್ರೈಸ್ತ ಕುಟುಂಬದ ಮನೆಗಳಲ್ಲಿ, ಚರ್ಚ್ ಮುಂಭಾಗದಲ್ಲಿ ಕ್ರಿಸ್ತನ ಜನನ ಸಾರುವ ಬಣ್ಣಬಣ್ಣದ ತೂಗುವ ನಕ್ಷತ್ರಗಳು ಹಾಕಲಾಗಿದೆ.

ಬಣಕಲ್ ಬಾಲಿಕಾ ಮರಿಯ ಚರ್ಚ್ ನ ಧರ್ಮಗುರು ಫಾ. ಪ್ರೇಮ್ ಲಾರೆನ್ಸ್ ಡಿಸೋಜ ಹಾಗೂ ಸಹಾಯಕ ಗುರು ಫಾ. ತೋಮಸ್ ಕಲಘಟಗಿ ನೇತೃತ್ವದಲ್ಲಿ ಬಣಕಲ್, ಚಕ್ಕಮಕ್ಕಿ, ಸಬ್ಬೇನಹಳ್ಳಿ, ಕುಂದೂರು, ಕೊಟ್ಟಿಗೆಹಾರ, ಜಾವಳಿ, ಬಾಳೂರು, ಅತ್ತಿಗೆರೆ ಮತ್ತಿತರ ಗ್ರಾಮಗಳ ಕ್ರೈಸ್ತ ಸಮುದಾಯದವರು ಸೋಮವಾರ ಚರ್ಚ್ ವ್ಯಾಪ್ತಿಯ ಮನೆಗಳಿಗೆ ತೆರಳಿ, ಏಸು ಕ್ರಿಸ್ತರ ಬರುವಿಕೆಯು ಪ್ರತಿ ಕುಟುಂಬದಲ್ಲಿ ಶಾಂತಿ, ಪ್ರೀತಿ, ಐಕ್ಯತೆ ನೆಲೆಸುವ ಸಲುವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಏಸು ಕ್ರಿಸ್ತರು ಗೋದಲಿಯಲ್ಲಿ ಜನಿಸಿದ ಸುವಾರ್ತೆಯನ್ನು ಬೈಬಲ್ ಪಠನೆ ಮಾಡುವ ಮೂಲಕ ಸರ್ವ ಕುಟುಂಬಕ್ಕೂ ಒಳಿತಾಗಲಿ ಎಂದು ಹಾರೈಸಿದರು.

ಮನೆ-ಮನೆಗೆ ಕ್ರಿಸ್ಮಸ್ ಸಂದೇಶ ಸಾರುತ್ತಾ ಹಬ್ಬದ ಆಗಮನಕ್ಕಾಗಿ ಕ್ರಿಸ್ಮಸ್ ಗೀತೆಗಳನ್ನು ಹಾಡಿ ಕುಟುಂಬಗಳಲ್ಲಿ ಸಂತಸ ಮೆರೆದರು.

Advertisement

ಸಾಂತಾಕ್ಲಾಸ್ ವೇಷಧಾರಿಯು ದಾರಿಯಲ್ಲಿ ಸಿಕ್ಕ ಸಿಕ್ಕ ಮಕ್ಕಳಿಗೆ, ಕುಟುಂಬದ ವೃದ್ಧರಿಗೆ ಮನೆಮಂದಿಗೆ ಜೋಳಿಗೆಯಿಂದ ಸಿಹಿ ತಿಂಡಿಯನ್ನು ಹಂಚಿ ಕ್ರಿಸ್ಮಸ್ ಶುಭಾಶಯ ಕೋರಿದರು. ಅವರ ಜೊತೆಗಿದ್ದ ಯುವಕರು, ಯುವತಿಯರು ಕ್ರಿಸ್ಮಸ್ ನೃತ್ಯ ಮಾಡುತ್ತಾ ಏಸುವಿನ ಜನನದ ಸಂದೇಶ ಸಾರಿದರು.

ಕ್ರಿಸ್ಮಸ್ ಕ್ಯಾರಲ್ಸ್ ತಂಡದಲ್ಲಿ ದರ್ಮಗುರುಗಳು, ಸಿಸ್ಟರ್ಸ್ ಗಳು ಬಣಕಲ್, ಕೊಟ್ಟಿಗೆಹಾರದ ಯುವಕ ಯುವತಿಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next