ಹುನಗುಂದ: ಮರೋಳ ಏತ ನೀರಾವರಿಯ ಎರಡನೆಯ ಹಂತದ ಹನಿ ನೀರಾವರಿ ಯೋಜನೆಯ ವೀಕ್ಷಣೆಗೆ ಬೆಂಗಳೂರಿನಿಂದ ಆಗಮಿಸಿದ್ದ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ ಚನ್ನಿ ಎದುರು ಯೋಜನೆಯ ವೈಫಲ್ಯದ ಕುರಿತು ರೈತರು ಅಕ್ರೋಶ ವ್ಯಕ್ತಪಡಿಸಿದರು.
ಹುನಗುಂದ ಸಮೀಪದ ಹನಿ ನೀರಾವರಿ ಜಾಕ್‌ವೆಲ್‌ಗೆ ಭೇಟಿ ನೀಡಿದ ವೇಳೆ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಏಷ್ಯಾ ಖಂಡದಲ್ಲಿ ಅತ್ಯಂತ ದೊಡ್ಡ ಹಾಗೂ ಇಸ್ರೇಲ್ ಮಾದರಿಯ ಬಹು ದೊಡ್ಡ ಯೋಜನೆಯನ್ನು780 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲಾದ ಈ ಯೋಜನೆ 60 ಸಾವಿರ ಹೆಕ್ಟೇರ್ ಯೋಜನೆ, ಗುತ್ತಿಗೆ ಪಡೆದ ಕಂಪನಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷದಿಂದ ಸಂಪೂರ್ಣ ಹಳ್ಳ ಹಿಡಿದಿದೆ ಎಂದು ಆರೋಪಿಸಿದರು.
ಸಫಲಗೊಳ್ಳದ ಯೋಜನೆ: ಈ ಯೋಜನೆಯು ಆರಂಭವಾಗಿ ಮೂರು ವರ್ಷ ಕಳೆದರೂ ಸರಿಯಾಗಿ ರೈತರ ಜಮೀನುಗಳಿಗೆ ನೀರು ಬಂದಿಲ್ಲ. ಕಂಪನಿಯವರಿಗೆ ಕೊಟ್ಟ ಐದು ವರ್ಷದ ನಿರ್ವಹಣೆ ಜವಾಬ್ದಾರಿ ಪೂರ್ಣಗೊಳ್ಳುತ್ತಿದ್ದು, ಸದ್ಯ ಕಂಪನಿಯವರು ರೈತರ ಭೂಮಿಗೆ ಶೇ. 80 ನೀರು ಹರಿಸಿದ್ದೇವೆ ಎಂದು ಸುಳ್ಳು ಹೇಳಿ, ಸಂಬಂಧಿಸಿದ ಮೇಲಧಿಕಾರಿಗಳ ದಿಕ್ಕು ತಪ್ಪಿಸುವ ಕಾರ್ಯ ನಡೆಯುತ್ತಿದೆ. ಇಲ್ಲಿವರಿಗೆ ರೈತರ ಜಮೀನಿಗೆ ಶೇ.25 ರಿಂದ 30ರಷ್ಟು ನೀರನ್ನು ಹರಿಸಿದ್ದು, ಉಳಿದ ಶೇ.75ರಷ್ಟು ನೀರು ಬಂದಿಲ್ಲ. ಸದ್ಯ ಗುತ್ತಿಗೆ ಪಡೆದ ಕಂಪನಿಗಳು ಮತ್ತು ಸ್ಥಳೀಯ ಕೆಬಿಜೆಎನ್‌ಎಲ್ ಅಧಿಕಾರಿಗಳು ಜೊತೆ ಸೇರಿ ರೈತರ ಹೊಲಗಳಿಗೆ ನೀರು ಹರಿಸುವ ಮೂಲಕ ಯೋಜನೆ ಸಫಲಗೊಂಡಿದೆ ಎಂದು ರೈತರಿಂದ ಒಪ್ಪಗೆ ಪತ್ರಕ್ಕೆ ಸಹಿ ಹಾಕಿಸಿಕೊಂಡು ಈ ಯೋಜನೆಯಿಂದ ಕೈ ತೊಳೆದುಕೊಳ್ಳುವ ಬಹು ದೊಡ್ಡ ಹುನ್ನಾರ ನಡೆದಿದೆ ಎಂದು ಕಂಪನಿ ಹಾಗೂ ಅಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೊಳಕೆ ಹಂತದಲ್ಲಿಯೇ ನಾಶವಾದ ಬಿತ್ತನೆ: ರೈತರ ಮುಂಗಾರು ಬಿತ್ತನೆಗೆ ಅನೂಕೂಲಕ್ಕಾಗಿ ವಾಡಿಕೆಯಂತೆ ಜೂನ್ ತಿಂಗಳ ಮೊದಲ ವಾರದಲ್ಲಿಯೇ ರೈತರ ಭೂಮಿಗೆ ನೀರು ಹರಿಸಬೇಕಿತ್ತು. ಅದರ ಪ್ರಕಾರ ಕೆಬಿಜೆಎನ್‌ಎಲ್ ಅಧಿಕಾರಿಗಳು ಕೂಡಾ ರೈತರಿಗೆ ಭರವಸೆ ನೀಡಿದ್ದರು. ಅಧಿಕಾರಿಗಳ ಮಾತು ನಂಬಿದ ರೈತರು ತಮ್ಮ ಹೊಲಗಳಲ್ಲಿ ವಿವಿಧ ಬೆಳೆಗಳ ಬಿತ್ತನೆ ಮಾಡಿದ್ದಾರೆ. ಅಗಷ್ಟ ಸಮೀಪಿಸುತ್ತಿದ್ದರೂ ಸಮರ್ಪಕ ನೀರು ಹರಸದೇ ಇರುವುದರಿಂದ ರೈತರು ಹೊಲದಲ್ಲಿ ಮಾಡಿದ ಬಿತ್ತನೆಗಳು ಮೊಳಕೆ ಹಂತದಲ್ಲಿಯೇ ನಾಶವಾಗುತ್ತಿವೆ ಎಂದು ಆರೋಪಿಸಿದರು.
ಕೃಷ್ಣಾ ಭಾಗ್ಯ ಜಲ ನಿಗಮದ ಕಾರ್ಯಪಾಲಕ ಅಭಿಯಂತರ ಎಸ್.ಬಿ ಸಾಂಬಾ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಅಮರೇಗೌಡ, ಪಿಎಸ್‌ಐ ಶರಣಬಸಪ್ಪ ಸಂಗಳದ ಮುಂತಾದವರು ಉಪಸ್ಥಿತರಿದ್ದರು.
ರೈತರ ಪಾಲಿಗೆ ಆಶಾಕಿರಣವಾಗಬೇಕಾಗಿದ್ದ ಹನಿ ನೀರಾವರಿ ಯೋಜನೆಯು ಸಂಪೂರ್ಣ ವಿಫಲವಾಗಿದೆ. ಈ ಯೋಜನೆಯ ಪ್ರಯೋಜನ ಇಲ್ಲಿವರೆಗೂ ಯಾವ ರೈತರಿಗೆ ತಲುಪಿಲ್ಲ. ಸಾಕಷ್ಟು ಅಧಿಕಾರಿಗಳು ಪರಿಶೀಲನೆಗೆ ಬರುತ್ತಾರೆ. ಗುತ್ತಿಗೆ ಪಡೆದ ಕಂಪನಿಗಳ ಕಾಗದ ಮತ್ತು ಸ್ಥಳೀಯ ಅಧಿಕಾರಿಗಳು ಹೇಳುವುದನ್ನು ಕೇಳಿ ಹೋಗುತ್ತಾರೆ. ವಾಸ್ತವ ಸಂಗತಿ ಯಾವ ಆಧಿಕಾರಿ ಅರಿಯುತ್ತಿಲ್ಲ. –
ಮಹೇಶ ಬೆಳ್ಳಿಹಾಳ, ರೈತರು ಹುನಗುಂದ.