Advertisement

ರಸ್ತೆ ಡಿವೈಡರ್‌ಗಳಲ್ಲಿ ನೆಟ್ಟಿರುವ ಗಿಡಗಳಿಗೆ ಹನಿ ನೀರಾವರಿ !

12:24 AM Mar 19, 2021 | Team Udayavani |

ಮಹಾನಗರ: ರಸ್ತೆಯ ಮಧ್ಯೆ ಡಿವೈಡರ್‌ಗಳಲ್ಲಿರುವ ಗಿಡಗಳಿಗೆ ಬೇಸಗೆ ಕಾಲದಲ್ಲಿ ನೀರು ಲಭ್ಯವಾಗದೆ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣದಿಂದಾಗಿ ಗಿಡಗಳಿಗೆ ಜೀವ ನೀಡಲು ಹನಿ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಪಾಲಿಕೆ ಮುಂದಾಗಿದೆ.

Advertisement

ಗಿಡಗಳ ನಿರ್ವಹಣೆ ಪಾಲಿಕೆಗೆ ಸವಾಲಾಗಿದ್ದು, ಈ ಉದ್ದೇಶದಿಂದ ಡ್ರಿಪ್‌ ವ್ಯವಸ್ಥೆ ಪರಿಚಯಿಸಲು ಉದ್ದೇಶಿ ಸಲಾಗಿದೆ. ಮಂಗಳೂರು ನಗರದ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ನಗರದ ಹಲವು ಕಡೆಗಳಲ್ಲಿನ ರಸ್ತೆ ಮಧ್ಯೆ ಇರುವ ಡಿವೈಡರ್‌ಗಳಲ್ಲಿ ಗಿಡಗಳನ್ನು ನೆಡಲಾಗಿದೆ. ಕೆಲವು ಕಡೆಗಳಲ್ಲಿ ಸಂಘ – ಸಂಸ್ಥೆಗಳು, ಸ್ವಯಂಸೇವಕರು ಗಿಡಗಳಿಗೆ ನೀರು ಹಾಯಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಹಲವು ಕಡೆಗಳಲ್ಲಿ ಸ್ಥಳೀಯಾಡಳಿತ ನಿರ್ಲಕ್ಷ್ಯ ಅಥವಾ ನೀರಿನ ಕೊರತೆಯಿಂದ ಗಿಡಗಳು ಸೊರಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಇದೀಗ ಡ್ರಿಪ್‌ ಪೈಪ್‌ಲೈನ್‌ ಅಳವಡಿಸಲು ತೀರ್ಮಾನಿಸಿದೆ.

ಮೊದಲನೇ ಹಂತದಲ್ಲಿ ಮಣ್ಣಗುಡ್ಡ ಪರಿಸರದ ರಸ್ತೆ ಡಿವೈಡರ್‌ಗಳಲ್ಲಿರುವ ಗಿಡಗಳಿಗೆ ಡ್ರಿಪ್‌ ಪೈಪ್‌ಲೈನ್‌ ಅಳವಡಿ ಸಲಾಗುತ್ತದೆ. ಪಾಲಿಕೆಯು ಒಂದು ಗಿಡ ನೆಡಲು ಸುಮಾರು 22 ರೂ. ಮತ್ತು ಒಂದು ಗಿಡದ ನಿರ್ವಹಣೆಗೆ 39 ರೂ. ಖರ್ಚು ಮಾಡುತ್ತಿದೆ. ರಸ್ತೆ ವಿಭಾಜಕಗಳಲ್ಲಿ ಕರವೀರ, ಬೋಲನ್‌ವಿಲ್ಲ, ಅರೆಲಿಯಾ ಗಿಡಗಳನ್ನು ನೆಡಲಾಗಿದೆ. ಕೆಲವೊಂದು ಡಿವೈಡರ್‌ನಲ್ಲಿ ಅಳವಡಿಸಲಾಗಿದ್ದ ಗಿಡಗಳ ಪೈಕಿ ಕೆಲವು ಸತ್ತು ಹೋಗಿವೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಹುಲ್ಲು ಬೆಳೆದಿದ್ದು, ನಿರ್ವಹಣೆ ಮರೀಚಿಕೆಯಾಗಿದೆ.

ಎಲ್ಲೆಲ್ಲಿದೆ ಗಿಡಗಳು ?
ನಗರ ಹಸುರಿನಿಂದ ಕಂಗೊಳಿಸುವ ಉದ್ದೇಶಕ್ಕಾಗಿ ಮಹಾನಗರ ಪಾಲಿಕೆಯು ಕೆಲವು ಕಡೆಗಳ ರಸ್ತೆ ವಿಭಾಜಕಗಳಲ್ಲಿ ಗಿಡಗಳನ್ನು ನೆಟ್ಟಿದೆ.

ಮುಖ್ಯವಾಗಿ, ಬಿಜೈಯ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಿಂದ ಕುಂಟಿಕಾನ, ದೇರೆಬೈಲು ಡಿವೈಡರ್‌, ಸಕೀìಟ್‌ ಹೌಸ್‌ನಿಂದ ಕೆಪಿಟಿ ಮರಕಡ ಡಿವೈಡರ್‌ ವರೆಗೆ, ಕ್ಲಾಕ್‌ಟವರ್‌ನಿಂದ ರಾವ್‌ ಆ್ಯಂಡ್‌ ರಾವ್‌ ವೃತ್ತ, ಎ.ಬಿ. ಶೆಟ್ಟಿ ವೃತ್ತದಿಂದ ಪಾಂಡೇಶ್ವರ, ಮಣ್ಣಗುಡ್ಡೆ ಯಿಂದ-ಲೇಡಿಹಿಲ್‌ ಶಾಲೆ-ಕೊಟ್ಟಾರ ಜಂಕ್ಷನ್‌ ರಸ್ತೆ ವಿಭಾಜಕಗಳಲ್ಲಿ ಗಿಡಗಳನ್ನು ನೆಟ್ಟಿದೆ.

Advertisement

ಹಸುರು ಪರಿಸರ ನಿರ್ಮಾಣಕ್ಕೆ ಒತ್ತು
ಮಂಗಳೂರು ನಗರದ ಹಸುರೀಕರಣಕ್ಕೆ ಮನಪಾ ಆದ್ಯತೆ ನೀಡುತ್ತದೆ. ಈಗಾಗಲೇ ನೆಟ್ಟ ಗಿಡಗಳ ನಿರ್ವಹಣೆ ಕಡೆಗೆ ಹೆಚ್ಚಿನ ಗಮನಹರಿಸುತ್ತೇವೆ. ಈಗಾಗಲೇ ಡಿವೈಡರ್‌ ನಡುವೆ ನೆಟ್ಟ ಗಿಡಗಳು ಸೊರಗದಿರಲಿ ಎಂಬ ಉದ್ದೇಶದಿಂದ ಹನಿ ನೀರಾವರಿ ವ್ಯವಸ್ಥೆ ಅಳವಡಿಸುತ್ತೇವೆ. ಮೊದಲ ಹಂತದಲ್ಲಿ ಮಣ್ಣಗುಡ್ಡ ಭಾಗದಲ್ಲಿ ಅಳವಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇತರೆಡೆ ವಿಸ್ತರಿಸಲಾಗುತ್ತದೆ.
-ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್

Advertisement

Udayavani is now on Telegram. Click here to join our channel and stay updated with the latest news.

Next