Advertisement

ಮಳೆ ಬಿರುಸು: ಕುಡಿಯುವ ನೀರಿನ ಚಿಂತೆ ದೂರ: ತುಂಬಿದ ತುಂಬೆ ಅಣೆಕಟ್ಟು

03:50 PM Jun 26, 2023 | Team Udayavani |

ಮಹಾನಗರ: ಮಂಗಳೂರು ನಗರಕ್ಕೆ ನೀರುಣಿಸುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಸದ್ಯ 5 ಮೀ. ನೀರಿನ ಮಟ್ಟ ಕಾಯ್ದುಕೊಳ್ಳಲಾಗುತ್ತಿದ್ದು, ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಅಭಾವ ದೂರವಾಗಿದೆ.

Advertisement

ತಿಂಗಳ ಹಿಂದೆ 2.36 ಮೀ.ನಷ್ಟಿದ್ದ ನೀರಿನ ಮಟ್ಟ ಸದ್ಯ 5 ಮೀ. ಇದೆ. 5 ಮೀ. ಮೀರಿದಾಗ ಡ್ಯಾಂಗೆ ಅಳವಡಿಸಿದ ಗೇಟ್‌ ಬಿಡಲಾಗುತ್ತಿದೆ. ಒಂದು ವೇಳೆ ಗೇಟ್‌ ಹಾಕಿದರೆ 6 ಮೀ.ಗೂ ಹೆಚ್ಚಿನ ನೀರು ಸಂಗ್ರಹ ಮಾಡಬಹುದಾಗಿದೆ.

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ನೀರಿನ ಮಟ್ಟ ಏರಿಕೆಗೆ ಕಾರಣ. ಇದರಿಂದಾಗಿ ನೀರಿನ ಅಭಾವವೂ ಸದ್ಯಕ್ಕೆ ದೂರವಾಗಿದೆ. ಮಂಗಳೂರು ನಗರಕ್ಕೆ ರೇಷನಿಂಗ್‌ಗೂ ಮುನ್ನ ಯಾವ ರೀತಿ, ನೀರು ಸರಬರಾಜು ಮಾಡಲಾಗುತ್ತಿತ್ತೋ ಅದೇ ಕ್ರಮದಲ್ಲಿ ಸದ್ಯ ನೀರು ಪೂರೈಕೆಯಾಗುತ್ತಿದೆ.

ನೀರಿನ ಅಭಾವದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಮೇ 4ರಿಂದ ನೀರಿನ ರೇಷನಿಂಗ್‌ ಆರಂಭ ಮಾಡಲಾಗಿತ್ತು. ಮಂಗಳೂರು ನಗರ ಪ್ರದೇಶಕ್ಕೆ (ಮಂಗಳೂರು ದಕ್ಷಿಣ), ಸುರತ್ಕಲ್‌ ಪ್ರದೇಶಕ್ಕೆ (ಮಂಗಳೂರು ಉತ್ತರ) ಪರ್ಯಾಯ ದಿನಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು. ನೀರಿನ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ, ಅನಾವಶ್ಯಕ ನೀರು ಬಳಸದಿರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ನಗರದಲ್ಲಿ ಜೂ. 8ರಿಂದ ನೀರಿನ ರೇಷನಿಂಗ್‌ ವ್ಯವಸ್ಥೆಯನ್ನು ಕೈ ಬಿಟ್ಟು, ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

2016ರ ಪರಿಸ್ಥಿತಿ ಬರಲಿಲ್ಲ
ಮಂಗಳೂರು ನಗರದಲ್ಲಿ 2016ರಲ್ಲಿ ಉಂಟಾಗಿದ್ದ ಭೀಕರ ನೀರಿನ ತತ್ವಾರ ಈ ಬಾರಿ ಬಂದಿಲ್ಲ. 2016ರಲ್ಲಿ ತುಂಬೆ ಡ್ಯಾಂನಲ್ಲಿ ನೀರಿಲ್ಲದ ಪರಿಸ್ಥಿತಿ ಎದುರಾಗಿ, ನಗರದಲ್ಲಿ ಟ್ಯಾಂಕರ್‌ ಮೂಲಕ ಮಾತ್ರ ನೀರು ಪೂರೈಕೆ ಮಾಡಿ ಬಳಸಲಾಗಿತ್ತು. ವಾರ್ಡ್‌ಗೆ ಒಂದರಂತೆ ಒಟ್ಟು 60 ಟ್ಯಾಂಕರ್‌ ಉಪಯೋಗ ಮಾಡಲಾಗಿತ್ತು. ಅದೂ ಖಾಲಿಯಾದಾಗ ಖಾಸಗಿ, ಸರಕಾರಿ ಬಾವಿ, ಬೋರ್‌ವೆಲ್‌ಗ‌ಳಿಂದ ನೀರು ತರಿಸಲಾಗಿತ್ತು. ಅದೂ ಪೂರ್ಣವಾಗಿ ಸಾಧ್ಯವಾಗದಾಗ ಲಕ್ಯಾ ಡ್ಯಾಂ ನೀರನ್ನು ತರಿಸಲಾಗಿತ್ತು. ಆದರೆ ಈ ಬಾರಿ ಎರಡು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಿದ ಕಾರಣ ಬಹುತೇಕ ಎಲ್ಲ ವಾರ್ಡ್‌ಗಳ ಎತ್ತರ ಪ್ರದೇಶಗಳಿಗೂ ನೀರು ಸಮರ್ಪಕ ಸರಬರಾಜು ಆಗುತ್ತಿತ್ತು. ತುಂಬೆಯ ಕೆಳಭಾಗದಿಂದ ನೀರು ಎತ್ತುವ ಕೆಲಸ ನಡೆದಿತ್ತು. ಎಎಂಆರ್‌ ಡ್ಯಾಂನಿಂದಲೂ ತುಂಬೆಗೆ ನೀರು ಪೂರೈಕೆ ಮಾಡಲಾಗಿತ್ತು. ಇದೇ ಕಾರಣಕ್ಕೆ ನಗರಕ್ಕೆ ಈ ಬಾರಿ ದೊಡ್ಡ ಮಟ್ಟಿನ ನೀರಿನ ಅಭಾವ ಸೃಷ್ಟಿಯಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next