ಗೌರಿಬಿದನೂರು(ಮಂಚೇನಹಳ್ಳಿ): ಮಂಚೇನಹಳ್ಳಿ ತಾಲೂಕಿನ ಹೊನ್ನಪ್ಪನಹಳ್ಳಿ ಗ್ರಾಮದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ನಿತ್ಯ ತುಂಬಿದ ಬಳಿಕ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ತುಂಬಲು ಬಿಡಲಾಗುತ್ತಿದ್ದು, ಅದು ತುಂಬಿದ ಬಳಿಕ ಮತ್ತೆ ಓವರ್ ಹೆಡ್ ಟ್ಯಾಂಕ್‌ಗೆ ವಾಪಸ್ ಆಗಿ ನೀರು ರಸ್ತೆ ಮೇಲೆ ಹರಿಯುತ್ತಿದ್ದರೂ ಈ ಬಗ್ಗೆ ಪಂಚಾಯ್ತಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿಲ್ಲ.
ರಸ್ತೆ ಮೇಲೆ ಹರಿವ ಕುಡಿವ ನೀರು: ಪ್ರತಿನಿತ್ಯ ನೀರಿನ ಟ್ಯಾಂಕ್ ತುಂಬಿದ ರಸ್ತೆಗೆ ಹರಿಯುತ್ತಿರುತ್ತದೆ, ನೀರು ನಿಲ್ಲಿಸದ ವಾಟರ್ ಮ್ಯಾನ್ ನಿರ್ಲಕ್ಷ್ಯದಿಂದ ಟ್ಯಾಂಕ್ ಸೋರಿಕೆಯಾಗಿ ರಸ್ತೆ ಮೇಲೆ ಹರಿದು ಪಾದಚಾರಿಗಳ ಓಡಾಟಕ್ಕೆ ಅಡ್ಡಿಯಾಗಿದೆ ಎಂದು ಅಳಲು ತೋಡಿಕೊಂಡಿರುವ ಗ್ರಾಮಸ್ಥರು, ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚು, ಇಂತಹ ಸಂದರ್ಭದಲ್ಲಿ ಹೊನ್ನಪ್ಪನಹಳ್ಳಿಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ತುಂಬಿ ರಸ್ತೆ ಮೇಲೆ ನೀರು ಹರಿದು ನೀರೆಲ್ಲ ವ್ಯರ್ಥವಾಗುತ್ತಿದೆ.
ಸುತ್ತಮುತ್ತಲಿನ ನಿವಾಸಿಗಳಿಗೆ ಆತಂಕ: ಕುಡಿಯುವ ನೀರಿನ ಟ್ಯಾಂಕ್ ಗ್ರಾಮದ ಮನೆಗಳ ನಡುವೆ ಇದೆ. ಈ ಟ್ಯಾಂಕ್‌ನಲ್ಲಿ ತುಂಬಿ ನೀರು ಸೋರಿಕೆ ಆಗುತ್ತಿರುವುದ ರಿಂದ ನಿತ್ಯವೂ ಹೀಗೆ ಆದರೆ ಟ್ಯಾಂಕ್ ಬಿರುಕು ಬಿಡುವ ಹಾಗೂ ಟ್ಯಾಂಕ್‌ನ ಪಾಯಕ್ಕೆ ಹಾನಿಯಾಗಿ ಕುಯಿಯುವ ಭೀತಿ ನಿವಾಸಿಗಳನ್ನು ಕಾಡುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ಈ ರೀತಿ ಅನೇಕ ಸಮಸ್ಯೆಗಳನ್ನು ಸ್ಥಳೀಯ ಗ್ರಾಮಸ್ಥರು ಎದುರಿಸುತ್ತಿದ್ದರೂ ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಲಿ ಯಾರು ಸಹ ಇತ್ತ ಗಮನಹರಿಸುತ್ತಿಲ್ಲ. ಇನ್ನಾದರೂ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಸೋರಿಕೆಯಾಗುತ್ತಿರುವ ಟ್ಯಾಂಕ್ ಸರಿಪಡಿಸಿ, ನೀರು ಪೋಲಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮೂರ್ನಾಲ್ಕು ದಿನಗಳಲ್ಲಿ ಸರಿಪಡಿಸಲಾಗುವುದು: ಪಿಡಿಒ: ಹೊನ್ನಪ್ಪನಹಳ್ಳಿಯಲ್ಲಿರುವ ಕುಡಿವ ನೀರಿನ ಟ್ಯಾಂಕ್ ಉತ್ತಮ ಸ್ಥಿತಿಯಲ್ಲಿದೆ. ಆದರೆ ಟ್ಯಾಂಕ್ ತುಂಬಿದ ನಂತರ ಅದೇ ನೀರಿನ ಸಂಪರ್ಕದಿಂದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ತುಂಬುವುತ್ತಿರುವುದರಿಂದ ಅದು ತುಂಬಿದ ನಂತರ ನೀರು ಮತ್ತೆ ಟ್ಯಾಂಕ್‌ಗೆ ವಾಪಸ್ ಹೋಗುವುದದರಿಂದ ನೀರು ಪೋಲಾಗುತ್ತಿದ್ದು, ಅಲ್ಲಿನ ನಾಗರಿಕರಿಗೆ ಸಮಸ್ಯೆಯಾಗಿದೆ. ಚುನಾವಣೆ ಹಿನ್ನೆಲೆ ವಿಳಂಬವಾಗಿದ್ದು, ಮೂರ್ನಾಲ್ಕು ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಗೌಡಗೆರೆ ಗ್ರಾಪಂ ಪಿಡಿಒ ಲೋಕೇಶ್ ತಿಳಿಸಿದರು.
ಯಾರೂ ಗಮನ ಹರಿಸುತ್ತಿಲ್ಲ : ಈ ಟ್ಯಾಂಕ್‌ಗೆ ನೀರು ತುಂಬಿಸಲು ನೀರು ಬಿಟ್ಟಾಗಲೆಲ್ಲ ಸಂಬಂಧಪಟ್ಟವರು ಸರಿಯಾದ ಸಮಯಕ್ಕೆ ಆಫ್ ಮಾಡದಿರುವುದರಿಂದ ಟ್ಯಾಂಕ್ ತುಂಬಿ ಗಂಟೆಗಟ್ಟಲೇ ನೀರು ಸೋರಿಕೆಯಾಗಿ ರಸ್ತೆಗೆ ಹರಿಯುತ್ತದೆ. ಈ ರೀತಿ ನೀರು ಸೋರಿಕೆ ಆಗುವುದರಿಂದ ಟ್ಯಾಂಕ್ ನೆನೆದು ನೆನೆದು ಶಿಥಿಲ ಜತೆಗೆ ಪಾಯಕ್ಕೆ ಹಾನಿಯಾಗಿ ಯಾವಾಗ ಬೇಕಾದರೂ ಕುಸಿಯಬಹುದು ಎಂಬ ಭೀತಿ ಸುತ್ತಮುತ್ತಲಿನ ಜನರನ್ನು ಕಾಡುತ್ತಿದೆ. ಆದರೂ ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಮೇಲಿನ ಅಧಿಕಾರಿಗಳು ಈ ಟ್ಯಾಂಕ್‌ನ ಪರಿಸ್ಥಿತಿಯನ್ನು ಗಮನಿಸಿ ಸೂಕ್ತ ಕ್ರಮ ಕೈಗೊಂಡು, ಆದಷ್ಟು ಬೇಗ ಸಮಸ್ಯೆ ಪರಿಹರಿಸಬೇಕೆಂದು ಸ್ಥಳೀಯ ನಿವಾಸಿ ಮಂಜಪ್ಪ ಒತ್ತಾಯಿಸಿದ್ದಾರೆ.
ಕುಡಿವ ನೀರು ಪೋಲಾಗುತ್ತಿರುವುದರ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳದೇ ಕಂಡರೂ ಕಾಣದಂತೆ ಬೇಜವಾಬ್ದಾರಿತನ ತೋರುತ್ತಿದ್ದಾರೆ. ರಸ್ತೆ ಮೇಲೆ ನೀರು ಹರಿಯುವುದರಿಂದ ಓಡಾಡಲು ಸಹ ತೊಂದರೆಯಾಗುತ್ತಿದ್ದು, ಸಂಬಂಧಪಟ್ಟವರು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು.
● ರಾಮಪ್ಪ, ಹೊನ್ನಪನಹಳ್ಳಿ ನಿವಾಸಿ
-ವಿ.ಡಿ.ಗಣೇಶ್, ಗೌರಿಬಿದನೂರು