Advertisement

ಕೆಂಬಣ್ಣಕ್ಕೆ ತಿರುಗಿದ ಕುಡಿಯುವ ನೀರು: ಆತಂಕದಲ್ಲಿ ಜನತೆ 

10:01 AM Jun 03, 2018 | |

ಮಹಾನಗರ: ತುಂಬೆ ವೆಂಟೆಡ್‌ ಡ್ಯಾಂನಿಂದ ನಗರಕ್ಕೆ ವಿತರಣೆಯಾಗುತ್ತಿರುವ ನೀರು ಮೂರು ದಿನಗಳಿಂದ ಕೆಂಪು ಬಣ್ಣದಿಂದ ಕೂಡಿದೆ. ನೀರಿನ ಬಣ್ಣ ಬದಲಾಗಿರುವುದನ್ನು ಕಂಡು ಸಹಜವಾಗಿಯೇ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಅಲ್ಲದೆ ಬಣ್ಣ ಬದಲಾದ ನೀರಿನಿಂದ ಸಾಂಕ್ರಾಮಿಕ ರೋಗದ ಭಯವೂ ಜನರನ್ನು ಕಾಡುತ್ತಿದೆ.

Advertisement

ಈಗಾಗಲೇ ನಗರದಲ್ಲಿ ಮಲೇರಿಯಾ, ಡೆಂಗ್ಯೂ ಪ್ರಕರಣಗಳೂ ಹೆಚ್ಚುತ್ತಿರುವುದೂ ಜನರ ಆತಂಕಕ್ಕೆ ಕಾರಣವಾಗಿದೆ. ಕಳೆದ ಬುಧವಾರದಿಂದ ಪ್ರತಿದಿನವೂ ತುಂಬೆ ವೆಂಟೆಡ್‌ ಡ್ಯಾಂನಿಂದ ನಗರಕ್ಕೆ ಪೂರೈಕೆಯಾಗುತ್ತಿರುವ ನೀರು ಕೆಂಬಣ್ಣದಿಂದ ಕೂಡಿದೆ. ನಳ್ಳಿ ತಿರುಗಿಸಿದಾಕ್ಷಣ ಪಾತ್ರೆಯಲ್ಲಿ ಕೆಂಬಣ್ಣದೊಂದಿಗೆ ನೀರಿನ ತಳಭಾಗದಲ್ಲಿ ಕೆಂಪು ದೂಳಿನ ಕಣಗಳು ಕಾಣಿಸಿಕೊಳ್ಳುತ್ತಿವೆ. ನೀರನ್ನು ಕುದಿಸಿ ಆರಿಸಿದರೂ ಬಣ್ಣ ಯಥಾಪ್ರಕಾರ ಇದ್ದು, ಕುಡಿಯಲು ಭಯವಾಗುತ್ತಿದೆ ಎಂದು ನಗರವಾಸಿಗಳು ಅಳಲು ತೋಡಿಕೊಂಡಿದ್ದಾರೆ.

 ಬಟ್ಟೆ ಒಗೆಯಲೂ ಕಷ್ಟ
ನೀರಿನ ಬಣ್ಣ ಕೆಂಪಾಗಿರುವುದರಿಂದ ಬಟ್ಟೆ ಒಗೆಯಲೂ ಕಷ್ಟವಾಗುತ್ತಿದೆ. ನೀರಿನ ಬಣ್ಣ ಬಟ್ಟೆಗಳಲ್ಲಿ ಅಂಟಿಕೊಂಡರೆ ಮತ್ತೆ ತೆಗೆಯುವುದು ಸುಲಭವಲ್ಲ ಎನ್ನುತ್ತಾರೆ ಯೆಯ್ನಾಡಿ ನಿವಾಸಿ ಪುಷ್ಪಾಮಳೆಯಿಂದ ಹೀಗಾಗಿದೆ: ಮನಪಾ ಈಗಾಗಲೇ ತುಂಬೆ ವೆಂಟೆಡ್‌ ಡ್ಯಾಂನಿಂದ ಪೂರೈಕೆಯಾಗುವ ನೀರು ಕೆಂಪು ಬಣ್ಣದಿಂದ ಕೂಡಿರುವುದು ಗಮನಕ್ಕೆ ಬಂದಿದ್ದು, ಡ್ಯಾಂನಲ್ಲಿ ನೀರಿಗೆ ಕ್ಲೋರಿನೇಶನ್‌ ಮಾಡಲಾಗಿದೆ. ಶುದ್ಧೀಕೃತ ನೀರು ಪೂರೈಕೆಗೆ ಬಳಸುವ ಆಲಂ ಬಳಸಿ ನೀರು ಶುದ್ಧಗೊಳಿಸಲಾಗಿದೆ. ಶನಿವಾರ ನೀರಿನ ಬಣ್ಣ ಸರಿಯಾಗಿಯೇ ಇದೆ. ಒಂದು ವೇಳೆ ಇನ್ನೂ ಕೂಡ ನೀರು ಕೆಂಬಣ್ಣದಿಂದ ಕೂಡಿದ್ದಲ್ಲಿ, ಸಾರ್ವಜನಿಕರು ಮಾಹಿತಿ ನೀಡಿದರೆಪರೀಕ್ಷಿಸಲಾಗುವುದು ಎಂದು ಮನಪಾ ಸಹಾಯಕ ಕಾರ್ಯಕಾರಿ ಅಭಿಯಂತರ ನರೇಶ್‌ ಶೆಣೈ ‘ಸುದಿನ’ಕ್ಕೆ ಸ್ಪಷ್ಟಪಡಿಸಿದ್ದಾರೆ.

ಆತಂಕ ಪಡುವ ಅಗತ್ಯವಿಲ್ಲ
ತುಂಬೆ ವೆಂಟೆಡ್‌ ಡ್ಯಾಂನಿಂದ ನಗರಕ್ಕೆ ಪೂರೈಕೆಯಾಗುತ್ತಿರುವ ನೀರಿನಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ನದಿಗಳಿಂದ ಕೆಸರು ಮಿಶ್ರಿತ ಕೆಂಬಣ್ಣದ ನೀರು ಹರಿದು ಡ್ಯಾಂನಲ್ಲಿ ಸಂಗ್ರಹಗೊಂಡ ಪರಿಣಾಮ ನೀರಿನ ಬಣ್ಣ ಕೆಂಪಾಗಿದೆ. ಮೊದಲ ಮಳೆಗೆ ನೀರಿನ ಬಣ್ಣ ಕೆಂಪಾಗಿರುತ್ತದೆ. ಬಳಿಕ ಒಂದೆರಡು ಮಳೆ ಸುರಿದ ಬಳಿಕ ನೀರು ಯಥಾಪ್ರಕಾರ ತಿಳಿಯಾಗುತ್ತದೆ. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್‌ ನಝೀರ್‌ ‘ಉದಯವಾಣಿ-ಸುದಿನ’ಕ್ಕೆ ತಿಳಿಸಿದ್ದಾರೆ. 

90 ಸಾವಿರ ಮನೆಗಳಿಗೆ ಡ್ಯಾಂ ನೀರು
ಮಂಗಳೂರಿಗೆ ಪ್ರತಿದಿನ 160 ಎಂಎಲ್‌ಡಿ ನೀರು ತುಂಬೆ ವೆಂಟೆಡ್‌ ಡ್ಯಾಂನಿಂದ ಪಂಪ್‌ ಆಗುತ್ತದೆ. ನಗರದಲ್ಲಿ ಒಟ್ಟು 90,000 ಮನೆಗಳಲ್ಲಿ ಈ ಡ್ಯಾಂ ನೀರನ್ನು ಉಪಯೋಗಿಸುತ್ತಾರೆ. 160 ಎಂಎಲ್‌ಡಿ ಪೈಕಿ 110 ಎಂಎಲ್‌ಡಿ ನೀರು ಮನೆ ಬಳಕೆಗೆ ವಿನಿಯೋಗವಾಗುತ್ತಿದ್ದು, ಉಳಿದ 50 ಎಂಎಲ್‌ಡಿ ನೀರನ್ನು ಕೈಗಾರಿಕೆ, ಕಮರ್ಷಿಯಲ್‌ ಉದ್ದೇಶ, ಉಳ್ಳಾಲ ನಗರ ಪಂಚಾಯತ್‌ ಮತ್ತು ಮೂಲ್ಕಿ ಪ್ರದೇಶಕ್ಕೆ ನೀಡಲಾಗುತ್ತಿದೆ. ಇಷ್ಟೂ ಮನೆಗಳಿಗೆ ಪೂರೈಕೆಯಾಗುವ ನೀರು ಕೆಂಬಣ್ಣದಿಂದ ಕೂಡಿದೆ. 

Advertisement

ಕ್ಲೋರಿನೇಶನ್‌ ಮಾಡಲಾಗಿದೆ
ಮಳೆ ನೀರು ಹರಿದು ಬರುವಾಗ ಕೆಸರು ಮಿಶ್ರಿತಗೊಂಡು ಬರುವುದು ಸಾಮಾನ್ಯ. ಈಗಾಗಲೇ ನೀರನ್ನು ಕ್ಲೋರಿನೇಶನ್‌ ಮಾಡಲಾಗಿದ್ದು, ಜನ ಆತಂಕ ಪಡುವ ಅಗತ್ಯವಿಲ್ಲ.
 - ಮಹಮ್ಮದ್‌ ನಝೀರ್‌,
     ಆಯುಕ್ತರು, ಮಹಾನಗರ ಪಾಲಿಕೆ

ಮೂರು ದಿನ ಕೆಂಬಣ್ಣದ ನೀರು
ಕಳೆದ ಮೂರು ದಿನಗಳಿಂದ ನೀರು ಕೆಂಬಣ್ಣದಿಂದ ಕೂಡಿದೆ. ಈಗಾಗಲೇ ನಗರದಲ್ಲಿ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿರುವುದರಿಂದ ನೀರು ಕುಡಿಯಲು ಭಯವಾಗುತ್ತಿದೆ. 
– ರಮ್ಯಾ,ಗೃಹಿಣಿ, ಕೊಟ್ಟಾರ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next