ತೀರ್ಥಹಳ್ಳಿ : ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಳ್ಳಿಗಳ ಜನರ ಪ್ರತಿಯೊಬ್ಬರ ಆರೋಗ್ಯ ದೃಷ್ಠಿಯಿಂದ ಶುದ್ಧ ನೀರು ಕುಡಿಯಬೇಕೆನ್ನುವ ವಿಶೇಷ ಕಾಳಜಿಯಿಂದ ಕೋಟ್ಯಂತರ ರೂ ವೆಚ್ಚದಲ್ಲಿ ಪ್ರತಿ ಮನೆ ಮನೆಗೆ, ಗಂಗೆ (ಜೆಜೆಎಂ) ಶುದ್ಧ ಕುಡಿಯುವ ನಲ್ಲಿ ನೀರಿನ ಯೋಜನೆ ನೀಡಿರುತ್ತಾರೆ.
ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರರವರ ವಿಶೇಷ ಪರಿಶ್ರಮದಿಂದ ಕೋಟ್ಯಂತರ ರೂಪಾಯಿಗಳ ಅನುದಾನ ಹರಿದು ಬಂದಿದ್ದು ಕಾಮಗಾರಿಗಳು ಭರದಿಂದ ನೆಡೆಯುತ್ತಿದೆ. ಆದರೆ ಕೆಲವು ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು ಬೇಕಾ ಬಿಟ್ಟಿ ಕೆಲಸ ಮಾಡಿ ತಮ್ಮ ಬಿಲ್ ಮಂಜೂರು ಮಾಡಿಸಿಕೊಂಡು ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಗುತ್ತಿಗೆದಾರರು ಇನ್ನು ಕೆಲವೊಂದು ಭಾಗದಲ್ಲಿ ಕಾಮಗಾರಿಯನ್ನು ಒಳಗುತ್ತಿಗೆ ನೀಡಿ ನಾಮಕಾವಸ್ಥೆಗೆ ಮನೆ ಮನೆಗೆ ನಲ್ಲಿ ಜೋಡಣೆ ಮಾಡಿದ್ದು ಅದರ ನೆಲಭಾಗದ ಕೆಳಗೆ ನೀರಿನ ಪೈಪ್ ನ ಸಂಪರ್ಕವೇ ಇಲ್ಲದೇ ನಲ್ಲಿಯಲ್ಲಿ ನೀರೇ ಇಲ್ಲ ಎಂಬ ಮಾತು ಕೇಳಿಬರುತ್ತಿದೆ.
ಇನ್ನು ಕೆಲವು ಭಾಗಗಳಲ್ಲಿ ಬಚ್ಚಲು ಮನೆಯ ನೀರು ಹೋಗುವ ಕೊಚ್ಚೆ ಗುಂಡಿಯಲ್ಲಿ ಕುಡಿಯುವ ನಲ್ಲಿ ನೀರಿನ ಸಂಪರ್ಕ ಜೋಡಿಸಿ ಗುತ್ತಿಗೆದಾರರು ಕಾಮಗಾರಿಯ ಸಾಧನೆ ಗೈದಿದ್ದಾರೆ. ಉದಾಹರಣೆ ಎಂಬಂತೆ ತಾಲೂಕಿನ ಅರೇಹಳ್ಳಿ ಗ್ರಾಮಪಂಚಾಯಿತಿ ಜೋಡುಕಟ್ಟೆ ಬಯಲು ಎಸ್.ಸಿ ಕಾಲೋನಿಯಲ್ಲಿ ಮನೆ ಮನೆಗೆ ಗಂಗೆ ಜಲಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ನಲ್ಲಿ ಕೊಚ್ಚೆ ಗುಂಡಿಯಲ್ಲಿ ನಿರ್ಮಿಸಿದ್ದು ಕಂಡುಬರುತ್ತಿದೆ.
ಇದನ್ನೂ ಓದಿ : ಆಲಮಟ್ಟಿ: ಕುಡಿಯುವ ನೀರಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಧರಣಿ ನಿರತರು ಅಸ್ವಸ್ಥ
ತಕ್ಷಣವೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ, ಹಾಗೂ ಅಭಿವೃದ್ಧಿ ಅಧಿಕಾರಿಗಳು ನಿದ್ರಾವಸ್ಥೆಯಿಂದ ಎದ್ದು ಗಮನಹರಿಸಿ ಕುಡಿಯುವ ನೀರಿನ ನಲ್ಲಿಯನ್ನು ಕೊಚ್ಚೆ ಗುಂಡಿಯಿಂದ ತೆಗೆಸಿ ಸೂಕ್ತ ಜಾಗದಲ್ಲಿ ಅಳವಡಿಸಿ ಜೋಡುಕಟ್ಟೆ ಬಯಲು ಎಸ್. ಸಿ ಕಾಲೋನಿಯವರ ಆರೋಗ್ಯ ಕಾಪಾಡಲಿ ಎನ್ನುವ ಮಾತು ಆ ಭಾಗದ ಸಾರ್ವಜನಿಕರಿಂದ ಕೇಳಿಬರುತ್ತಿದೆ.