Advertisement

ಟ್ಯಾಂಕರ್‌ನಿಂದ ಕುಡಿವ ನೀರು ಪೂರೈಕೆ

03:31 PM May 18, 2019 | Team Udayavani |

ಬೇಲೂರು: ತಾಲೂಕಿನಲ್ಲಿ ಬರ ಪರಿಸ್ಥಿತಿ ಹೆಚ್ಚಿದ್ದು ಕುಡಿವ ನೀರಿಗಾಗಿ ಹಲವು ಗ್ರಾಮಗಳಲ್ಲಿ ತೀವ್ರ ತೊಂದರೆ ಅನುಭವಿಸುವಂತಾಗಿದ್ದು ಗ್ರಾಪಂ ಟ್ಯಾಂಕರ್‌ ಮೂಲಕ ನೀರು ಪೂರೈಸುವ ಸ್ಥಿತಿ ಒದಗಿದೆ.

Advertisement

ಬೇಲೂರು ತಾಲೂಕು ಮಲೆನಾಡು ಅರೆಮಲೆನಾಡು ಬಯಲು ಸೀಮೆ ಪ್ರದೇಶವಾಗಿದ್ದರು ಈ ಬಾರಿ ಮಳೆಯ ಕೊರತೆಯಿಂದ ಕೆರೆಗಳಲ್ಲಿ ನೀರು ತುಂಬದೆ ಜನ ಜಾನು ವಾರುಗಳಿಗೆ ಕುಡಿಯಲು ನೀರಿಲ್ಲದೆ ತೊಂದರೆ ಅನುಭವಿಸುವಂತಾಗಿದೆ.

ಸಿಗದ ಯಗಚಿ ನೀರು: ತಾಲೂಕಿನಲ್ಲಿ ಯಗಚಿ ಮತ್ತು ವಾಟೇಹೊಳೆ ಜಲಾಶಯಗ‌ಳಿದ್ದರೂ ಸಹ ತಾಲೂಕಿಗೆ ಸಂಪೂರ್ಣ ಕುಡಿಯುವ ನೀರು ಕಲ್ಪಿಸಲು ಅಧಿಕಾರ ಅನುಭವಿಸಿದ ಶಾಸಕರು ಹಾಗು ರಾಜಕೀಯ ಪಕ್ಷಗಳ ಮುಖಂಡರುಗಳ ಇಚ್ಚಾಶಕ್ತಿ ಕೊರತೆ ಮತ್ತು ನಿರ್ಲಕ್ಷ ವಹಿಸಿರುವುದು ಎದ್ದು ಕಾಣುತ್ತಿದೆ ಅಲ್ಲದೆ ಯಗಚಿ ಜಲಾಶಯದಿಂದ ಚಿಕ್ಕಮಗಳೂರು, ಅರಸಿಕೆರೆಗೆ ಕುಡಿಯುವ ನೀರು ಸರಾಬರಾಜು ಮಾಡುತ್ತಿದ್ದಾರೆ ಅದರೆ ತಾಲೂಕಿನಲ್ಲೆ ಇರುವ ಜಲಾಶಯದಿಂದ ತಾಲೂಕಿಗೆ ಕುಡಿಯುವ ನೀರಿನ ಯೋಜನೆ ಕಲ್ಪಿಸಲು ಮಾತ್ರ ಇದುವರೆವಿಗೂ ಸಾಧ್ಯವಾಗಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಬಯಲು ಸೀಮೆಯಂತೆ ಮಲೆನಾಡು ಪ್ರದೇಶಗಳಲ್ಲೂ ಹಳ್ಳ ಜರಿಗಳು ಭತ್ತಿಹೋಗಿದ್ದು ಅಲ್ಲಿಯೂ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣ ವಾಗಿದೆ ಅರಣ್ಯ ನಾಶ ದಿಂದಾಗಿ ಪರಿಸರದಲ್ಲಿ ಏರುಪೇರಾಗಿ ಮಳೆ ಕೊರತೆ ಎದುರಿಸುತ್ತಿರುವ ಬೇಲೂರು ತಾಲೂಕನ್ನು ಸರ್ಕಾರ ಬರ ಪೀಡಿತ ಪ್ರದೇಶವೆಂದು ಘೋಷಿಸಿದೆ ತಾಲೂಕು ಆಡಳಿತ ಸಮರ್ಪಕವಾಗಿ ಬರ ನಿರ್ವಹಣೆ ಮಾಡಲು ಮುಂದಾಗುವುದು ಅವಶ್ಯಕವಾಗಿದೆ.

ಟ್ಯಾಂಕರ್‌ ನೀರು: ತಾಲೂಕಿನ 37 ಗ್ರಾಪಂಗಳ ಪೈಕಿ ತೀವ್ರ ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳಾದ ಶಿವನೆನಹಳ್ಳಿ (ದೊಂಬರಹಟ್ಟಿ), ಮಾರೇನಹಳ್ಳಿ, ಇಬ್ಬಿಡು ಕಾಲೋನಿ, ಶಿವಪುರ ಕಾವಲು, ದೊಡ್ಡಬ್ಯಾಡಿಗೆರೆ, ವೀರದೇವನಹಳ್ಳಿ, ಕಟ್ಟೆಸೋಮನಹಳ್ಳಿ, ಚಟ್ನಹಳ್ಳಿ, ಮಲಯಪ್ಪನ ಕೊಪ್ಪಲು, ಕೊಂಡ್ಲಿ, ಗೊಲ್ಲರಹಟ್ಟಿ, ಕಬ್ಬಗರಹಳ್ಳಿ, ಪೊನ್ನಾಥಪುರ ಗ್ರಾಮಗಳಲ್ಲಿ ತೀವ್ರ ತರವಾದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಈ ವ್ಯಾಪ್ತಿಯ ಗ್ರಾಪಂಗಳು ಟ್ಯಾಂಕರ್‌ ಮೂಲಕ ಹಳ್ಳಿಗಳಿಗೆ ಕುಡಿಯುವ ನೀರನ್ನು ಪೂರೈಸುತ್ತಿವೆ. ಸರ್ಕಾರ ಕುಡಿ ಯುವ ನೀರಿಗೆ ಸಾಕಷ್ಟು ಅನುದಾನ ಬಿಡುಗಡೆಗೊಳಿಸುತ್ತಿದೆ ಅದರೆ ಗ್ರಾಮೀಣ ಪ್ರದೇಶಗಳ ಕೆರೆ ಕಟ್ಟೆ ಹಾಗೂ ಜಲ ಮೂಲಗಳನ್ನು ಉಳಿಸಿ ದುರಸ್ಥಿಗೊಳಿಸಿ ಮಳೆಗಾಲದಲ್ಲಿ ನೀರು ಸಂಗ್ರಹ ಮಾಡಲು ವ್ಯವಸ್ಥೆ ಮಾಡಲು ಮುಂದಾ ದಾಗ ಮಾತ್ರ ಮುಂದಿನ ದಿನಗಳಲ್ಲಿ ನೀರಿನ ಕೊರತೆ ನೀಗಿಸಲು ಸಹಕಾರಿಯಾಗಲಿದೆ.

ಸಮಸ್ಯೆಗೆ ಸೂಕ್ತ ಪರಿಹಾರದ ಭರವಸೆ:

ತಾಲೂಕಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇರುವ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ನೀಡುತ್ತಿದ್ದೇವೆ ಅಲ್ಲದೆ ಖಾಸಗಿ ಬೋರ್‌ವೆಲ್ ಮಾಲೀಕರಿಂದ ನೀರು ಪಡೆದು ಜನರಿಗೆ ನೀಡುತ್ತಿದ್ದು ಎತ್ತಿನಹೊಳೆ ಯೋಜನೆಯಲ್ಲಿ ಬರುವ ಹಳ್ಳಿಗಳಿಗೆ ಎತ್ತಿನಹೊಳೆ ಯೋಜನೆಯವರು ಸಹ ನೀರು ನೀಡುತ್ತಿದ್ದು ತಾಲೂಕಿನಲ್ಲಿ ಕುಡಿಯುವ ನೀರಿಗೆ ಯಾವುದೆ ತೊಂದರೆಯಾಗದಂತೆ ಗಮನಹರಿಸಿರುವುದಾಗಿ ತಾಪಂ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್‌ ಉದಯವಾಣಿಗೆ ತಿಳಿಸಿದರು. ನೀರಿನ ಸಮಸ್ಯೆ ಬಗೆಹರಿಸಲು 40 ಕೊಳವೆ ಬಾವಿ ಕೊರೆಯಲಾಗಿದ್ದು ಅದರಲ್ಲಿ 32ಕೊಳವೆಬಾವಿಗಳು ಯಶಸ್ವಿ ಯಾಗಿದ್ದು ಕುಡಿಯುವ ನೀರಿನ ಕಾಮಾಗಾರಿಗೆ ಟಾಸ್ಕ್ಪೋರ್ಸ್‌ ಸಮಿತಿಯಿಂದ 50 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಇದರಲ್ಲಿ ಪೈಪ್‌ಲೈನ್‌ ದುರಸ್ಥಿ ಹಾಗು ಕಿರು ನೀರು ಪುನ:ಶ್ಚೇತನ ಕಾಮಾಗಾರಿಗಳು ಪ್ರಗತಿಯಲ್ಲಿವೆ ಎಂದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next