Advertisement

ಟೆಂಡರ್‌ ಹಂತದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ

12:42 PM May 02, 2022 | Team Udayavani |

ಪುತ್ತೂರು: ವಿಧಾನಸಭೆ ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಕಲ್ಪಿಸುವ ನಿಟ್ಟಿನಲ್ಲಿ 325 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಅನುಷ್ಠಾನವಾಗಲಿದ್ದು, ಪ್ರಸ್ತುತ ಟೆಂಡರ್‌ ಹಂತದಲ್ಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ದ.ಕ. ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಸಹಯೋಗದಲ್ಲಿ ಆರ್ಯಾಪು ಗ್ರಾ.ಪಂ.ನಿಂದ ಕಚೇರಿ ಆವರಣದಲ್ಲಿ ನಿರ್ಮಾಣಗೊಂಡ ನೇತಾಜಿ ಸುಭಾಷ್‌ಚಂದ್ರ ಭೋಸ್‌ ಸಭಾಂಗಣ ಉದ್ಘಾಟನೆ ಹಾಗೂ ನರೇಗಾ ಮತ್ತು ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ವಿವಿಧ ಕಾಮಗಾರಿಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ನೇತ್ರಾವತಿ ನದಿಯಿಂದ ನೀರನ್ನು ಸಂಗ್ರಹಿಸಿ ಓವರ್‌ಹೆಡ್‌ ಟ್ಯಾಂಕ್‌ ಗಳ ಮೂಲಕ ಮನೆಗಳಿಗೆ ಸರಬರಾಜು ಮಾಡಲಾಗುವುದು ಎಂದರು.

ಜಲ ಜೀವನ್‌ ಮಿಷನ್‌ ಮೂಲಕ 3.5 ಕೋ.ರೂ., ರಸ್ತೆ, ಕುಡಿಯುವ ನೀರು ಮೊದಲಾದ ಮೂಲ ಸೌಲಭ್ಯ ಕಲ್ಪಿಸಲು ಆರ್ಯಾಪು ಗ್ರಾ.ಪಂ.ಗೆ 11.55 ಕೋ. ರೂ. ಅನುದಾನ ನೀಡಲಾಗಿದೆ. ಗ್ರಾಮೀಣ ಯುವಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸಣ್ಣ ಕೈಗಾರಿಕೆ ಉತ್ತೇಜನ ನೀಡಲು ಆರ್ಯಾಪು ಗ್ರಾ.ಪಂ.ನಲ್ಲಿ ಜಾಗ ಗುರುತಿಸಲಾಗುವುದು ಎಂದು ಹೇಳಿದರು.

ರಾಜೀವ ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟಿಸಿದ ವಿ.ಪ. ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಗ್ರಾ.ಪಂ.ನಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಆಡಳಿತ ನಡೆಸುವುದಲ್ಲ. ಸ್ಥಳೀಯವಾಗಿ ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಆಡಳಿತ ನಡೆಸುತ್ತಾರೆ ಎಂದರು. ಆರ್ಯಾಪು ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಕೆ. ಅಧ್ಯಕ್ಷತೆ ವಹಿಸಿದ್ದರು.

ಉದ್ಘಾಟನೆಗೊಂಡ ಕಾಮಗಾರಿಗಳು

Advertisement

ಕುರಿಯದಲ್ಲಿ 10 ಲಕ್ಷ ರೂ. ವೆಚ್ಚದ ರಾಜೀವ ಗಾಂಧಿ ಸೇವಾ ಕೇಂದ್ರ, ಕಲ್ಲರ್ಪೆಯಲ್ಲಿ 6 ಲಕ್ಷದ ರೂ. ವೆಚ್ಚದ ಸ್ವಚ್ಛ ಸಂಕೀರ್ಣ, ಗ್ರಾಮ ಪಂಚಾಯತ್‌ ಕಚೇರಿ ಬಳಿ 15 ಲಕ್ಷ ರೂ. ವೆಚ್ಚದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಸಭಾಂಗಣ, 3.80 ಲಕ್ಷ ರೂ. ವೆಚ್ಚದ ಕೊಲ್ಯ ಕುಡಿಯುವ ನೀರಿನ ಸೋಲಾರ್‌ ಪಂಪ್‌ ಕಾಮಗಾರಿಯ ಉದ್ಘಾಟನೆ ನಡೆಯಿತು.

ಕ್ರೀಡಾ ಸಾಮಗ್ರಿ ವಿತರಣೆ

ಕಾರ್ಪಾಡಿ ಸುಬ್ರಹ್ಮಣ್ಯೇಶ್ವರ ಯುವಕ ಮಂಡಲ, ಶ್ರೀ ವಿನಾಯಕ ನ್ಪೋರ್ಟ್ಸ್ ಕ್ಲಬ್‌ ಸಂಟ್ಯಾರ್‌, ಸೂರ್ಯ ಯುವಕ ಮಂಡಲ ಇಡಬೆಟ್ಟು, ಶ್ರೀಕೃಷ್ಣ ಯುವಕ ಮಂಡಲ ಕಂಬಳತ್ತಡ್ಡ, ಯುವಕ ಮಂಡಲ ಮಾವಿನಕಟ್ಟೆ, ಹಿ.ಪ್ರಾ. ಶಾಲೆಗಳಾದ ಹಂಟ್ಯಾರು, ಇಡಬೆಟ್ಟು, ಕುರಿಯ, ಕುಂಜೂರುಪಂಜ ಅ. ಹಿ.ಪ್ರಾ. ಶಾಲೆಗೆ ಕ್ರೀಡಾ ಸಾಮಗ್ರಿ ವಿತರಿಸಲಾಯಿತು.

ಶಾಸಕರಿಗೆ ಮನವಿ

ಕುರಿಯ ಓಟೆತ್ತಿಮಾರ್‌ ಪರಿಶಿಷ್ಟ ಜಾತಿ ಕಾಲನಿಗೆ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಸದಸ್ಯ ಬೂಡಿಯಾರ್‌ ಪುರುಷೋತ್ತಮ ರೈ ಶಾಸಕ ಸಂಜೀವ ಮಠಂದೂರು ಅವರಿಗೆ ಮನವಿ ಮಾಡಿದರು. ವಿ. ಪ.ಸದಸ್ಯ ಹರೀಶ್‌ ಕುಮಾರ್‌, ಉದ್ಯೋಗ ಖಾತರಿ ಯೋಜನೆಯ ಒಂಬುಡ್ಸ್‌ ಮೆನ್‌ ರಾಮದಾಸ ಗೌಡ, ತಾ.ಪಂ. ಇಒ ನವೀನ್‌ ಭಂಡಾರಿ ಉಪಸ್ಥಿತರಿದ್ದರು. ಪಿಡಿಒ ನಾಗೇಶ್‌ ಎಂ. ಸ್ವಾಗತಿಸಿದರು. ದ್ವಿ.ದ ಲೆಕ್ಕ ಸಹಾಯಕ ಮೋನಪ್ಪ ವಂದಿಸಿದರು. ಗ್ರಾ.ಪಂ. ಸದಸ್ಯ ನೇಮಾಕ್ಷ ಸುವರ್ಣ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next