ಶಿರಸಿ : ತೀವ್ರ ಬೇಸಿಗೆಯ ಪರಿಣಾಮ ಎಲ್ಲಾ ಕಡೆ ನೀರಿನ ಕೊರತೆ ಎದುರಾಗಿದೆ. ಮಲೆನಾಡಿನ ಬಾಗಿಲಾದ ಶಿರಸಿಯಲ್ಲೂ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಇದನ್ನು ಮನಗಂಡ ಶಿರಸಿ ಜೀವಜಲ ಕಾರ್ಯಪಡೆಯು ಸ್ವತಃ ನಗರ ಭಾಗದ ವಿವಿಧೆಡೆ ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಮೂಲಕ ನೀರಿನ ಸರಬರಾಜು ಮಾಡುತ್ತಿದೆ. ಸಾರ್ವಜನಿಕರಿಗೆ ಉಂಟಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾಗಿದೆ.
ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರ ನಿರಂತರ ನಿರಪೇಕ್ಷಿತ ಸಾಮಾಜಿಕ ಕಳಕಳಿಗೆ ಜನರು ಕೃತಜ್ಞತೆ ಸಲ್ಲಿಸುತ್ತಿದ್ದಾರೆ.
ಜಲಮೂಲಗಳು, ನೀರು ಎಂಬಿತ್ಯಾದಿ ವಿಷಯಗಳು ಬಂದಾಗ ಅಲ್ಲಿ ಶಿರಸಿ ಜೀವಜಲ ಕಾರ್ಯಪಡೆ ಇರಲಿದೆ ಎಂಬುದಕ್ಕೆ ಈ ವಿದ್ಯಮಾನಗಳೂ ಸಾಕ್ಷಿಯಾಗಿವೆ. ಅಂತಹ ಕಾರ್ಯಪಡೆ ಕಳೆದ ಒಂಬತ್ತು ವರ್ಷಗಳಿಂದ ಕೆರೆ ಅಭಿವೃದ್ಧಿಯ ಜೊತೆಗೆ ಮನೆ ಮನೆಗೆ ಉಚಿತವಾಗಿ ನೀರು ನೀಡುವ ಕೆಲಸವನ್ನೂ ಮಾಡುತ್ತಿದೆ. ಒಂದು ಕಡೆ ಅಂತರ್ಜಲ ಮಟ್ಟ ಹೆಚ್ಚಿಸುವ ಕೆಲಸ ನಡೆದಿದ್ದಲ್ಲಿ ಮತ್ತೊಂದೆಡೆ ಅಗತ್ಯ ಉಳ್ಳವರ ದಾಹ ತಣಿಸುವ ಕೆಲಸ ಆಗುತ್ತಿದೆ. ಒಂದು ಸಂಸ್ಥೆ ಜಲ ಸಂರಕ್ಷಣೆ, ಜಲ ದಾನ ಎರಡೂ ಮಾಡುತ್ತಿದೆ.
ಕಾರ್ಯಪಡೆ ಈವರೆಗೆ 22 ಕೆರೆ ಅಭಿವೃದ್ದಿ ಮಾಡಿ ಗಮನ ಸೆಳೆದರೆ ಈಗ ಮತ್ತೆ ನಗರದಲ್ಲಿ ಮೂರು ಟ್ಯಾಂಕರ್ ನೀರು ಸದಾ ನೀರುಣಿಸುತ್ತಿದೆ.
ಒಂದಡೆ ಬಾಯಾರಿದ ಭೂಮಿಯಲ್ಲಿ ಕೆರೆಗಳ ಜೀರ್ಣೋದ್ಧಾರ ಮೂಲಕ ಜಲ ಸಂರಕ್ಷಣೆ ಮಾಡಿದರೆ, ಈಗ ಬಾಯಾರಿದ ಜನರಿಗೆ ನೀರನ್ನೂ ಕೊಡುತ್ತಿದ್ದಾರೆ. ಹೆಬ್ಬಾರ್ ಅವರ ಮಾನವೀಯ ಕಾರ್ಯಕ್ಕೆ, ನಿಸ್ವಾರ್ಥ ಸೇವಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.
– ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ನಿರ್ದೇಶಕರು ಧಾರವಾಡ ಹಾಲು ಒಕ್ಕೂಟ
ಜಲ ಸಂಕಷ್ಟದ ಅರಿವಿದೆ. ಹೀಗಾಗಿ ಕುಡಿಯುವ ನೀರು ಕೊಡುವದು ಎಲ್ಲರ ಜವಬ್ದಾರಿ ಎಂದು ಭಾವಿಸಿ ನಿರಂತರ ಸೇವೆ ನೀಡುತ್ತಿದ್ದೇವೆ.
– ಶ್ರೀನಿವಾಸ ಹೆಬ್ಬಾರ್,ಅಧ್ಯಕ್ಷರು ಜೀವಜಲ ಕಾರ್ಯಪಡೆ
ಇದನ್ನೂ ಓದಿ: Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ