Advertisement
ಜಲಜೀವನ್ ಮಿಷನ್ ಯೋಜನೆಯಡಿ ಕೇಂದ್ರ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರಯತ್ನದಿಂದಾಗಿ 50 ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಟೆಂಡರ್ ಆಗಿ ಎರಡೂವರೆ ವರ್ಷ ಕಳೆದರೂ, ಇನ್ನೂ ಪೈಪ್ ಲೈನ್ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಹೇರಿಕುದ್ರು ಸೇತುವೆ ಮೇಲೆ ನೀರಿನ ಪೈಪ್‌ಲೈನ್ ಹಾಕಲು ಹೆದ್ದಾರಿ ಪ್ರಾಧಿಕಾರವು ನಿರಕ್ಷೇಪಣ ಪತ್ರವನ್ನು ನೀಡಲು ಮೀನಾಮೇಷ ಎಣಿಸುತ್ತಿರುವುದು.
Related Articles
Advertisement
ವಿಳಂಬ ಯಾಕೆ?
ಜಲಜೀವನ್ ಮಿಷನ್‌ನಡಿ 50 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಅದರಂತೆ ಪುರಸಭೆ ವ್ಯಾಪ್ತಿಯ ಚಿಕ್ಕನ್‌ಸಾಲ್‌ನಲ್ಲಿರುವ ಟ್ಯಾಂಕ್‌ನಿಂದ ಹೇರಿಕುದ್ರುವಿಗೆ ಸುಮಾರು 1 ಕಿ.ಮೀ. ದೂರದವರೆಗೆ ಪೈಪ್‌ಲೈನ್ ಮೂಲಕ ನೀರು ಪೂರೈಸುವ ಯೋಜನೆ ರೂಪಿಸಲಾಗಿದೆ. ಈಗ ಸೇತುವೆಯವರೆಗೆ ಪೈಪ್‌ಲೈನ್ ಆಗಿದೆ. ಅಲ್ಲಿಂದ ಮುಂದಕ್ಕೆ ಸೇತುವೆ ಮೇಲೆ ಹೆದ್ದಾರಿ ಪ್ರಾಧಿಕಾರದ ನಿರಕ್ಷೇಪಣ ಪತ್ರದ ಅಗತ್ಯವಿದ್ದು, ಅದಕ್ಕೆ ಈಗಾಗಲೇ ಪಂಚಾಯತ್ ರಾಜ್ ಇಲಾಖೆಯಿಂದ 2 ಲಕ್ಷ ರೂ. ರಾಯಧನ, 2.90 ಲಕ್ಷ ರೂ. ಬ್ಯಾಂಕ್ ಗ್ಯಾರಂಟಿ ಕಟ್ಟಿ 3-4 ತಿಂಗಳು ಕಳೆದಿವೆ. ಇನ್ನೂ ಪ್ರಾಧಿಕಾರದಿಂದ ಹಲವಾರು ದಾಖಲೆಗಳನ್ನು ಕೇಳುತ್ತಿರುವುದರಿಂದ ಈ ಪ್ರಕ್ರಿಯೆ ವಿಳಂಬವಾಗಿದೆ.
ಸೇತುವೆ ಮೇಲೆ ಹಾಕಲು ಮನವಿ
ಪ್ರಾಧಿಕಾರದ ಅನುಮತಿ ಸಿಗಲು ವಿಳಂಬ ಆಗುತ್ತಿರುವುದರಿಂದ, ಟೆಂಡರ್ ಗುತ್ತಿಗೆ ಅವಧಿ ಮುಗಿಯುತ್ತ ಬರುತ್ತಿರುವುದರಿಂದ ತಾತ್ಕಾಲಿಕವಾಗಿ ಸೇತುವೆ ಕೆಳಗಿನಿಂದ ಹಾಕುವ ಪ್ರಸ್ತಾವವನ್ನು ಪಂಚಾಯತ್ ಮುಂದಿಟ್ಟಿತ್ತು. ಆದರೆ ಈ ಬಗ್ಗೆ ಕರೆದ ವಿಶೇಷ ಸಭೆಯಲ್ಲಿ ಹೇರಿಕುದ್ರು ಜನರು, ಶಾಶ್ವತ ಪರಿಹಾರ ನೆಲೆಯಲ್ಲಿ ಸೇತುವೆ ಮೇಲಿನಿಂದಲೇ ಪೈಪ್ ಲೈನ್ ಹಾಕುವಂತೆ ಅಭಿಪ್ರಾಯ ವ್ಯಕ್ತವಾಯಿತು.
ಪರ – ವಿರೋಧ
ಇಷ್ಟು ವರ್ಷ ಹೊಳೆಯಲ್ಲಿ ಪೈಪ್‌ಲೈನ್ ಕೆಳಗಡೆಯಿಂದ ಹಾಕುತ್ತಿರುವುದರಿಂದ ಪೈಪ್‌ಗೆ ಮರಳುಗಾರಿಕೆ, ಮೀನುಗಾರಿಕೆ ದೋಣಿಗಳಿಂದ ಹಾನಿಯಾಗುತ್ತಿದ್ದು, ಈಗ ಮತ್ತೆ ಕೆಳಗಿಂದ ಪೈಪ್ ಲೈನ್ ಹಾಕಿದರೆ ಮತ್ತೆ ಸರಿಪಡಿಸಲು ಅದಕ್ಕೂ ಹೆಚ್ಚುವರಿ ಅನುದಾನ ಅಗತ್ಯವಿದೆ. ಅದಕ್ಕೆ ಶಾಶ್ವತ ಪರಿಹಾರವೆಂಬಂತೆ ಸೇತುವೆ ಮೇಲಿನಿಂದಲೇ ಪೈಪ್ ಲೈನ್ ಮಾಡಿ ಎನ್ನುವುದಾಗಿ ತಾ.ಪಂ. ಮಾಜಿ ಅಧ್ಯಕ್ಷ ಭಾಸ್ಕರ ಬಿಲ್ಲವ, ಗ್ರಾ.ಪಂ. ಮಾಜಿ ಸದಸ್ಯ ಗಂಗಾಧರ್ ಶೆಟ್ಟಿ, ಸಮಾಜ ಸೇವಕ ಅಭಿಜಿತ್ ಪೂಜಾರಿ ಹೇರಿಕುದ್ರು ಒತ್ತಾಯಿಸಿದ್ದಾರೆ. ಸೇತುವೆ ಮೇಲಿನಿಂದ ಪೈಪ್‌ಲೈನ್ ಮಾಡಲು ಸಂಸದರ ಮೂಲಕ ಅನೇಕ ಸಮಯಗಳಿಂದ ಪ್ರಯತ್ನಿಸುತ್ತಿದ್ದು, ಅನುಮತಿ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ತಾತ್ಕಾಲಿಕವಾಗಿ ಸೇತುವೆ ಕೆಳಗಡೆಯಿಂದ ಹಾಕುವ ತೀರ್ಮಾನ ಮಾಡಲಾಗಿತ್ತು. ಆ ಬಳಿಕ ಮತ್ತೆ ಸರಿಪಡಿಸಬಹುದು ಎಂದು ನಿರ್ಧರಿಸಲಾಗಿತ್ತು ಎನ್ನುವುದಾಗಿ ಬಿಜೆಪಿ ಮುಖಂಡ ಸುನೀಲ್ ಶೆಟ್ಟಿ ಹೇರಿಕುದ್ರು ಸ್ಪಷ್ಟಪಡಿಸಿದ್ದಾರೆ.
ಸಚಿವ ಗಡ್ಕರಿಗೂ ಮನವಿ
ಹೇರಿಕುದ್ರು ಭಾಗದ ಜನರ ನೀರಿನ ಸಮಸ್ಯೆ ಕುರಿತಂತೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೂ ಮನವಿ ಸಲ್ಲಿಸಲಾಗಿದ್ದು, ಇದಕ್ಕೆ ಸ್ಪಂದಿಸಿದ ಅವರು, ನೀರಿನ ಸಮಸ್ಯೆ ಮೂಲ ಅಗತ್ಯವಾಗಿದ್ದು, ಶೀಘ್ರ ಪರಿಶೀಲಿಸಿ, ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಸಚಿವರೇ ಸೂಚಿಸಿದರೂ ಇನ್ನೂ ಕಾಮಗಾರಿ ಮಾತ್ರ ಕೈಗೂಡಿಲ್ಲ.
2 ತಿಂಗಳ ಕಾಲಾವಕಾಶ: ಹೇರಿಕುದ್ರು ನೀರಿನ ಪೈಪ್‌ಲೈನ್ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಶೇಷ ಸಭೆ ನಡೆಸಿ, ಚರ್ಚಿಸಲಾಗಿದೆ. ಹೆದ್ದಾರಿ ಪ್ರಾಧಿಕಾರದ ಅನುಮತಿ ಬಗ್ಗೆಯೂ ಎಲ್ಲ ಪ್ರಯತ್ನಗಳು ಆಗುತ್ತಿದೆ. ಶಾಸಕರು, ಸಂಸದರ ಪ್ರಯತ್ನದಿಂದ ಶೀಘ್ರ ಆಗುವ ನಿರೀಕ್ಷೆಯಿದೆ. ಎಂಜಿನಿಯರ್ ಹಾಗೂ ಸಂಬಂಧಪಟ್ಟ ಅಧಿಕಾರಿ ವರ್ಗದವರಿಗೆ ನಾವು 2 ತಿಂಗಳ ಕಾಲಾವಕಾಶ ನೀಡಿದ್ದೇವೆ. ಅದರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. – ಲಾರೆನ್ಸ್ ಡಿಸೋಜಾ, ಅಧ್ಯಕ್ಷರು, ಆನಗಳ್ಳಿ ಗ್ರಾ.ಪಂ.
-ಪ್ರಶಾಂತ್ ಪಾದೆ