Advertisement

ಅಂತರ್ಜಲ ಮಟ್ಟ ಇಳಿಕೆ; 2 ದಿನಗಳಿಗೊಮ್ಮೆ ನೀರು ಪೂರೈಕೆ

07:55 PM Apr 26, 2019 | Team Udayavani |

ಒಣ ಭೂಮಿ ಹಾಗೂ ಎತ್ತರ ಪ್ರದೇಶವಾದ್ದರಿಂದ ಗ್ರಾ.ಪಂ.ನಿಂದ ಸರಬರಾಜಾಗುತ್ತಿರುವ ನೀರು ಪ್ರಶರ್‌ ಇಲ್ಲದೆ ಮೇಲೆ ಏರುತ್ತಿಲ್ಲ. ಹೆಚ್ಚಿನವರು ಕೆಲಸಕ್ಕೆ ತೆರಳುವುದರಿಂದ ಸಮಯಕ್ಕೆ ಸರಿಯಾಗಿ ನೀರು ಬಾರದೇ ಸಂಗ್ರಹಿಸಿಡಲು ತೊಡಕಾಗಿದೆ ಎಂಬುದು ಉದಯವಾಣಿ ತಂಡಕ್ಕೆ ಕಂಡುಬಂದಿದೆ.

Advertisement

ಬೆಳ್ತಂಗಡಿ: ಕೊಳವಿ ಬಾವಿಗಳಲ್ಲಿ ನೀರಿನ ಮಟ್ಟ ಇಳಿಯುತ್ತಿದೆ, ಪಂಚಾಯತ್‌ ನೀರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ… ಭೂಮಿ ಒಣಗಿದ್ದು, ಬಾವಿ ತೆಗೆಯಲು ಹಣವಿಲ್ಲ… ಇದು ತಾಲೂಕಿನ ಮೇಲಂತಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಹಿರಿಯಾಜೆ ನಿವಾಸಿಗಳ ಅಳಲು. ಕಳೆದ ಎರಡು ವರ್ಷಗಳ ಹಿಂದೆ ಕಲುಷಿತ ಕೆರೆ ನೀರನ್ನೇ ಅವಲಂಬಿಸಿದ್ದ ಇಲ್ಲಿನ ನಿವಾಸಿಗಳಿಗೆ ಪ್ರಸ್ತುತ ಮೂರು ತಿಂಗಳ ಹಿಂದೆ ಗ್ರಾಮ ಪಂಚಾಯತ್‌ನಿಂದ ಕೊರೆದ ಕೊಳವೆ ಬಾವಿ

ನೀರಿನ ಆಶ್ರಯ ದೊರೆತಿದೆ.
ಪಂಚಾಯತ್‌ ನೀರು ಎರಡು ದಿನಗಳಿಗೊಮ್ಮೆ ಬರುತ್ತದೆ. ಆದರೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ನೇರ ಟ್ಯಾಂಕ್‌ಗೆ ತುಂಬಿ ಸರಬರಾಜು ಮಾಡಿದ್ದಲ್ಲಿ ಕೊಂಚ ನೀರು ಸಂಗ್ರಹಿಸಿಕೊಳ್ಳಬಹುದು. ಆದರೆ ನೇರವಾಗಿ ನೀರು ಸರಬರಾಜಾಗಿ ಎತ್ತರ ಪ್ರದೇಶ ವಾದ್ದರಿಂದ ನೀರು ಬರುವುದೇ ಅಪರೂಪವಾಗಿದೆ ಎನ್ನುತ್ತಾರೆ ಹಿರಿಯಾಜೆ ನಿವಾಸಿ ಪ್ರೇಮಾ.

ಸಮಯಕ್ಕೆ ಸರಿ ನೀರಿಲ್ಲ
ನಾವು ಕೆಲಸಕ್ಕೆ ಹೋಗುವವರು. ಅವರ ಸಮಯಕ್ಕೆ ನೀರು ಬಿಟ್ಟರೆ ನಾವು ಸಂಗ್ರಹಿಸಿಡುವುದು ಹೇಗೆ ? ನಿರ್ದಿಷ್ಟ ಸಮಯ ಎಂದು ನಿಗದಿ ಪಡಿಸಿದರೆ ನಾವು ಅದೇ ಸಮಯದಲ್ಲಿ ನೀರು ಸಂಗ್ರಹಿಸಿಡಬಹುದು. ಒಮ್ಮೊಮ್ಮೆ ಬೆಳಗ್ಗೆ ಮತ್ತೂಮ್ಮೆ ಸಂಜೆ ನೀರು ಬಿಡುವುದರಿಂದ ಸಮಸ್ಯೆಯಾಗಿದೆ ಎಂದು ಗಣೇಶ್‌ ಅಳಲು ತೋಡಿಕೊಂಡರು.

ಪ್ರತಿದಿನ ಸಂಜೆ 6ರಿಂದ 1 ಗಂಟೆ ನೀರು ಬರುತ್ತಿದೆ. ನೀರು ಬಾರದಿದ್ದಲ್ಲಿ ಸ್ಥಳೀಯರ ಮನೆಯಿಂದ ನೀರು ಹೊತ್ತು ತರಬೇಕಾಗಿದೆ. ಸಮಸ್ಯೆ ಯಾರಿಗೆ ಹೇಳುವುದು, ನೀರು ಇಲ್ಲದಿದ್ದರೆ ಪಂಚಾಯತ್‌ ಸಿಬಂದಿಯಾದರೂ ಏನು ಮಾಡಿಯಾರು… ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ಏನು ಎಂಬುದು ಚಿಂತೆಯಾಗಿದೆ ಎಂದು ಸ್ಥಳೀಯರಾದ ಜಯಾನಂದ, ಪ್ರಮೀಳಾ, ಶತೀಶ್‌, ಬೇಬಿ ಸಮಸ್ಯೆ ಬಗ್ಗೆ ಆತಂಕ ವ್ಯಕ್ತಪಡಿಸಿದರು.

Advertisement

 ಸಾಲ ಮಾಡಿ ಬಾವಿ
ಪಂ.ನಿಂದ ಅವಶ್ಯ ದಾಖಲೆಗಳಿದ್ದರೂ ನಳ್ಳಿ ನೀರಿನ ಸಂಪರ್ಕ ನೀಡಿಲ್ಲ. ಸಾಲ ಮಾಡಿ ಸುಮಾರು 1.30 ಲಕ್ಷ ರೂ. ಖರ್ಚಿನಲ್ಲಿ ಬಾವಿ ತೆಗೆಸಿದ್ದೇನೆ. ಉದ್ಯೋಗ ಖಾತ್ರಿ ಯೋಜನೆ ಮೂಲಕ ಅರ್ಜಿ ಸಲ್ಲಿದ್ದರಿಂದ 10 ಸಾವಿರ ರೂ. ಮಾತ್ರ ಲಭಿಸಿದೆ.
– ಹರಿಶ್ಚಂದ್ರ, ಆಟೋ ಚಾಲಕ

ವಿದ್ಯುತ್‌ ಸಮಸ್ಯೆ
ಹಿರಿಯಾಜೆಯಲ್ಲಿ 3 ತಿಂಗಳ ಹಿಂದೆ ಕೊಳವೆ ಬಾವಿ ತೆಗೆದಿದ್ದು, 2 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ವಿದ್ಯುತ್‌ ಸಮಸ್ಯೆಯಿಂದ ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಮಾಡಲು ಸಮಸ್ಯೆಯಾಗುತ್ತಿದೆ. ಸವಣಾಲು ಪ್ರದೇಶಕ್ಕೆ ಗ್ರಾ.ಪಂ.ನ 2 ಕೊಳವೆಬಾವಿಗಳಿಂದ ನೀರು ನೀಡಲಾಗುತ್ತಿದೆ. ನೀರು ಪೋಲು, ಕೃಷಿಗೆ ನೀರು ಬಳಕೆಯಿಂದ ಎತ್ತರ ಪ್ರದೇಶಗಳಿಗೆ ನೀರು ಸರಬರಾಜಾಗದೆ ಸಮಸ್ಯೆಯಾಗಿದೆ.
– ಮಹಾದೇವ್‌ ಗಡೇಕರ್‌, ಪಿಡಿಒ, ಮೇಲಂತಬೆಟ್ಟು

ಉದಯವಾಣಿ ಆಗ್ರಹ
ವಾರಕ್ಕೆ 2 ದಿನ ಟ್ಯಾಂಕರ್‌ ನೀರು ಸರಬರಾಜು ಮಾಡಿದ್ದಲ್ಲಿ ಉತ್ತಮ. ಇಲ್ಲವೇ ಸ್ಥಳೀಯ ಖಾಸಗಿ ಕೊಳವೆಬಾವಿ ಮೂಲಕ ನೀರು ಒದಗಿಸುವ ಚಿಂತನೆ ಗ್ರಾ.ಪಂ.ನಿಂದ ಆಗಬೇಕಿದೆ.

– ಕೆರೆಗಳ ಹೂಳು ತೆಗೆಯಬೇಕು.
– ನೇರವಾಗಿ ಪೈಪ್‌ಲೈನ್‌ ಮೂಲಕ ನೀರು ನೀಡದೆ ಟ್ಯಾಂಕ್‌ ಮೂಲಕವೇ ನೀರು ಬರುವಂತಾಗಲಿ.
– ಸಮಯಕ್ಕೆ ಸರಿಯಾಗಿ ನೀರು ಸಿಗಲಿ.
– ಕೊಳವೆ ಬಾವಿಯಿಂದ ನೀರು ಒದಗಿಸಲು ಕ್ರಮ ಅಗತ್ಯ.

ನೀರಿದ್ದರೂ ಉಪಯೋಗಕ್ಕಿಲ್ಲ
ಹಿರಿಯಾಜೆ ದೇವಸ್ಥಾನ ಕೆಳಗಿರುವ ಕೆರೆಯಲ್ಲಿ ಊರಿಗೆ ಆಗುವಷ್ಟು ನೀರಿದೆ. ಸಮೀಪದಲ್ಲೇ ನೀರಿನ ತೊರೆಗೆ ಕಟ್ಟ ಕಟ್ಟಿದ್ದು, ನೀರಿನ ಒರತೆ ಈಗಲೂ ಇದೆ. ಆದರೆ ನೀರು ಕಲುಷಿತಗೊಂಡಿದ್ದರಿಂದ ಊರಿಗೆ ಊರೇ ಬಾಯಾರಿದಂತಾಗಿದೆ. ಸಿಕ್ಕಸಿಕ್ಕಲ್ಲಿ ಕೊಳವೆ ಬಾವಿ ತೆಗೆದು ಅಂತರ್ಜಲ ಮಟ್ಟ ಕುಸಿತ ಮಾಡುವ ಬದಲು, ಕೆರೆಯ ಕಲುಷಿತ ನೀರು ಹಾಗೂ ಕೆಸರು ತೆಗೆದಲ್ಲಿ ಮೂರು ಗ್ರಾಮಗಳಿಗೆ ನೀಡುವಷ್ಟು ನೀರು ಸಿಗಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.

ನೀರಿನ ಮೂಲಗಳು
ಕೊಳವೆಬಾವಿ -5, ಬಾವಿ-0
ಗ್ರಾ.ಪಂ.ನಿಂದ ನೀರಿನ ಸಂಪರ್ಕ
ಸವಣಾಲು – 100 ಮನೆ
ಮಂಡೂರು -110 ಮನೆ
ಮೇಲಂತಬೆಟ್ಟು -130 ಮನೆ

ಮಾಹಿತಿ ನೀಡಿ
ನೀರಿನ ತೀವ್ರ ಸಮಸ್ಯೆಇದ್ದಲ್ಲಿ ತಮ್ಮ ಹೆಸರಿನ ಸಹಿತ “ಉದಯವಾಣಿ’ ವಾಟ್ಸಪ್‌ ನಂಬರ್‌ 91080 51452 ಬರೆದು ಕಳುಹಿಸಿ.

– ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next