ದೊಡ್ಡಬಳ್ಳಾಪುರ: ತಾಲೂಕಿನ ಮಧುರನ ಹೊಸಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದ್ದು, ನೀರಿನ ಸಮಸ್ಯೆಯನ್ನು ತಕ್ಷಣ ಬಗೆಹರಿಸುವಂತೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಮಧುರನಹೊಸಹಳ್ಳಿ ಗ್ರಾಮ ಮತ್ತು ಕಾಲೋನಿ 650 ಜನಸಂಖ್ಯೆಯನ್ನು ಹೊಂದಿದೆ. ಇದಲ್ಲದೆ ಇಲ್ಲಿನ ಬಹುತೇಕ ಕುಟುಂಬಗಳು ಕುರಿ, ಮೇಕೆ ಜೊತೆಗೆ ರಾಸುಗಳನ್ನು ಸಾಕಾಣಿಕೆ ಮಾಡಿ ಕೊಂಡಿದ್ದಾರೆ. ಗ್ರಾಮದ ಸುತ್ತ ಯಾವುದೇ ಕೆರೆಕುಂಟೆಗಳಲ್ಲೂ ನೀರು ಇಲ್ಲ. ಕುಡಿಯುವ ನೀರಿಗೆ ಗ್ರಾಮ ಪಂಚಾಯಿತಿಯಿಂದ ಸರಬರಾಜುಮಾಡುವ ಕೊಳಾಯಿ ನೀರನ್ನೇ ಅವಲಂಬಿಸುವಂತಾಗಿದೆ. ಕೊಳವೆಬಾವಿಯಲ್ಲಿ ನೀರು ಬತ್ತಿ ಹೋಗಿ ತಿಂಗಳು ಕಳೆದಿದ್ದರೂ ಗ್ರಾಮ ಪಂಚಾಯಿತಿಯಲ್ಲಿನ ಆರ್ಥಿಕ ತೊಂದರೆಯನ್ನೇ ನೆಪಮಾಡಿಕೊಂಡು ಕುಡಿಯುವ ನೀರು ಇಲ್ಲದಂತೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್‌ಮಧುರನಹೊಸಹಳ್ಳಿ ಗ್ರಾಮಸ್ಥರ ಮನವಿಗೆ ಸ್ಪಂದಿಸಿ, ಎರಡು ದಿನಗಳಲ್ಲಿ ಕುಡಿಯುವ ನೀರಿನಸೌಲಭ್ಯ ಕಲ್ಪಿಸಲು ತುರ್ತು ಕ್ರಮ ಕೈಗೊಳ್ಳುವಂತೆತಾಲೂಕು ಪಂಚಾಯಿತಿ ಮುಖ್ಯಕಾರ್ಯ ನಿರ್ವಣಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಜಾನುವಾರುಗಳಿಗೆ ನೀರಿಲ್ಲ :
ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಒಂದು ಕುಟುಂಬಕ್ಕೆ ಇಂತಿಷ್ಟೇ ಬಿಂದಿಗೆ ನೀರುಎಂದು ಲೆಕ್ಕದ ಪ್ರಕಾರ ನೀಡಿದರೆ ಜಾನುವಾರುಗಳಿಗೆ ನೀರು ಇಲ್ಲದಂತಾಗಿದೆ.ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕವು ನೀರಿಲ್ಲದೆ ಸ್ಥಗಿತವಾಗಿದೆ. ಜನರುಟ್ಯಾಂಕರ್ ನೀರನ್ನೇ ಕುಡಿದು ಕಾಯಿಲೆಗೆ ತುತ್ತಾಗುತಿದ್ದು, ಆಸ್ಪತ್ರೆ ಸೇರುತ್ತಿದ್ದಾರೆ.ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.