Advertisement
ಪ್ರತೀ ವರ್ಷ ಫೆಬ್ರವರಿ – ಮಾರ್ಚ್ ಆರಂಭವಾಗುತ್ತಿದ್ದಂತೆ ಗ್ರಾಮದಲ್ಲಿ ನೀರಿನ ಸಮಸ್ಯೆ ಉದ್ಭವವಾಗುತ್ತದೆ. ಕನ್ನಡಕುದ್ರು, ಜಾಲಾಡಿ, ಕಟ್ಟು, ಬುಗುರಿಕಡು ಭಾಗಗಳಲ್ಲಿ ಸಮಸ್ಯೆ ತೀವ್ರವಾಗಿದೆ. ಮಳೆಗಾಲ ಆರಂಭವಾಗುವಲ್ಲಿಯವರೆಗೂ ಸಮಸ್ಯೆಗೆ ಪರಿಹಾರ ಮಾತ್ರ ಮರೀಚಿಕೆ. ಹಿಂದೆ ಹೆಮ್ಮಾಡಿ, ಕಟ್‌ಬೆಲ್ತೂರು ಮತ್ತು ದೇವಲ್ಕುಂದಗಳು ಒಂದೇ ವ್ಯಾಪ್ತಿಯಲ್ಲಿದ್ದಾಗ ಒಟ್ಟು 3 ಕೊಳವೆ ಬಾವಿಗಳಿಂದ ಮೂರು ಗ್ರಾಮಗಳ ಜನರಿಗೂ ನೀರು ಪೂರೈಕೆಯಾಗುತ್ತಿತ್ತು. ಆದರೆ ಈಗ 2 ಕೊಳವೆ ಬಾವಿಗಳು ಕಟ್ ಬೆಲ್ತೂರು ಪಂ. ವ್ಯಾಪ್ತಿಯಲ್ಲಿ ಬರುವುದರಿಂದ ಹೆಮ್ಮಾಡಿಗೆ ಅವುಗಳ ಪ್ರಯೋಜನ ಸಿಗುತ್ತಿಲ್ಲ.
ಉಪ್ಪು ನೀರಿನ ಸಮಸ್ಯೆ ಗಂಭೀರವಾಗಿರುವುದರಿಂದ ಇಲ್ಲಿಗೆ ಶಾಶ್ವತ ಪರಿಹಾರ ಅಗತ್ಯವಾಗಿ ಬೇಕಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಹೆಮ್ಮಾಡಿಯನ್ನು ಸೇರಿಸಲಾಗಿತ್ತು. ಅನಂತರ ಇದರಿಂದ ಕೈ ಬಿಡಲಾಗಿದೆ. ಸದ್ಯ ಜಲಧಾರೆ ಎಂಬ ಹೊಸ ಯೋಜನೆ ಆರಂಭಿಸಲಾಗಿದ್ದು, ಇದರಿಂದಲಾದರೂ ಇಲ್ಲಿನ ಜನರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿ ಎನ್ನುವುದು ಗ್ರಾಮಸ್ಥರ ಆಶಯ. 170 ಮನೆಗಳಿಗೆ ಮಾತ್ರ ಸಂಪರ್ಕ
ಹೆಮ್ಮಾಡಿ ಗ್ರಾಮದಲ್ಲಿ ಸುಮಾರು 6,000ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರಿದ್ದಾರೆ. ಆ ಪೈಕಿ 1,000ಕ್ಕೂ ಮಿಕ್ಕಿ ಮನೆಗಳಿದ್ದು, ಗ್ರಾ. ಪಂ. ನಿಂದ 170 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಪಂ.ನಿಂದ 1 ಕೊಳವೆ ಹಾಗೂ ಸಂತೋಷ ನಗರದಲ್ಲಿ 1 ತೆರೆದ ಬಾವಿಯಿದೆ. ಬಾಕಿ ಉಳಿದ ಮನೆಗಳಲ್ಲಿ ಸ್ವಂತ ಬಾವಿ ಇದೆ. ಆದರೆ ಉಪ್ಪು ನೀರಿನ ಪ್ರಭಾವದಿಂದ ಸಮಸ್ಯೆಯಾಗಿದೆ.
Related Articles
ಕ್ಷೇತ್ರದ ಕೆಲವು ಗ್ರಾಮಗಳನ್ನು ಜಲಧಾರೆ ಯೋಜನೆಯಡಿ ನೀರಿನ ಸಮಸ್ಯೆ ಪರಿಹಾರಕ್ಕೆ ಆಯ್ಕೆ ಮಾಡಲಾಗಿದೆ. ಅದರಲ್ಲಿ ತಲ್ಲೂರು, ಹೆಮ್ಮಾಡಿಯನ್ನು ಕೂಡ ಸೇರಿಸಲಾಗಿದೆ. ಶೀಘ್ರ ಗ್ರಾ.ಪಂ. ಅಧಿಕಾರಿಗಳನ್ನು ಕರೆದು ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುವುದು. ಹಂತ-ಹಂತವಾಗಿ ಕ್ಷೇತ್ರದ ಎಲ್ಲ ಗ್ರಾ.ಪಂ.ಗಳ ನೀರಿನ ಸಮಸ್ಯೆ ಪರಿಹರಿಸಲಾಗುವುದು.
– ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು.
Advertisement
— ಪ್ರಶಾಂತ್ ಪಾದೆ