Advertisement

ಹೆಜಮಾಡಿ ಗ್ರಾಮ: ಕುಡಿಯುವ ನೀರಿಗೆ ತತ್ವಾರ

12:25 PM May 26, 2019 | Team Udayavani |

ಪಡುಬಿದ್ರಿ: ಶಾಂಭವಿ ನದಿಯು ಹೆಜಮಾಡಿ ಗ್ರಾಮದ ಸುತ್ತಲೂ ಹರಿಯುತ್ತಿದೆ. ಆದರೂ ಕುಡಿಯುವ ನೀರಿಗೆ ತತ್ವಾರ ತಪ್ಪಿಲ್ಲ.

Advertisement

ಇಲ್ಲಿನ ಕುದ್ರುಗಳಲ್ಲಿ ಬೇಸಿಗೆ ಬಂತಂದರೆ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಈ ಬಾರಿಯೂ ಪರಿಸ್ಥಿತಿ ಇನ್ನಷ್ಟು ಜಟಿಲವಾಗಿದೆ. ಗ್ರಾಮದಲ್ಲಿ ಮೂರು ದಿನಗಳಿಗೊಮ್ಮೆ ನಳ್ಳಿ ನೀರಿನ ಸರಬರಾಜು ಮಾಡಲಾಗುತ್ತಿದೆ.

ಶಾಶ್ವತ ಕುಡಿಯುವ ನೀರಿನ ಯೋಜನೆ ಬೇಕು
ನಡಿಕುದ್ರು, ಚೆನ್ನಯ ಕುದ್ರು, ಸ್ವಾಮಿಲ್‌ ಕುದ್ರು, ಮೇಸ್ತ ಕುದ್ರು ಹಾಗೂ ಕೊಕ್ರಾಣಿ ಕುದ್ರು ಪ್ರದೇಶಗಳಿವೆ. ಇಲ್ಲಿ ಭೂಮಿ ಸಮತಟ್ಟಾಗಿಲ್ಲದೆ ಕೆಲವೆಡೆ ಹೊಂಡಮಾಡಿ ನಳ್ಳಿ ಸಂಪರ್ಕ ಕಲ್ಪಿಸಲು ಭಗೀರಥ ಪ್ರಯತ್ನ ಗೈದರೂ ನೀರು ಸರಿಯಾಗಿ ಹರಿದು ಬರುತ್ತಿಲ್ಲ. ಈ ಕುದ್ರುಗಳಲ್ಲಿ ಸುಮಾರು 125 ಮನೆಗಳಿದ್ದು, ನಳ್ಳಿ ನೀರಿನ ಸಂಪರ್ಕವನ್ನು ಮಾಡಲಾಗಿದೆ. ಎರಡು ದಿನಕ್ಕೊಮ್ಮೆ ಅರ್ಧ ಗಂಟೆ ಕಾಲ ನಳ್ಳಿ ನೀರು ಪೂರೈಸಲಾಗುತ್ತಿದೆ.

ಈ ನೀರಿಲ್ಲದಿದ್ದರೆ ಇಲ್ಲಿನ ಜನರು ಕಿ.ಮೀ.ಗಟ್ಟಲೆ ತೆರಳಿ ನೀರು ತರಬೇಕು. ಈ ಭಾಗದ ಜನ ಹಾಗೂ ಜಾನುವಾರುಗಳಿಗೆ ನೀರಿಗಾಗಿ ಹಲವು ದಶಕಗಳಿಂದಲೂ ಕಷ್ಟ ಪಡುತ್ತಿದ್ದಾರೆ. ಆದರೆ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಈ ಕುದ್ರುಗಳ ಹೊರತಾಗಿ ಹೆಜಮಾಡಿ ಗ್ರಾ. ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ 5 ತೆರೆದ ಬಾವಿಗಳು ಹಾಗೂ 2 ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ.

Advertisement

ಕಳೆದ ಬಾರಿ ಎಪ್ರಿಲ್‌, ಮೇ ತಿಂಗಳಿನಲ್ಲಿ ಮಳೆಯಾದ ಪರಿಣಾಮ ಜನ ನೀರಿನ ಸಮಸ್ಯೆಯಿಂದ ಪಾರಾಗಿದ್ದರು. ಆದರೆ ಈ ಬಾರಿ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ಮಾರ್ಚ್‌ ತಿಂಗಳಿನಲ್ಲಿಯೇ ಇದ್ದ ಬಾವಿಗಳೂ ಉಪ್ಪು ನೀರಿನ ಸಮಸ್ಯೆಗೆ ತುತ್ತಾಗಿ ಕುಡಿಯುವ ನೀರಿಗಾಗಿ ಪರದಾಡಬೇಕಾದ ಸ್ಥಿತಿ ಉಂಟಾಯಿತು.

ನಡಿಕುದ್ರು ನಿವಾಸಿಗಳಿಗೆ ಟ್ಯಾಂಕರ್‌ ನೀರೇ ಗತಿ
ಮನೆಯಲ್ಲಿ ಬಾವಿ ಇಲ್ಲ. ಸ್ನಾನ ಹಾಗೂ ಬಟ್ಟೆ ಒಗೆಯಲು ನೀರಿಗಾಗಿ ಬಾವಿ ಹುಡುಕಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ವಾರಕ್ಕೆರಡು ಬಾರಿ ತಲಾ 1000 ಲೀಟರ್‌ ಟ್ಯಾಂಕ್‌ ನೀರನ್ನು 350 ರೂ. ಕೊಟ್ಟು ಟೆಂಪೋದಲ್ಲಿ ತಂದು ಪೈಪು ಅಳವಡಿಸಿ ಮನೆಗೆ ಸರಬರಾಜು ಮಾಡುತ್ತಿದ್ದೇವೆ ಎಂದು ನಡಿಕುದ್ರು ನಿವಾಸಿ ಗೋಪಾಲ ಕುಕ್ಯಾನ್‌ ಹೇಳುತ್ತಾರೆ.

ನೀರು ಸಾಗಾಟಕ್ಕೆ ತಡೆ
ಗ್ರಾಮದ ಖಾಸಗಿ ಬಾವಿಯೊಂದರಿಂದ ನೀರನ್ನು ಟ್ಯಾಂಕರ್‌ ಮೂಲಕ ಮೂಲ್ಕಿ ಕಡೆಗೆ ಸಾಗಿಸುತ್ತಿರುವುದರಿಂದ ಪಂಚಾಯಿತ್‌ ಬಾವಿಯ ಅಂತರ್ಜಲ ಕುಸಿದು ನೀರು ಪೂರೈಸಲು ಅಡಚಣೆ ಉಂಟಾಗಿತ್ತು. ಈಗ ಖಾಸಗಿ ಬಾವಿಯ ನೀರನ್ನು ಸರಬರಾಜು ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿನ ನೀರನ್ನು ಕೊಕ್ರಾಣಿ ಪ್ರದೇಶಕ್ಕೆ ಉಚಿತವಾಗಿ ಸರಬರಾಜು ಮಾಡಲಾಗುತ್ತಿದೆ. ನೀರಿನ ಬೇಡಿಕೆ ಇರುವ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಗಾಗಿ ಈಗಾಗಲೇ ಟೆಂಡರ್‌ ಆಹ್ವಾನಿಸಲಾಗಿದೆ.
-ಮಮತಾ ವೈ, ಪಿಡಿಓ, ಹೆಜಮಾಡಿ

Advertisement

Udayavani is now on Telegram. Click here to join our channel and stay updated with the latest news.

Next