ಗುಂಡ್ಲುಪೇಟೆ: ಪಟ್ಟಣದ 1, 2, 3ನೇ ವಾಡ್‌ಗೆ ವಾರದಿಂದ ಕುಡಿಯುವ ನೀರು ಪೂರೈಕೆಯಾಗದ ಕಾರಣ ಹಾಹಾಕಾರ ಉಂಟಾಗಿದೆ. ಇದರಿಂದ ನಾಗರಿಕರು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದ 1ನೇ ವಾರ್ಡ್(ಎಚ್.ಎಸ್. ಮಹದೇವಪ್ರಸಾದ್ ನಗರ) ಹಾಗೂ 2ನೇ ವಾರ್ಡ್(ಜಾಕೀರ್ ಹುಸೇನ್ ನಗರ-ಬೀಡಿ ಕಾಲೋನಿ)ಗೆ ಕಬಿನಿ ನೀರು ಸಮರ್ಪಕವಾಗಿ ಪೂರೈಕೆಯಾಗದ ಕಾರಣ ಹಾಗೂ ವಾಟರ್ ಮ್ಯಾನ್ ರಜೆಯಲ್ಲಿ ತೆರಳಿರುವುದರಿಂದ ಪುರಸಭೆ ಎಂಜಿನಿಯರ್ ನೀರು ಪೂರೈಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಜೊತೆಗೆ ವಾರದಿಂದ 3ನೇ ವಾರ್ಡ್(ಜಾಕೀರ್ ಹುಸೇನ್ ನಗರ)ನ ಮೋಟರ್ ಸುಟ್ಟು ಹೋಗಿ ದುರಸ್ತಿಗೆ ಪುರಸಭೆ ಮುಂದಾಗದ ಹಿನ್ನೆಲೆ ಜನರು ಕುಡಿಯುವ ನೀರಿಗೆ ಪರದಾಡುವಂತಾಗಿದೆ.
ಮನವಿಗೆ ಸ್ಪಂದಿಸದ ಪುರಸಭೆ: ವಾರ್ಡ್‌ಗಳಿಗೆ ನೀರು ಪೂರೈಕೆಯಾಗಿ ವಾರ ಕಳೆದಿರುವ ಕಾರಣ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿನ ರೀತಿಯಲ್ಲಿ ತಲೆದೋರಿದೆ. ಈ ಬಗ್ಗೆ ಹಲವು ಬಾರಿ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರ ಗಮನಕ್ಕೆ ನಿವಾಸಿಗಳು ತಂದರೂ ಮುಖ್ಯಾಧಿಕಾರಿಗಳು, ಎಂಜಿನಿಯರ್ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಇದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹಣ ನೀಡಿ ಟ್ಯಾಂಕರ್ ಮೂಲಕ ನೀರು ಖರೀದಿ: ವಾರದಿಂದ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆ ವಾರ್ಡ್ ನಿವಾಸಿಗರು ಹಣ ಕೊಟ್ಟು ಖಾಸಗಿಯಾಗಿ ಟ್ಯಾಂಕರ್ ಹಾಗೂ ಆಟೋಗಳ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ಈ ನೀರು ಕೂಡ ಒಂದು ಅಥವಾ ಎರಡು ದಿನದಲ್ಲಿ ಖಾಲಿಯಾಗುತ್ತಿರುವ ಕಾರಣ ಸ್ನಾನ, ಬಟ್ಟೆ ಹೊಗೆಯುವುದಕ್ಕೆ ಸಮಸ್ಯೆಯಾಗುತ್ತಿದೆ. ಈ ಮಧ್ಯೆ ನೀರಿಗಾಗಿ ಬಡವರ ಪಾಡಂತೂ ಹೇಳ ತೀರದಾಗಿದೆ. ಮೋಟರ್ ದುರಸ್ತಿ ಯಾವಾಗ?: 3ನೇ ವಾರ್ಡ್(ಜಾಕೀರ್ ಹುಸೇನ್ ನಗರ)ನಲ್ಲಿ ಮೋಟರ್ ಸುಟ್ಟು ಹೋಗಿ ವಾರ ಕಳೆದರೂ ದುರಸ್ತಿ ಆಗಿಲ್ಲದ ಕಾರಣ ನಿವಾಸಿಗರು ಪುರಸಭೆ ಆಡಳಿತಕ್ಕೆ ಶಾಪ ಹಾಕುತ್ತಿದ್ದಾರೆ. ಯಾವಾಗ ಮೋಟರ್‌ಪಂಪ್ ದುರಸ್ತಿ ಮಾಡಿಸಿ ನೀರು ಪೂರೈಕೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಕೂಡಲೇ ದುರಸ್ತಿ ಮಾಡದಿದ್ದರೆ ಪುರಸಭೆ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸದಸ್ಯರ ಮಾತಿಗೂ ಕಿಮ್ಮತ್ತಿಲ್ಲ: ವಾರ್ಡ್ಗಳಲ್ಲಿ ನೀರಿಗೆ ಹಾಹಾಕಾರ ಎದ್ದಿರುವ ಕಾರಣ, ಬಗೆಹರಿಸುವಂತೆ ಪುರಸಭೆ ಮುಖ್ಯಾಧಿಕಾರಿ, ಎಂಜಿನಿಯರ್ ಗಮನಕ್ಕೆ ಆಯ ವಾರ್ಡ್ ಸದಸ್ಯರು ತಂದರೂ ನಿಗದಿತ ಕಾಲಾವಧಿಯೊಳಗೆ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಇದರಿಂದ ವಾರ್ಡ್ ಸದಸ್ಯರ ಮಾತಿಗೂ ಸಹ ಕಿಮ್ಮತ್ತಿಲ್ಲ ಎಂಬಂತಾಗಿದೆ ಎಂದು 2ನೇ ವಾರ್ಡ್ ಪುರಸಭೆ ಸದಸ್ಯ ಎಚ್.ಆರ್.ರಾಜಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರ ಗಮನಕ್ಕೆ ಬಂದಿಲ್ಲವೇ?:
ಗುಂಡ್ಲುಪೇಟೆ: ಪಟ್ಟಣದ 1, 2, 3ನೇ ವಾರ್ಡ್‌ಗೆ ವಾರದಿಂದ ನೀರು ಪೂರೈಕೆ ಆಗದೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವ ವಿಚಾರ ಸ್ಥಳೀಯ ಶಾಸಕ ಎಚ್.ಎಂ. ಗಣೇಶಪ್ರಸಾದ್ ಗಮನಕ್ಕಿಲ್ಲವೇ ಎಂದು ನಿವಾಸಿಗರು ಪ್ರಶ್ನಿಸಿದ್ದಾರೆ. ಈ ಹಿಂದೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಅಧಿಕಾರಿಗಳ ಸಭೆಯಲ್ಲಿ ವಾರ್ಡ್‌ಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದ್ದರು. ಹೀಗಿದ್ದರೂ ವಾರದಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯ ವಹಿಸಲಾಗಿದೆ.
ಕಬಿನಿ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾದ ಕಾರಣ 1, 2, 3ನೇ ವಾರ್ಡ್‌ಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕೂಡಲೇ ಸಮಸ್ಯೆ ಬಗೆಹರಿಸಿ ನೀರು ಪೂರೈಕೆ ಮಾಡಲಾಗುವುದು. ಜೊತೆಗೆ 3ನೇ ವಾರ್ಡ್‌ನಲ್ಲಿ ಕೆಟ್ಟು ನಿಂತಿರುವ ಮೋಟರ್‌ಪಂಪ್ ದುರಸ್ತಿಪಡಿಸಲಾಗುವುದು. ಇಲ್ಲದಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ.
● ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ
– ಬಸವರಾಜು ಎಸ್.ಹಂಗಳೆ