Advertisement

ಸರ್ಕಾರಿ ಕಚೇರಿಗಳಲ್ಲಿಲ್ಲ ಕುಡಿವ ನೀರಿನ ವ್ಯವಸ್ಥೆ

04:52 PM Apr 04, 2022 | Team Udayavani |

ಸಿರುಗುಪ್ಪ: ನಗರ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ಕುಡಿಯುವ ನೀರಿನ ಅರವಟಿಕೆ ಸ್ಥಾಪಿಸಿ ಜನರ ಕುಡಿಯುವ ನೀರಿನ ದಾಹ ನೀಗಿಸುವ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು, ಬಿರು ಬೇಸಿಗೆ ಇದ್ದರೂ ನಗರದ ಪ್ರಮುಖ ಸ್ಥಳಗಳಲ್ಲಿ ಕುಡಿಯುವ ನೀರಿನ ಅರವಟಿಕೆಗಳು ಕಂಡು ಬರುತ್ತಿಲ್ಲ. ದೊಡ್ಡ ಗಡಿಗೆಯಲ್ಲಿ ರಾತ್ರಿವೇಳೆ ಇಲ್ಲವೆ ಬೆಳಗಿನ ಜಾವದಲ್ಲಿ ನೀರು ಹಾಕಿದರೆ ಮಧ್ಯಾಹ್ನಕ್ಕೆಲ್ಲ ತಂಪಾದ ನೀರು ಕುಡಿಯಲು ದೊರೆಯುತ್ತಿತ್ತು.

Advertisement

ಈಗ ಅರವಟಿಕೆಗಳು ಕೇವಲ ಬೆರಳೆಣಿಕೆಯಷ್ಟು ಸ್ಥಾಪನೆಯಾಗಿದ್ದು, ಸಾರ್ವಜನಿಕರು ಹಣಕೊಟ್ಟು ನೀರು ಖರೀದಿಸುವ ಪರಿಸ್ಥಿತಿ ಉಂಟಾಗಿದೆ. ಅಧಿಕಾರಿಗಳು, ಶಾಸಕರು, ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಜನನಿಬೀಡ  ಪ್ರದೇಶಗಳಲ್ಲಿ ನೀರಿನ ಅರವಟಿಗೆ ಸ್ಥಾಪನೆ ಮಾಡಲು ಮುಂದಾಗಬೇಕಾಗಿದೆ.

ನಗರಕ್ಕೆ ವಿವಿಧ ಕೆಲಸ ಕಾರ್ಯಗಳಿಗಾಗಿ ಗ್ರಾಮೀಣ ಪ್ರದೇಶದಿಂದ ಬರುವ ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಕಚೇರಿಗಳಿಗೆ ಭೇಟಿ ನೀಡುವುದು ಸಾಮಾನ್ಯ. ಆದರೆ ಕನಿಷ್ಟ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ ಎಂಬುದು ಸಾರ್ವಜನಿಕರ ಆರೋಪ. ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ನಗರಸಭೆ, ತಾಲೂಕಿನ ಪ್ರತಿ ಗ್ರಾಮಕ್ಕೆ ನೀರು ಪೂರೈಕೆ ಮಾಡುವ
ಗ್ರಾಮೀಣ ಕುಡಿಯುವ ನೀರು ಇಲಾಖೆಯಲ್ಲಿಯೂ ಸಿಬ್ಬಂದಿಗಾಗಿ ಶುದ್ಧ ಕುಡಿಯುವ ನೀರಿನ ಕ್ಯಾನ್‌ ತೆಗೆದುಕೊಳ್ಳುತ್ತಾರೆ. ಆದರೆ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ.

ಇದನ್ನೂ ಓದಿ : ಹರಕ ಮಳಿ, ಮುರುಕ ಹಪ್ಪಳ.! ನಾಕೂ ಲೋಕ ಅದ್ಲ-ಬದ್ಲ ಖಾತ್ರಿ!; ಕಾಲಜ್ಞಾನ ನುಡಿದ ಶಿವಯ್ಯ ಮುತ್ಯಾ

ತಹಶೀಲ್ದಾರ್‌ ಕಚೇರಿ, ಲೋಕೋಪಯೋಗಿ ಇಲಾಖೆ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಉಪವಿಭಾಗ ಕಚೇರಿ, ಸಹಾಯಕ ಕೃಷಿ ನಿರ್ದೇಶಕರು ಕಚೇರಿ, ಸಿಡಿಪಿಒ ಕಚೇರಿ ಮುಂತಾದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಬಸ್‌ನಿಲ್ದಾಣದಲ್ಲಿ ಕುಡಿಯುವ ನೀರಿನ ಘಟಕದ ವ್ಯವಸ್ಥೆಯೇ ಇಲ್ಲ, ಇದರಿಂದಾಗಿ ಪ್ರಯಾಣಿಕರು ಹಣಕೊಟ್ಟು ಬಾಟಲಿ ನೀರು ಖರೀದಿಸಬೇಕಾಗಿದೆ. ಒಟ್ಟಾರೆ ನಗರಕ್ಕೆ ಬರುವ ಗ್ರಾಮಾಂತರ ಪ್ರದೇಶದ ಜನರು ಹಣಕೊಟ್ಟು ಬಾಟಲಿ ನೀರನ್ನು ಕುಡಿಯುವುದು ಅನಿವಾರ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next