Advertisement

ಹೆಮ್ಮಾಡಿ: ಅರ್ಧ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ

10:44 PM Feb 10, 2021 | Team Udayavani |

ಹೆಮ್ಮಾಡಿ: ಬೇಸಗೆಗೂ ಮೊದಲೇ ಹೆಮ್ಮಾಡಿ ಗ್ರಾಮದ ಸುಮಾರು ಅರ್ಧದಷ್ಟು ಮನೆಗಳು ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿನ 900 ಮನೆಗಳ ಪೈಕಿ ಸುಮಾರು 400 ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿಗೆ ತತ್ತ್ವಾರ ಉಂಟಾಗಿದೆ. ಆದಷ್ಟು ಬೇಗ ಟ್ಯಾಂಕರ್‌ ನೀರು ಪೂರೈಕೆ ಆರಂಭಿಸಬೇಕು ಎನ್ನುವ ಬೇಡಿಗೆ ಗ್ರಾಮಸ್ಥರಿಂದ ವ್ಯಕ್ತವಾಗಿದೆ.

Advertisement

ಮಾರ್ಚ್‌ – ಎಪ್ರಿಲ್‌ನಲ್ಲಿ ಉಂಟಾಗುವ ನೀರಿನ ಸಮಸ್ಯೆ ಹೆಮ್ಮಾಡಿ ಗ್ರಾಮದಲ್ಲಿ ಈಗಿನಿಂದಲೇ ತಲೆದೋರಿದೆ. ಇಲ್ಲಿರುವ ಬಾವಿಗಳಲ್ಲಿ ಉಪ್ಪು ನೀರಿನ ಸಮಸ್ಯೆಯಿದ್ದು, ಆ ನೀರು ಕುಡಿಯಲು ಅಸಾಧ್ಯವಾಗಿದ್ದು, ಪಂಚಾಯತ್‌ನಿಂದ ಕೊಡುತ್ತಿರುವ ನೀರು ಸಾಲದಾಗಿದೆ.

ಎಲ್ಲೆಲ್ಲ ಸಮಸ್ಯೆ
ಹೆಮ್ಮಾಡಿ ಗ್ರಾಮದ ಕನ್ನಡಕುದ್ರು, ಮೂವತ್ತುಮುಡಿ, ಸಂತೋಷನಗರ, ಬುಗುರಿಕಡು, ದೇವಸ್ಥಾನದ ವಠಾರ, ಕಟ್ಟು, ಕೆಳಮನೆ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಇಲ್ಲಿರುವ ಬಹುತೇಕ ಬಾವಿಗಳಲ್ಲಿ ನೀರು ತೀರಾ ತಳ ಮಟ್ಟಕ್ಕೆ ಇಳಿದಿದ್ದು, ಅದಕ್ಕೆ ಉಪ್ಪಿನ ಪ್ರಭಾವ ಇರುವುದರಿಂದ ಬಳಕೆಗೆ ಕಷ್ಟ.

3 ದಿನಗಳಿಗೊಮ್ಮೆ ನೀರು
ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 920 ಮನೆಗಳಿದ್ದು, ಪ್ರತಿ ಮನೆಗಳಿಗೆ ಮೂರು ದಿನಗಳಿ ಗೊಮ್ಮೆ ಪಂಚಾಯತ್‌ನಿಂದ ನಳ್ಳಿ ನೀರು ಕೊಡಲಾಗುತ್ತಿದೆ. ಕೇವಲ ಒಂದು ಬೋರ್‌ವೆಲ್‌ ಹಾಗೂ ಒಂದು ತೆರೆದ ಬಾವಿ ಮಾತ್ರ ಈಗ ಪಂಚಾಯತ್‌ನ ನೀರಿನ ಮೂಲಗಳಾಗಿವೆ. ಬೋರ್‌ವೆಲ್‌ನಲ್ಲಿ ಸದ್ಯಕ್ಕೆ ತೊಂದರೆಯಿಲ್ಲ. ಆದರೆ ಬಾವಿಯಲ್ಲಿ ಮಾತ್ರ 2-3 ದಿನಗಳಿ ಗೊಮ್ಮೆ ನೀರು ಸಿಗುತ್ತಿದೆ.

ಕಳೆದ ವರ್ಷ ಹೆಮ್ಮಾಡಿ ಜನತಾ ಪ್ರೌಢಶಾಲೆ ಸಮೀಪ ಬೋರ್‌ವೆಲ್‌ ತೋಡಲಾಗಿದ್ದು, ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಬಾರಿ ಅದೇ ಬೋರ್‌ವೆಲ್‌ ಅನ್ನು ಮತ್ತೆ ಸ್ವಲ್ಪ ಆಳದವರೆಗೆ ತೋಡಲಾಗಿದ್ದು, ಎರಡು ವಾರ ನೀರು ಸಿಕ್ಕಿತ್ತು. ಈಗ ಮತ್ತೆ ಉಪ್ಪು ನೀರು ಸಿಗುತ್ತಿದೆ.

Advertisement

ನೀರಾವರಿಗೆ ಯೋಜನೆಗೆ ಆಗ್ರಹ
ಹೆಮ್ಮಾಡಿ ಗ್ರಾ.ಪಂ.ನ ಬಹುಭಾಗ ಕಡಲ ತೀರ ಪ್ರದೇಶವಾಗಿರುವುದರಿಂದ ಹೆಚ್ಚಿನ ಕಡೆಗಳಲ್ಲಿ ಉಪ್ಪು ನೀರಿನ ಸಮಸ್ಯೆಯಿದೆ. ಹಾಗಾಗಿ ಬಾವಿ ತೋಡಿದರೂ, ಬೋರ್‌ವೆಲ್‌ ತೋಡಿದರೂ ಉಪ್ಪು ನೀರೇ ಸಿಗುತ್ತಿದೆ. ಇದಕ್ಕಾಗಿ ಪಂಚಾಯತ್‌ ಕಳೆದ ಹಲವು ವರ್ಷಗಳಿಂದ ಕುಂದಾಪುರ ಪುರಸಭೆ ಬಳಿ ಕುಡಿಯುವ ನೀರು ಪೂರೈಕೆಗೆ ಬೇಡಿಕೆಯಿಡುತ್ತಿದೆ. ಇದಲ್ಲದೆ ಸೌಕೂರು ಏತ ನೀರಾವರಿ ಯೋಜನೆಯಲ್ಲಾದರೂ ಸೇರಿಸಿ ಎನ್ನುವ ಬೇಡಿಕೆ ಇದ್ದರೂ, ಹೆಮ್ಮಾಡಿಯನ್ನು ಯಾವುದೇ ನೀರಾವರಿ ಯೋಜನೆಯಲ್ಲಿ ಸೇರಿಸದೆ ಇರುವುದರಿಂದ ಈ ಬಾರಿಯೂ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿ ಪರಿಣಮಿಸಲಿದೆ.
ಜಲಜೀವನ್‌ ಅಥವಾ ಬೇರೆ ಯಾವುದಾದರೂ ನೀರಾವರಿ ಯೋಜನೆಯಡಿ ಈ ಗ್ರಾಮವನ್ನು ಪರಿಗಣಿಸಬೇಕು ಎನ್ನುವ ಬೇಡಿಕೆ ಜನರದ್ದಾಗಿದೆ.

ಬಾವಿಗಳ ನೀರು ಉಪ್ಪು
ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಬಹುತೇಕ ಬಾವಿಗಳ ನೀರು ಉಪ್ಪಾಗಿದೆ. ಒಟ್ಟು ಇರುವ 920 ಮನೆಗಳ ಪೈಕಿ ಪ್ರಸ್ತುತ 400ಕ್ಕೂ ಮಿಕ್ಕಿ ಮನೆಗಳಿಗೆ ನೀರಿನ ಸಮಸ್ಯೆ ಉಂಟಾಗುತ್ತಿದೆ.

ಪ್ರಸ್ತಾವ ಸಲ್ಲಿಕೆ
ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಚ್ಚಿನೆಡೆ ಉಪ್ಪು ನೀರಿನ ಸಮಸ್ಯೆಯಿದೆ. ಅದಕ್ಕಾಗಿ ಪುರಸಭೆ ಅಥವಾ ಸೌಕೂರು ಏತ ನೀರಾವರಿಯಲ್ಲಿ ಈ ಪಂಚಾ ಯತ್‌ ಅನ್ನು ಸೇರಿಸಲು ಈ ಹಿಂದೆಯೇ ಪ್ರಸ್ತಾವ ಸಲ್ಲಿಸಲಾಗಿತ್ತು. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಟ್ಯಾಂಕರ್‌ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು.
– ಮಂಜು ಬಿಲ್ಲವ, ಹೆಮ್ಮಾಡಿ ಗ್ರಾ.ಪಂ. ಪಿಡಿಒ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next