Advertisement

ಗುಲ್ವಾಡಿ: ಕುಡಿಯುವ ನೀರಲ್ಲೂ ತಾರತಮ್ಯ ಮಾಡ್ತಾರೆ!

10:23 PM May 03, 2019 | Sriram |

ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಯ ಉದಯನಗರ, ದುರ್ಗಾನಗರ, ಗುಡ್ಡಿಮನೆ ಮೊದಲಾದೆಡೆ ನೀರಿನ ಸಮಸ್ಯೆ ತೀವ್ರವಾಗಿದೆ. ಕೆಲವೆಡೆ ಬಾವಿಗಳಿದ್ದರೂ ನೀರೆತ್ತಲಾಗುತ್ತಿಲ್ಲ. ಶುಚಿಗೊಳಿಸಿಲ್ಲ.

Advertisement

ಕುಂದಾಪುರ: ನೋಡಿ ನಮ್ಮದೇ ವಠಾರ. ಕೆಲವು ಮನೆಗಳಿಗೆ ನಿತ್ಯ ನೀರು. ನಮಗೆ ಎರಡು ದಿನಕ್ಕೊಮ್ಮೆ. ನಾವೇನು ಪಾಪ ಮಾಡಿದ್ದೇವೆ? ಮನೆಯಲ್ಲಿ ಇಷ್ಟೊಂದು ಮಂದಿ ಇರುವಾಗ ಎರಡು ದಿನಕ್ಕೊಮ್ಮೆ ನೀರು ಕೊಟ್ಟರೆ ಸಾಲುತ್ತದೆಯೇ? ಇಂತಹ ತಾರತಮ್ಯ ಯಾಕೆ ಎಂದು ಕೇಳಿದರು ಉದಯನಗರ ನಿವಾಸಿಗಳು.

ಗುಲ್ವಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವ ಉದಯನಗರ, ಗುಡ್ಡಿಮನೆ, ದುರ್ಗಾನಗರ ಮೊದಲಾದೆಡೆಗೆ ಉದಯವಾಣಿ ತಂಡ ಭೇಟಿ ನೀಡಿದಾಗ ಅಲ್ಲಿನ ಜನ ಸಮಸ್ಯೆ ಬಿಚ್ಚಿಟ್ಟರು.

ಉಪವಾಸ ಬಂತು
ಉದಯನಗರದಲ್ಲಿ ಸುಮಾರು 36ರಷ್ಟು ಮನೆಗಳಿವೆ. ನಳ್ಳಿಯಲ್ಲಿ ನೀರು ಬಂದು 8 ದಿನಗಳೇ ಕಳೆದವು. ಟ್ಯಾಂಕರ್‌ ಎರಡು ಬಾರಿಯಷ್ಟೇ ಬಂದಿದೆ. ಅದೂ ಇರಲಿಲ್ಲ. ನಾವು ಖಾಲಿ ಕೊಡ ಹಿಡಿದು ಪ್ರತಿಭಟನೆಗೆ ಮುಂದಾದಾಗ ಎರಡು ದಿನಕ್ಕೊಮ್ಮೆಯಂತೆ ನೀರು ಎಂಬ ಷರತ್ತಿನಲ್ಲಿ ನೀರು ನೀಡಲಾಗುತ್ತಿದೆ. ಮೇ 6ರಿಂದ ರಮ್ಜಾನ್‌ ಉಪವಾಸ ಆರಂಭವಾಗುತ್ತದೆ. ಮತ್ತೆ ಕಷ್ಟ ಹೇಳತೀ

ರದು ಎನ್ನುತ್ತಾರೆ ಅಬ್ದುಲ್‌ ಮುನೀರ್‌ ಅವರ ಮನೆಯ ಮಹಿಳೆಯರು. ಕೆಲವು ಮನೆಗಳಲ್ಲಿ ನಾವು 8-10 ಜನರಿದ್ದೇವೆ. ಮನೆ ಹೆಣ್ಣು ಮಕ್ಕಳು ಮದುವೆಯಾಗಿ ಬೇರೆ ಕಡೆ ಇದ್ದಾರೆ. ಬೇಸಗೆ ರಜೆಯಲ್ಲಿ ಅವರು, ಮೊಮ್ಮಕ್ಕಳು ಊರಿಗೆ ಬಂದರೆ ನೀರಿಲ್ಲ. ಬರಬೇಡಿ ಎನ್ನುವಂತೆಯೂ ಇಲ್ಲ. ಬಂದರೆ ಸತ್ಕರಿಸುವಂತೆಯೂ ಇಲ್ಲ. ಕುಡಿಯಲು ನೀರು ಕೊಡದ ಸ್ಥಿತಿ ಇದೆ ಎನ್ನುತ್ತಾರೆ ಕೆ. ಮಹಮ್ಮದ್‌ ಅವರ ಮನೆಯವರು. ತುಂಬ ದೂರದಿಂದ ನೀರು ಹೊತ್ತು ತರಬೇಕು. ರಮ್ಜಾನ್‌ ಆರಂಭವಾದ ಬಳಿಕ ಬಿಸಿಲಿನಲ್ಲಿ ನೀರು ಹೊತ್ತು ತರಲು ಶಕ್ತಿ ಇರುವುದಿಲ್ಲ. ನಳ್ಳಿ ನೀರಂತೂ ಇಲ್ಲವೇ ಇಲ್ಲ. ಟ್ಯಾಂಕರ್‌ ನೀರು ಕೂಡಾ ಖೋತಾ ಆದರೆ ನಮ್ಮ ಕಷ್ಟ ನಿವಾರಣೆ ಹೇಗೆ. ಅದಕ್ಕಿಂತ ಮೊದಲು ದೊಡ್ಡದಾಗಿ ಮಳೆ ಬರಲಿ ದೇವರೇ ಎಂದು ಪ್ರಾರ್ಥಿಸುತ್ತಿದ್ದೇವೆ ಎನ್ನುತ್ತಾರೆ ಅವರ ಪಕ್ಕದ ಮನೆಯವರು.

Advertisement

ಬಾವಿ ಇದೆ ನೀರಿಲ್ಲ
ಪಕ್ಕದಲ್ಲೇ ಬಾವಿ ಇದೆ. ನೀರು ಶುಚಿಯಿಲ್ಲ. ಅದನ್ನು ಶುಚಿಗೊಳಿಸಿದರೂ ಸ್ವಲ್ಪಮಟ್ಟಿಗೆ ಕುಡಿಯಲಾದರೂ ನೀರು ದೊರೆತೀತು. ಇನ್ನೊಂದು ಬಾವಿ ಬೇಬಿ ಅವರ ಮನೆ ಸಮೀಪ ಇದೆ. ಅದರ ಆಳ 65 ಅಡಿಗಳಷ್ಟು. ನೀರೆಳೆಯಲು ಸಾಧ್ಯವೇ ಇಲ್ಲ ಎಂಬಷ್ಟಿದೆ. ಇದನ್ನು ಊರವರೇ ಶುಚಿಗೊಳಿಸಲು ನಿರ್ಧರಿಸಿ ಜನ ಇಳಿಸಿದರು. ಅಲ್ಲಿ ಉಸಿರುಗಟ್ಟಿ ಅವರನ್ನು ಮೇಲೆತ್ತಬೇಕಾದರೆ ಹರೋಹರ ಎಂದಾಗಿದೆ ಎನ್ನುತ್ತಾರೆ. ಗುಲ್ವಾಡಿ ಹೊಳೆ ಸಮೀಪ ಪಂಚಾಯತ್‌ ಒಂದು ಬಾವಿ ನಿರ್ಮಿಸಿದೆ. ಇಲ್ಲಿವರೆಗೆ ಪೈಪ್‌ಲೈನ್‌ ಹಾಕಿದರೂ ಯಾರಧ್ದೋ ಆಕ್ಷೇಪ ಇದೆ ಎಂದು ನೀರು ಕೊಡುತ್ತಿಲ್ಲ. ಆ ನೀರು ಕೊಟ್ಟರೂ ಸಾಕಾಗುತ್ತಿತ್ತು ಎನ್ನುತ್ತಾರೆ ಇಲ್ಲಿನವರು.

ಪ್ರತಿದಿನ ಇದೆ
ಉದಯನಗರದ ಶಾರದಾ, ಅಮೃತಾ ಅವರು ಹೇಳುವಂತೆ ಟ್ಯಾಂಕರ್‌ ನೀರು ಪ್ರತಿದಿನ ಬರುತ್ತಿದೆ. ಸಾಲುತ್ತಿಲ್ಲ. ಕೊಡುವ ನೀರಿನ ಪ್ರಮಾಣ ಹೆಚ್ಚಿಸಿದರೆ ಒಳ್ಳೆಯದು. ಅದಕ್ಕಿಂತ ಹೆಚ್ಚಾಗಿ ಟ್ಯಾಂಕರ್‌ ಬರುವ ಸಮಯ ನಿಗದಿಯಾಗದಿರುವುದು ಎನ್ನುತ್ತಾರೆ.

ಕೆಲಸ ಬಿಟ್ಟು ಕೂರಬೇಕು
ಬೊಳ್ಕಟೆ, ದುರ್ಗಾನಗರದ ಗೌರಿ ಅವರು ಕೂಡಾ ಟ್ಯಾಂಕರ್‌ ಸಮಯದ ಕುರಿತೇ ಆಕ್ಷೇಪ ಎತ್ತುತ್ತಾರೆ. ಒಂದೊಂದು ದಿನ ಒಂದೊಂದು ಸಮಯದಲ್ಲಿ ಟ್ಯಾಂಕರ್‌ ಬಂದರೆ ಅದನ್ನು ಕಾಯುತ್ತಾ ಕೂರೋದೇ ಆಗುತ್ತದೆ. ಮನೆಮಂದಿಯೆಲ್ಲ ಕೆಲಸಕ್ಕೆ ಹೋದಾಗ ಟ್ಯಾಂಕರ್‌ ಬಂದರೆ ನೀರಿಲ್ಲ ಎಂದಾಗುತ್ತದೆ. ಅದಕ್ಕಾಗಿ ಕೆಲಸಬಿಟ್ಟು ಕೂರುವ ಸ್ಥಿತಿ ಬಂದಿದೆ. ನಳ್ಳಿ ನೀರು ಬರದೇ ಮೂರು ತಿಂಗಳಾಯಿತು. ಪ್ರತಿ ವರ್ಷ ನೀರಿನ ಸಮಸ್ಯೆ ಇದೆ. ಆದರೆ ಈ ವರ್ಷ ಅದು ಹೆಚ್ಚಾಗಿದೆ ಎನ್ನುತ್ತಾರೆ.

ನಳ್ಳಿ ಇರುವಲ್ಲೇ ನೀರಿಲ್ಲ
4,836 ಜನಸಂಖ್ಯೆಯ ಗುಲ್ವಾಡಿ ಪಂಚಾಯತ್‌ ವ್ಯಾಪ್ತಿಯಲ್ಲಿ ನಳ್ಳಿ ನೀರಿನ ಸಂಪರ್ಕ ಇರುವುದೇ ಅಬ್ಬಿಗುಡ್ಡೆ, ಉದಯನಗರ, ಮಾವಿನಕಟ್ಟೆ ಪರಿಸರದಲ್ಲಿ. ಇಲ್ಲೇ ನೀರಿನ ಸಮಸ್ಯೆ ಉಂಟಾಗಿದೆ. ಸ್ಥಳೀಯ ಬಾವಿ, ಲಭ್ಯ ಸಂಪನ್ಮೂಲ ಬಳಸಿ ನೀರು ಕೊಡುತ್ತಿರುವ ಪಂಚಾಯತ್‌ಗೆ ಪ್ರತಿ ವರ್ಷ ನೀರಿನ ಬರ ಎದುರಿಸುವುದು ಸವಾಲಾಗಿದೆ.

ಜನರ ಆಗ್ರಹ
– ಟ್ಯಾಂಕರ್‌ ನೀರಿಗೆ ಸಮಯ ನಿಗದಿ ಮಾಡಬೇಕು.
– ನೀರಿನ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಬೇಕು.
– ನೀರು ವಿತರಣೆಯಲ್ಲಿ ತಾರತಮ್ಯ ಮಾಡಬಾರದು.

40 ಸಾವಿರ ಲೀ.
ಪ್ರತಿದಿನ 200 ಮನೆಗಳಿಗೆ 40 ಸಾವಿರ ಲೀ. ನೀರನ್ನು 2 ಟ್ಯಾಂಕರ್‌ಗಳಲ್ಲಿ ನೀಡಲಾಗುತ್ತಿದೆ. ಇರುವ ನೀರನ್ನು ವಿತರಿಸಲಾಗುತ್ತಿದ್ದು ಮೇ 1ರಿಂದ ಹೆಚ್ಚಿನ ಪ್ರಮಾಣದ ನೀರು ವಿತರಿಸಲು ಕ್ರಮ ವಹಿಸಲಾಗಿದೆ. ಎಲ್ಲೂ ತಾರತಮ್ಯ ಮಾಡಿಲ್ಲ. ನಳ್ಳಿ ನೀರು ಹಾಗೂ ಟ್ಯಾಂಕರ್‌ ನೀರು ಹೊಂದಾಣಿಕೆ ಮಾಡಿ ಕೊಡಲಾಗುತ್ತಿದೆ.
-ವನಿತಾ ಶೆಟ್ಟಿ,ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಗುಲ್ವಾಡಿ

ಬಾವಿ ಶುಚಿಗೊಳಿಸಲಿ
ಇಲ್ಲೇ ಸನಿಹ ಸರಕಾರಿ ಬಾವಿ ಇದೆ. ಅದನ್ನು ಶುಚಿಗೊಳಿಸಿದರೂ ನೀರು ಸ್ವಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ಕೊಳವೆಬಾವಿ ನಿರುಪಯುಕ್ತವಾಗಿದೆ.
-ಕೆ. ಮಹಮ್ಮದ್‌, ಉದಯನಗರ

ಉದಯವಾಣಿ ಆಗ್ರಹ
ಅನುಕೂಲವಾಗುವ ಹೊತ್ತಲ್ಲಿ ಕೂಡಲೇ ಟ್ಯಾಂಕರ್‌ ನೀರು ಪೂರೈಸಬೇಕು. ನೀರು ಕಡಿಮೆಯಾದಲ್ಲಿ ಹೆಚ್ಚಿನ ನೀರು ಪೂರೈಕೆ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮುಂದಾಗುವುದು.

ಮಾಹಿತಿ ನೀಡಿ
ನೀರಿನ ತೀವ್ರ ಸಮಸ್ಯೆಇದ್ದಲ್ಲಿ ತಮ್ಮ ಹೆಸರಿನ ಸಹಿತ “ಉದಯವಾಣಿ’ ವಾಟ್ಸಪ್‌ ನಂಬರ್‌ 9148594259 ಬರೆದು ಕಳುಹಿಸಿ.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next