ದೇವನಹಳ್ಳಿ: ಬೇಸಿಗೆ ಪ್ರಾರಂಭವಾಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಬಾರದಂತೆ ವಾಟರ್ ಮೆನ್‌ಗಳು ಎಚ್ಚರ ವಹಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಎಂ.ವೇಣುಗೋಪಾಲ್ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಅಣ್ಣೇಶ್ವರ ಗ್ರಾಪಂ ಕಾರ್ಯಾಲಯದ ಸಭಾಂಗಣದಲ್ಲಿ ಗ್ರಾಪಂ ವ್ಯಾಪ್ತಿಯ ವಾಟರ್‌ವೆುನ್ ಹಾಗೂ ಸ್ವಚ್ಛತಾ ಸಿಬ್ಬಂದಿ ಸಭೆಯಲ್ಲಿ ಮಾತನಾಡಿದರು. ಮನುಷ್ಯನಿಗೆ ಮೂಲ ಸೌಕರ್ಯಗಳಲ್ಲಿ ಕುಡಿವ ನೀರು ಅತೀ ಮುಖ್ಯ. ಯಾವ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ ಎಂಬುವುದರ ಮಾಹಿತಿ ಪಡೆದು ಅದಕ್ಕೆ ಪೂರಕ ಕಾರ್ಯಕ್ರಮ ರೂಪಿಸಬೇಕಿದೆ. ಫೆ.15ರಂದು ಗ್ರಾಪಂ ಸಾಮಾನ್ಯ ಸಭೆ ಇದ್ದು, ಸದಸ್ಯರ ಗಮನಕ್ಕೆ ತಂದು, ಯಾವ ರೀತಿ ಸಮಸ್ಯೆ ಬಗೆಹರಿಸಬೇಕು ಎಂಬುದರ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.
ಸ್ವಚ್ಛತೆ ಮತ್ತು ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಎಲ್ಲಿಯೂ ಸ್ವಚ್ಛತೆ ಸಮಸ್ಯೆ ಬರಬಾರದು. ಹೋಟೆಲ್, ಟೀ ಅಂಗಡಿ ಇತರೆ ಕಡೆ ನಿರ್ದಿಷ್ಟ ಜಾಗದಲ್ಲಿ ಲೋಟ ಹಾಕುವಂತೆ ರೂಢಿಸಬೇಕು. ಕಳೆದ ಮೂರು ವರ್ಷಗಳಿಂದ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಕೊಟ್ಟಿಲ್ಲ. ಈ ಬಾರಿ ಪ್ರತಿಯೊಬ್ಬರಿಗೂ ಮನೆಕೊಡುವ ಕೆಲಸ ಮಾಡಬೇಕಾಗಿದೆ. ವಾಟರ್‌ವೆುನ್ ಮತ್ತು ಸ್ಚಚ್ಛತೆ ಮಾಡುವವರು ಸಮರ್ಪಕವಾಗಿ ಕೆಲಸ ಮಾಡಿದರೆ, ಗ್ರಾಮಗಳು ಮತ್ತಷ್ಟು ಮಾದರಿಯಾಗುತ್ತದೆ ಎಂದು ಸಲಹೆ ಮಾಡಿದರು.
ಗ್ರಾಪಂ ಪಿಡಿಒ ಕುಮಾರ್ ಮಾತನಾಡಿ, ಈ ಹಿಂದೆ ಅಣ್ಣೇಶ್ವರ ಗ್ರಾಪಂ ತಾಲೂಕಿನಲ್ಲಿ ಉತ್ತಮ ಸ್ಥಾನದಲ್ಲಿತ್ತು. ಈಗ ಆ ಪಟ್ಟಿಯಲ್ಲಿಯೇ ಹೆಸರು ಇಲ್ಲದಂತೆ ಆಗಿದೆ. ಹೆಚ್ಚಿನ ಸ್ವಚ್ಛತೆ ಮತ್ತು ಇತರೆ ಕಾರ್ಯಕ್ರಮಗಳನ್ನು ರೂಪಿಸಿ ಮಾದರಿ ಗ್ರಾಪಂ ಮಾಡಬೇಕು. ಮುಂದಿನ ದಿನಗಳಲ್ಲಿ ಪ್ರತಿ ಮನೆಗೆ ಕೊಳವೆ ಕಲ್ಪಿಸುವ ಕೆಲಸ ಮಾಡಲಾಗುತ್ತದೆ. ನೀರಿನ ಪೈಪ್ ಹೊಡೆದುಹೋಗಿ ನೀರು ಪೋಲಾಗದಂತೆ ನೋಡಿಕೊಳ್ಳ ಬೇಕು. ಪೋಲಾಗುತ್ತಿರುವ ಕಡೆಗಳಲ್ಲಿ ವಾಟರ್ ಮೆನ್‌ಗಳು ನಿಗಾವಹಿಸಬೇಕು ಎಂದರು.
ಈ ವೇಳೆಯಲ್ಲಿ ಗ್ರಾಪಂ ಸದಸ್ಯ ಮುನಿಯಪ್ಪ, ಕರವಸೂಲಿಗಾರರಾದ ಪುಷ್ಪಾವತಿ, ತಿಮ್ಮರಾಯಪ್ಪ, ವಾಟರ್‌ವೆುನ್ ನಾರಾಯಣಸ್ವಾಮಿ, ಸಹಾಯಕ ಮುನಿವೆಂಕಟಪ್ಪ, ಸುಷ್ಮಾ ಇದ್ದರು.