Advertisement

ಮಸ್ಕಿ ಪಟ್ಟಣಕ್ಕೆ ಇನ್ಮುಂದೆ ಐದು ದಿನಕ್ಕೊಮ್ಮೆ ಕುಡಿವ ನೀರು

01:21 PM Apr 28, 2022 | Team Udayavani |

ಮಸ್ಕಿ: ತುಂಗಭದ್ರಾ ಎಡದಂಡೆ ನಾಲೆಗೆ ನೀರಿನ ಹರಿವು ಸ್ಥಗಿತವಾಗಿದ್ದು, ಪಟ್ಟಣಕ್ಕೆ ಕುಡಿಯುವ ನೀರಿನ ಬರ ಆವರಿಸಲಿದೆ. ಇದುವರೆಗೂ ಎರಡು ದಿನಕ್ಕೊಮ್ಮೆ ಸರಬರಾಜು ಮಾಡುತ್ತಿದ್ದ ನೀರು ಈಗ ಐದು ದಿನಕ್ಕೊಮ್ಮೆಗೆ ವಿಸ್ತರಣೆಯಾಗಿದೆ.

Advertisement

ಪಟ್ಟಣಕ್ಕೆ ಕೆರೆಯಲ್ಲಿ ಸಂಗ್ರಹಿತ ನೀರೇ ಆಧಾರವಾಗಿದ್ದು, ಉಳಿದಂತೆ ಬೋರ್‌ ವೆಲ್‌ (ಕೊಳವೆಬಾವಿ)ಗಳಿವೆ. ಕೆರೆ ಮಾತ್ರ ಕುಡಿಯುವುದಕ್ಕೆ ಬಳಕೆ ಮಾಡಲಾಗುತ್ತಿದ್ದು, ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬೋರ್‌ ವೆಲ್‌ ನೀರು ಬಳಕೆ ಮಾಡಲಾಗುತ್ತದೆ.

ಬೇಸಿಗೆ ಅವಧಿ ಎದುರಾದರೆ ಕುಡಿಯುವ ನೀರಿನ ಸಮಸ್ಯೆ ಇಲ್ಲಿ ಬಿಗಡಾಯಿಸುವುದು ಸಾಮಾನ್ಯ. ಶಾಶ್ವತ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಗಳು ನಡೆದರೂ ಇದುವರೆಗೂ ಜಾರಿಗೆ ಬಂದಿಲ್ಲ. ಹೀಗಾಗಿ ಈಗ ಇರುವ ಕೆರೆಯೇ ಕುಡಿಯುವ ನೀರಿಗೆ ಆಧಾರವಾಗಿದ್ದು, ಇರುವ ಅಲ್ಪ-ಸ್ವಲ್ಪ ನೀರನ್ನೇ ಬೇಸಿಗೆ ಮೂರು ತಿಂಗಳವರೆಗೂ ನಿರ್ವಹಣೆ ಮಾಡಲು ಪುರಸಭೆ ಹೆಣಗಾಡಬೇಕಿದೆ.

ಹೀಗಿದೆ ಅಂಕಿ-ಸಂಖ್ಯೆ?

ಮಸ್ಕಿ ಪಟ್ಟಣದಲ್ಲಿ 23 ವಾರ್ಡ್‌ಗಳಿದ್ದು, 23,650 ಜನಸಂಖ್ಯೆ ಇದೆ. ಮಸ್ಕಿ ಪ್ರತ್ಯೇಕ ತಾಲೂಕು ಘೋಷಣೆ ಬಳಿಕ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜನಸಂಖ್ಯೆ ಪ್ರಮಾಣವೂ ಏರಿಕೆಯಾಗುತ್ತಿದ್ದು ಈಗ ಇರುವ ನೀರು ಬೆಳೆಯುತ್ತಿರುವ ಜನಸಂಖ್ಯೆಗೆ ಸಾಲುತ್ತಿಲ್ಲ. ಇರುವ ನೀರನ್ನೇ ತಾಳೆ ಹಾಕಿ ಐದು ದಿನಕ್ಕೊಮ್ಮೆ ಹರಿಸಲು ನಿರ್ಧರಿಸಲಾಗಿದೆ.

Advertisement

ಮಸ್ಕಿ ಪಟ್ಟಣದಲ್ಲಿ ಪ್ರತ್ಯೇಕ ಎರಡು ಕೆರೆಗಳಿದ್ದು (ಒಂದು ದೊಡ್ಡದು, ಮತ್ತೂಂದು ಸಣ್ಣದು) 16 ಎಕರೆಯಲ್ಲಿ ದೊಡ್ಡ ಕೆರೆ ವಿಸ್ತಾರವಾಗಿದೆ. 388 ಎಂಎಲ್‌ಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇನ್ನು ಮತ್ತೊಂದು 4 ಎಕರೆಯಲ್ಲಿ ಸಣ್ಣ ಕೆರೆಯಿದ್ದು, 32 ಎಂಎಲ್‌ಡಿ ನೀರಿನ ಸಂಗ್ರಹ ಸಾಮರ್ಥ್ಯವಿದೆ. ಒಟ್ಟು 20 ಎಕರೆ ಕೆರೆಯಲ್ಲಿ 420 ಎಂಎಲ್‌ಡಿ ನೀರಿನ ಸಂಗ್ರಹವಿದ್ದು, ಈಗಿರುವ ಜನಸಂಖ್ಯೆಗೆ ಪ್ರತಿದಿನ 2.81 ಎಂಎಲ್‌ಡಿ ನೀರಿನ ಬೇಡಿಕೆ ಇದೆ. ಈ ಪ್ರಕಾರ ನೀರು ಸರಬರಾಜು ಮಾಡಿದರೆ ಮುಂದಿನ 90 ದಿನಗಳವರೆಗೂ ನೀರಿನ ಸರಬರಾಜು ನಡೆಯಲಿದೆ ಎನ್ನುತ್ತಾರೆ ಪುರಸಭೆಯ ಎಂಜಿನಿಯರ್‌ ಪ್ರವೀಣ್‌ಕುಮಾರ್‌ ಸಾಗರ.

ಕೊರತೆ ಶತಸಿದ್ಧ: ಪ್ರತಿ ಬೇಸಿಗೆಯಲ್ಲೂ ಕಾಲುವೆಗೆ ನೀರಿನ ಹರಿಸುವ ಸ್ಥಗಿತದ ಬಳಿಕ ಮಸ್ಕಿ ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವ ಸರ್ವೇ ಸಾಮಾನ್ಯವಾಗಿದೆ. ಪುರಸಭೆ ಎಷ್ಟೇ ತಾಳೆ ಹಾಕಿ ಲೆಕ್ಕ ಹಾಕಿದರೂ ಈ ಬಾರಿಯೂ ಕುಡಿಯುವ ನೀರಿನ ಸಮಸ್ಯೆಯಾಗಲಿದೆ ಎನ್ನುತ್ತಾರೆ ಇಲ್ಲಿನ ನಾಗರಿಕರು.

ಇದುವರೆಗೆ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿದ್ದಾಗಲೂ ಗಾಂಧಿನಗರದ ಮೂರು ವಾರ್ಡ್‌ಗಳು ಸೇರಿ ಕೆಲವು ಕಡೆ ನೀರಿನ ಅಭಾವ ಎದುರಾಗುತ್ತಿತ್ತು. ಈಗ ಐದು ದಿನಕ್ಕೊಮ್ಮೆ ನೀರು ಬಿಡುವ ನಿರ್ಧಾರ ಕೈಗೊಂಡಿದ್ದು, ಜನರು ಜೀವಜಲಕ್ಕೆ ಪರದಾಡುವಂತಹ ಸನ್ನಿವೇಶ ಉಂಟು ಮಾಡಿದೆ.

ಮಸ್ಕಿ ಪಟ್ಟಣದಲ್ಲಿ ಕುಡಿವ ನೀರು ಅಭಾವ ತಪ್ಪಿಸಲು ಈಗಿನಿಂದಲೇ ಪ್ಲ್ಯಾನ್‌ ಹಾಕಿಕೊಳ್ಳಲಾಗಿದೆ. ಈಗ ಸಂಗ್ರಹಿತ ನೀರು ಮುಂದಿನ ಮೂರು ತಿಂಗಳು ಬೇಸಿಗೆ ಅವಧಿಗೆ ನಿರ್ವಹಣೆ ಮಾಡಲಾಗುತ್ತದೆ. ಇದಕ್ಕಾಗಿ ಐದು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲು ತೀರ್ಮಾನಿಸಲಾಗಿದೆ. -ಪ್ರವೀಣ್‌ ಕುಮಾರ ಸಾಗರ, ಜೆಇ ಪುರಸಭೆ ಮಸಿ­ಮಲ್ಲಿಕಾರ್ಜುನ ಚಿಲ್ಕರಾಗಿ­

-ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next