ಬೈಂದೂರು: ಬೈಂದೂರು ಕ್ಷೇತ್ರದಲ್ಲಿ ಬಹುನಿರೀಕ್ಷಿತ ಯೋಜನೆಯಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಕಾರದಿಂದ ಸುಮಾರು 59,000 ಮನೆಗಳಿಗೆ ಗಂಗೆ ಎನ್ನುವಂತೆ ಕುಡಿಯುವ ನೀರಿನ ಸರಬರಾಜು ಆಗಲಿದೆ. ಸುಮಾರು 505 ಕೋ. ರೂ. ವೆಚ್ಚದಲ್ಲಿ ನದಿ ನೀರನ್ನು ಶುದ್ಧೀಕರಿಸಿ ಶುದ್ಧ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಐ.ಟಿ.ಐ. ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಬೈಂದೂರಿನಲ್ಲಿ ಶೈಕ್ಷಣಿಕ ಅಭಿವೃದ್ಧಿಯ ಉದ್ದೇಶದಿಂದ ಐ.ಟಿ.ಐ. ಕಾಲೇಜು ಸ್ಥಾಪನೆಗೆ ಸರಕಾರದ ಮಟ್ಟದಲ್ಲಿ ಕಡತ ಗಳನ್ನು ಶೀಘ್ರ ವಿಲೇವಾರಿ ಮಾಡಿ ಮೂರು ಎಕರೆ ಜಾಗ ಮಂಜೂರು ಮಾಡಲಾಗಿದೆ. ಟಾಟಾ ಸಂಸ್ಥೆಯ ಸಹಯೋಗದೊಂದಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಐ.ಟಿ.ಐ. ಕಾಲೇಜು ಬೈಂದೂರಿನಲ್ಲಿ ನಿರ್ಮಾಣವಾಗಲಿದೆ. ಕಟ್ಟಡ ನಿರ್ಮಾಣಕ್ಕೆ 2 ಕೋ.ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದರು.
ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಮಾತನಾಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಬೈಂದೂರು ಕ್ಷೇತ್ರದ ಬಗ್ಗೆ ವಿಶೇಷ ಮಮತೆ ಇದೆ. ಬಿ.ವೈ. ರಾಘವೇಂದ್ರ ಇಲ್ಲಿನ ಸಂಸದರಾಗಿರುವುದು ಕ್ಷೇತ್ರದ ಅಭಿವೃದ್ಧಿಗೆ ಹೊಸ ಶಕ್ತಿ ದೊರೆತಂತಾಗಿದೆ. ಬೈಂದೂರು ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಕಾರ್ಯಗಳು ಈ ಸಮಯದಲ್ಲಿ ಸಾಕಾರಗೊಂಡಿವೆ. 1 ಸಾವಿರ ಕೋ.ರೂ.ಗೂ ಅಧಿಕ ವೆಚ್ಚದ ಕಾಮಗಾರಿಗಳು ಪ್ರಗತಿಯ ಹಂತದಲ್ಲಿದೆ. 59,000 ಕುಟುಂಬಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರಕಿಸುವ ಮೂಲಕ ಸಂಸದ ಬಿ.ವೈ. ರಾಘವೇಂದ್ರ ಬೈಂದೂರಿನ ಪಾಲಿಗೆ ಆಧುನಿಕ ಭಗೀರಥರಾಗಿದ್ದಾರೆ ಎಂದರು.
ಮುಖ್ಯಮಂತ್ರಿಗಳ ಇಲಾಖಾ ಕಾರ್ಯ ದರ್ಶಿ ಸೆಲ್ವಂ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಒಟ್ಟು 1,111 ಐ.ಟಿ.ಐ. ಕಾಲೇಜುಗಳಿವೆ. 190 ಅನುದಾನಿತ ಐ.ಟಿ.ಐ. ಕಾಲೇಜುಗಳಿವೆ ಹಾಗೂ 270 ಸರಕಾರಿ ಐ.ಟಿ.ಐ. ಕಾಲೇಜುಗಳಿವೆ. ಅವುಗಳಲ್ಲಿ 150 ಐ.ಟಿ.ಐ. ಕಾಲೇಜುಗಳನ್ನು ಟಾಟಾ ಸಂಸ್ಥೆಯ ಸಹಯೋಗದೊಂದಿಗೆ ಉನ್ನತೀಕರಣ ಗೊಳಿಸಲಾಗುತ್ತದೆ. ಅವುಗಳಲ್ಲಿ ಬೈಂದೂರು ಐ.ಟಿ.ಐ. ಕಾಲೇಜು ಕೂಡ ಆಯ್ಕೆಯಾಗಿರುವುದರ ಹಿಂದೆ ಸಂಸದ ಬಿ.ವೈ. ರಾಘವೇಂದ್ರ ಅವರ ವಿಶೇಷ ಪರಿಶ್ರಮವಿದೆ. ಆರು ತಿಂಗಳುಗಳ ಒಳಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ ಎಂದರು.
ಈ ಕಾರ್ಯಕ್ರಮಕ್ಕಿಂತ ಮೊದಲು ಬೈಂದೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಕಾಮಗಾರಿ ಪರಿಶೀಲಿಸಿದರು ಮತ್ತು ಟ್ರೀ ಪಾರ್ಕ್ ಹಾಗೂ ಇಕೋ ಕಾರಿಡಾರ್ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ರಾಜಪ್ಪ, ಸಹಾಯಕ ಕಮಿಷನರ್ ರಾಜು, ಜಿ.ಪಂ. ಸದಸ್ಯ ಬಾಬು ಶೆಟ್ಟಿ, ಶಂಕರ ಪೂಜಾರಿ, ಸುರೇಶ್ ಬಟ್ವಾಡಿ, ಬೈಂದೂರು ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಮಾಲಿನಿ. ಕೆ., ತಾ.ಪಂ ಸದಸ್ಯೆ ಸುಜಾತಾ ದೇವಾಡಿಗ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಘು ನಾಯ್ಕ ಉಪಸ್ಥಿತರಿದ್ದರು.
ಬೈಂದೂರು ಕೈಗಾರಿಕೆ ತರಬೇತಿ ಸಂಸ್ಥೆಯ ಪ್ರಾಂಶು ಪಾಲ ಜಗದೀಶ ಸ್ವಾಗತಿಸಿ, ಶಿಕ್ಷಕ ಗಣಪತಿ ಹೋಬಳಿ ದಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.